Advertisement

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

01:21 AM Apr 27, 2024 | Team Udayavani |

ಬಳ್ಳಾರಿ: ಗಣಿನಾಡು ಬಳ್ಳಾರಿ ಲೋಕಸಭೆ ಎಸ್‌ಟಿ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌-ಬಿಜೆಪಿ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಕಳೆದ ವಿಧಾನಸಭೆ ಚುನಾವಣೆ ಸೋಲಿನಿಂದ ಕಂಗೆಟ್ಟಿರುವ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲುಗೆ ಲೋಕಸಮರದ ಗೆಲುವು ಅನಿವಾರ್ಯವಾದರೆ, ಎರಡು ದಶಕಗಳಿಂದ “ಕೈ’ ತಪ್ಪಿರುವ ಲೋಕಸಭೆ ಕ್ಷೇತ್ರವನ್ನು ವಶಪಡಿಸಿಕೊಂಡು ತನ್ನ ಕೋಟೆಯನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಬೇಕೆಂಬ ತವಕ ಕಾಂಗ್ರೆಸ್‌ನದ್ದಾಗಿದೆ.

Advertisement

ಗಣಿನಾಡು ಬಳ್ಳಾರಿ ಜಿಲ್ಲೆಯ ರಾಜಕೀಯ ಇತಿಹಾಸವೇ ಒಂದು ರೋಚಕ. ಕೈ-ಕಮಲ ಪಕ್ಷಗಳ ರಾಷ್ಟ್ರೀಯ ನಾಯಕರು ಸಹ ಬಳ್ಳಾರಿ ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ದೇಶದ ಗಮನ ಸೆಳೆದಿದೆ. ಲೋಕಸಭೆಗೆ ಈವರೆಗೆ ನಡೆದ ಒಟ್ಟು 17 ಸಾರ್ವತ್ರಿಕ ಚುನಾವಣೆಗಳ ಪೈಕಿ 12ರಲ್ಲಿ ಅಂದರೆ ಸುಮಾರು ಅರ್ಧ ಶತಮಾನ ಕಾಂಗ್ರೆಸ್‌ ಗೆದ್ದು ಬಳ್ಳಾರಿಯನ್ನು ತನ್ನ ಭದ್ರಕೋಟೆಯಾಗಿಸಿಕೊಂಡಿತ್ತು. 1999ರ ಸಾರ್ವತ್ರಿಕ ಚುನಾವಣೆಯಲ್ಲಿ ಸೋನಿಯಾ ಗಾಂಧಿ ವಿರುದ್ಧ ಸುಷ್ಮಾ ಸ್ವರಾಜ್‌ ಸ್ಪರ್ಧೆಯಿಂದ ಜಿಲ್ಲೆಯಲ್ಲಿ ನೆಲೆಯೂರಿದ ಕಮಲ ಪಕ್ಷ 2004ರಿಂದ 2019ರ ವರೆಗೆ ಸತತ ನಾಲ್ಕು ಚುನಾವಣೆಗಳಲ್ಲಿ ಗೆಲ್ಲುತ್ತಲೇ ಬಂದಿದೆಯಾದರೂ, ಯಾರೊಬ್ಬರೂ ಎರಡನೇ ಬಾರಿಗೆ ಸ್ಪರ್ಧಿಸಲು ಅವಕಾಶ ಸಿಕ್ಕಿಲ್ಲ. ಕಳೆದ 2019ರಲ್ಲಿ ಬಿಜೆಪಿಯ ವೈ.ದೇವೇಂದ್ರಪ್ಪ ಸ್ಪರ್ಧಿಸಿ ಗೆದ್ದಿದ್ದರು. ಸದ್ಯ ಅವರಿಗೆ ಟಿಕೆಟ್‌ ಕೈತಪ್ಪಿದ್ದು, 2014ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದ ಹಾಲಿ ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಇದೀಗ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.

ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್‌

2019ರಲ್ಲಿ ಬಳ್ಳಾರಿ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರಗಳ ಪೈಕಿ ಆರರಲ್ಲಿ ಕಾಂಗ್ರೆಸ್‌ ಶಾಸಕರಿದ್ದು, ಕೇವಲ ಎರಡು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರು. ಈ ಬಾರಿಯೂ ಅದೇ ಮುಂದುವರಿದಿದ್ದು, 6 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರು, ಕೇವಲ ಎರಡು ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್‌ ಮೈತ್ರಿ ಪಕ್ಷಗಳ ಶಾಸಕರಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌-ಬಿಜೆಪಿ ನೇರ ಫೈಟ್‌ ಎದುರಿಸಿ ಮೋದಿ ಅಲೆಯಲ್ಲಿ ಗೆಲುವು ಸಾಧಿಸಿದ್ದ ಕಮಲ ಪಕ್ಷ, ಈ ಬಾರಿ ಜೆಡಿಎಸ್‌ ಜತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿದೆ. ಮುಖ್ಯವಾಗಿ ಬಿಜೆಪಿ ಬೆಂಬಲಿತ ಮತದಾರರಿರುವ ಹಗರಿಬೊಮ್ಮನಹಳ್ಳಿ ಕ್ಷೇತ್ರದಲ್ಲಿ ಮೈತ್ರಿ ಪಕ್ಷ ಜೆಡಿಎಸ್‌ ಶಾಸಕರಿರುವುದು ಕಮಲ ಪಕ್ಷಕ್ಕೆ ಒಂದಷ್ಟು ಅನುಕೂಲವಾಗುವ ಸಾಧ್ಯತೆಯಿದೆ.

ಶ್ರೀರಾಮುಲು-ತುಕಾರಾಮ ಸ್ಪರ್ಧೆ

Advertisement

ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಬಿ.ಶ್ರೀರಾಮುಲು, ಸಂಡೂರು ಶಾಸಕ ಈ.ತುಕಾರಾಮ್‌ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. 2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡಿರುವ ಶ್ರೀರಾಮುಲುಗೆ ಲೋಕಸಮರದ ಗೆಲುವು ಅನಿವಾರ್ಯವಾಗಿದೆ. 2014ರಿಂದ 2018ರ ವರೆಗೆ ಲೋಕಸಭೆ ಸದಸ್ಯರಾಗಿದ್ದರೂ ಕ್ಷೇತ್ರಕ್ಕೆ ತಂದಿರುವ ತಮ್ಮ ಕೊಡುಗೆಗಳನ್ನು ಎಲ್ಲೂ ಪ್ರಸ್ತಾವಿಸದ ಶ್ರೀರಾಮುಲು ವಿಧಾನಸಭೆ ಸೋಲಿನ ಅನುಕಂಪ ಗಿಟ್ಟಿಸಿಕೊಳ್ಳಲು ಮುಂದಾಗಿದ್ದಾರೆ. ಜತೆಗೆ ಮೋದಿ ಅಲೆ, ವಾಲ್ಮೀಕಿ ಸಮುದಾಯದ ದೊಡ್ಡ ಮಾಸ್‌ ಲೀಡರ್‌ ಎಂಬುದೇ ಇವರ ಪ್ರಚಾರದ ಪ್ರಮುಖ ಅಸ್ತ್ರಗಳಾಗಿವೆ.

ಇನ್ನು ಕಾಂಗ್ರೆಸ್‌ ಅಭ್ಯರ್ಥಿ ಈ.ತುಕಾರಾಮ್‌, 2008ರಿಂದ ಸತತ ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಎಂ.ಕಾಂ. ಪದವೀಧರ, ಉತ್ತಮ ವಾಗ್ಮಿ ಆಗಿದ್ದು, ಯಾವುದೇ ಅಕ್ರಮಗಳ ಆರೋಪಗಳು ಇವರ ಮೇಲಿಲ್ಲ. “ಕ್ಲೀನ್‌ ಹ್ಯಾಂಡ್‌’ ಎಂಬ ಹಣೆಪಟ್ಟಿ ಹೊಂದಿದ್ದಾರೆ. ಬಿಜೆಪಿ, ಮೋದಿ, ಶ್ರೀರಾಮುಲು ವಿರುದ್ಧ ಮಾತನಾಡುವುದು, ಕಾಂಗ್ರೆಸ್‌ ಗ್ಯಾರಂಟಿ, ಕೇಂದ್ರದಲ್ಲಿ ಯುಪಿಎ 1, 2 ಸರಕಾರದ ಯೋಜನೆಗಳೇ ಇವರ ಪ್ರಚಾರದ ಪ್ರಮುಖ ಅಸ್ತ್ರಗಳಾಗಿವೆ.

ಜಾತಿ ಲೆಕ್ಕಾಚಾರ: ಲೋಕಸಭೆ ಕ್ಷೇತ್ರದಲ್ಲಿ ಲಿಂಗಾಯತ, ಕುರುಬ, ವಾಲ್ಮೀಕಿ, ದಲಿತ, ಅಲ್ಪಸಂಖ್ಯಾಕ ಮತಗಳು ಪ್ರಮುಖವಾಗಿವೆ. ಎಸ್‌ಟಿ ಮೀಸಲು ಕ್ಷೇತ್ರವಾದ್ದರಿಂದ ವಾಲ್ಮೀಕಿ ಮತಗಳು ವಿಭಜನೆಯಾಗುವ ಸಾಧ್ಯತೆಯಿದೆ. ಲಿಂಗಾಯತ ಮತಗಳು ಬಿಜೆಪಿ ಬೆಂಬಲಿಸಿದರೆ; ಕುರುಬ, ದಲಿತ, ಅಲ್ಪಸಂಖ್ಯಾಕ ಮತಗಳು ಕಾಂಗ್ರೆಸ್‌ ಬೆಂಬಲಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಕಳೆದ ಚುನಾವಣೆಯಂತೆ ಈ ಚುನಾವಣೆಯಲ್ಲಿ ಮತದಾರರು ಗುಟ್ಟು ಬಿಟ್ಟುಕೊಡದ ಹಿನ್ನೆಲೆಯಲ್ಲಿ ಫಲಿತಾಂಶ ಹೊರಬೀಳುವ ತನಕ ಕಾಯಲೇಬೇಕಾಗಿದೆ.

ಬಿ. ಶ್ರೀರಾಮುಲು  ಸಾಮರ್ಥ್ಯ
ಕಳೆದ ವಿಧಾನಸಭೆ ಸೋಲಿನ ಅನುಕಂಪ
ವಾಲ್ಮೀಕಿ ಸಮುದಾಯದ ದೊಡ್ಡ ಮಾಸ್‌ ಲೀಡರ್‌
ಮೋದಿ ಅಲೆ, ವೈಯಕ್ತಿಕ ವರ್ಚಸ್ಸು

ಪ್ರಧಾನಿ ಮೋದಿಯವರ 10 ವರ್ಷಗಳ ಸಾಧನೆ, ಮುಂದಿನ ಐದು ವರ್ಷಗಳಲ್ಲಿ ಆಗಬಹುದಾದ ಅಭಿವೃದ್ಧಿಯ ನೀಲನಕ್ಷೆ ಜತೆ ಜನರ ಬಳಿಗೆ ಹೋಗುತ್ತಿದ್ದೇವೆ. ದೇಶದಲ್ಲಿ ರೋಡ್‌, ರೈಲ್‌ ಕನೆಕ್ಟಿ ವಿಟಿಗೆ ಆದ್ಯತೆ ನೀಡಲಾಗಿದೆ.

– ಬಿ. ಶ್ರೀರಾಮುಲು

ಈ. ತುಕಾರಾಂ  ಸಾಮರ್ಥ್ಯ
ಸಂಡೂರಿನಿಂದ ಸತತ 4 ಬಾರಿ ಶಾಸಕರಾಗಿ ಆಯ್ಕೆ
ಯಾವುದೇ ಕಪ್ಪುಚುಕ್ಕೆರಹಿತ ವ್ಯಕ್ತಿ
ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳು

ರಾಜ್ಯ ಸರಕಾರದ 5 ಗ್ಯಾರಂಟಿ ಯೋಜನೆ ಗಳೇ ಜಯ ತಂದು ಕೊಡುತ್ತವೆ. ನಾವು ನುಡಿದಂತೆ ನಡೆದಿದ್ದೇವೆ. ಕೇಂದ್ರದಲ್ಲೂ ಯುಪಿಎ ಸರಕಾರದ ಅವಧಿಯಲ್ಲಿ ನರೇಗಾ ಸೇರಿ ಹಲವಾರು ಜನಪರ ಯೋಜನೆ ಜಾರಿಗೆ ತಂದಿದ್ದೇವೆ.
-ಈ. ತುಕಾರಾಂ

*ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next