Advertisement

ರಣಜಿ ದಾಖಲೆ: 73 ರನ್‌ ಗುರಿ ನೀಡಿ ಗೆದ್ದ ವಿದರ್ಭ

10:04 PM Jan 19, 2023 | Team Udayavani |

ನಾಗ್ಪುರ: ಭಾರತದ ಪ್ರಥಮದರ್ಜೆ ಕ್ರಿಕೆಟ್‌ ಇತಿಹಾಸದಲ್ಲಿ ತಂಡವೊಂದು ಅತೀ ಕಡಿಮೆ ಮೊತ್ತವನ್ನು ಉಳಿಸಿಕೊಂಡು ಜಯ ಸಾಧಿಸಿದ ನಿದರ್ಶನವೊಂದು ದಾಖಲಾಗಿದೆ. ಈ ಹೆಗ್ಗಳಿಕೆಗೆ ಪಾತ್ರವಾದ ತಂಡ ವಿದರ್ಭ.

Advertisement

ನಾಗ್ಪುರದಲ್ಲಿ ಆಡಲಾದ ಡಿ ವಿಭಾಗದ ರಣಜಿ ಟ್ರೋಫಿ ಪಂದ್ಯದಲ್ಲಿ ವಿದರ್ಭ ವಿರುದ್ಧ ಗುಜರಾತ್‌ ಕೇವಲ 73 ರನ್‌ ಗೆಲುವಿನ ಗುರಿ ಪಡೆದಿತ್ತು. ಗುಜರಾತ್‌ ಸುಲಭದಲ್ಲಿ ಗೆಲ್ಲಬಹುದೆಂಬುದು ಎಲ್ಲರ ಲೆಕ್ಕಾಚಾರವಾಗಿತ್ತು. ಆದರೆ ಎಡಗೈ ಸ್ಪಿನ್ನರ್‌ ಆದಿತ್ಯ ಸರ್ವಟೆ ಅವರ ಮಾರಕ ಬೌಲಿಂಗ್‌ ದಾಳಿಗೆ ತತ್ತರಿಸಿದ ಗುಜರಾತ್‌ 54 ರನ್ನುಗಳಿಗೆ ಸರ್ವಪತನ ಕಂಡು 18 ರನ್ನುಗಳ ನಂಬಲಾಗದ ಸೋಲಿಗೆ ತುತ್ತಾಯಿತು. ಸರ್ವಟೆ ಸಾಧನೆ 17 ರನ್ನಿಗೆ 6 ವಿಕೆಟ್‌. ಮೊದಲ ಇನಿಂಗ್ಸ್‌ನಲ್ಲಿ ಸರ್ವಟೆ 5 ವಿಕೆಟ್‌ ಬೇಟೆಯಾಡಿದ್ದರು.

ಇದು ಭಾರತೀಯ ರಣಜಿ ಹಾಗೂ ಪ್ರಥಮದರ್ಜೆ ಕ್ರಿಕೆಟ್‌ ಚರಿತ್ರೆಯಲ್ಲಿ ತಂಡವೊಂದು ಅತೀ ಕಡಿಮೆ ಮೊತ್ತವನ್ನು ಉಳಿಸಿಕೊಂಡು ಗೆದ್ದು ಬಂದ ದಾಖಲೆಯಾಗಿದೆ. ಜಮ್ಶೆಡ್‌ಪುರದಲ್ಲಿ ನಡೆದ 1948-49ರ ದಿಲ್ಲಿ ವಿರುದ್ಧದ ರಣಜಿ ಪಂದ್ಯದಲ್ಲಿ ಬಿಹಾರ 78 ರನ್‌ ಉಳಿಸಿಕೊಂಡದ್ದು ಈವರೆಗಿನ ದಾಖಲೆಯಾಗಿತ್ತು.

ಪಂದ್ಯ ಸಾಗಿದ ರೀತಿ: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ವಿದರ್ಭ 74 ರನ್ನಿಗೆ ಕುಸಿಯಿತು. ಗುಜರಾತ್‌ 256 ರನ್‌ ಪೇರಿಸಿತು. 182 ರನ್‌ ಹಿನ್ನಡೆಗೆ ಸಿಲುಕಿದ ವಿದರ್ಭ ದ್ವಿತೀಯ ಸರದಿಯಲ್ಲಿ ಉತ್ತಮ ಹೋರಾಟವೊಂದನ್ನು ಪ್ರದರ್ಶಿಸಿ 254 ರನ್‌ ಗಳಿಸಿತು. ಆದರೆ ಗುಜರಾತ್‌ಗೆ 73 ರನ್‌ ಮಾಡಿ ಗೆದ್ದು ಬರಲು ಸಾಧ್ಯವಾಗಲಿಲ್ಲ. ಅದು 33.3 ಓವರ್‌ಗಳಲ್ಲಿ 54 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತು. ಎರಡಂಕೆಯ ಮೊತ್ತ ದಾಖಲಿಸಿದ್ದು 3ನೇ ಕ್ರಮಾಂಕದಲ್ಲಿ ಆಡಲಿಳಿದ ಸಿದ್ಧಾರ್ಥ್ ದೇಸಾಯಿ ಮಾತ್ರ (18).

ಈ ಪಂದ್ಯದ ಮೊದಲ ದಿನ 15 ವಿಕೆಟ್‌, ದ್ವಿತೀಯ ದಿನ 16 ವಿಕೆಟ್‌ ಉರುಳಿತ್ತು. ಇನ್ನೊಂದು ತಿಂಗಳಲ್ಲಿ ಇದೇ ಅಂಗಳದಲ್ಲಿ ಭಾರತ-ಆಸ್ಟ್ರೇಲಿಯ ನಡುವೆ ಟೆಸ್ಟ್‌ ಪಂದ್ಯ ನಡೆಯಲಿಕ್ಕಿದೆ. ಪಿಚ್‌ ಹೇಗೆ ವರ್ತಿಸಲಿದೆ ಎಂಬುದೀಗ ಬಿಸಿಸಿಐ ಪಾಲಿಗೆ ಚಿಂತೆಯ ಸಂಗತಿ ಆಗಿರಲಿಕ್ಕೂ ಸಾಕು!

Advertisement
Advertisement

Udayavani is now on Telegram. Click here to join our channel and stay updated with the latest news.

Next