Advertisement

2024ರ ಲೋಕಸಭಾ ಚುನಾವಣೆಯಲ್ಲೂ ಗೆಲುವು: ಸಿದ್ದರಾಮಯ್ಯ

09:15 PM Jun 10, 2023 | Team Udayavani |

ಮೈಸೂರು: 2024ರ ಲೋಕಸಭಾ ಚುನಾವಣೆಯಲ್ಲೂ ನಾವು ಗೆಲ್ಲುತ್ತೇವೆ. ಕೇಂದ್ರದಲ್ಲೂ ಅಧಿಕಾರಕ್ಕೆ ಬರುತ್ತೇವೆ. ಆಗ ಪೆಟ್ರೋಲ್‌ ಡೀಸೆಲ್‌ ಅಡುಗೆ ಅನಿಲ, ರಸಗೊಬ್ಬರ ಬೆಲೆಗಳನ್ನು ಇಳಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ವರುಣಾ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲೂಕಿನ ಬಿಳಿಗೆರೆಯಲ್ಲಿ ಶನಿವಾರ  ನಡೆದ ಬೃಹತ್‌ ಕೃತಜ್ಞತಾ ಸಮರ್ಪಣಾ ಸಭೆಯನ್ನುದ್ದೇಶಿಸಿ ಮಾತನಾಡಿ, ಬಡವರ, ಮಧ್ಯಮವರ್ಗದವರ ಸಂಕಷ್ಟ ಕಡಿಮೆ ಮಾಡಲು ನಾವು ಜಾರಿಗೆ ತಂದ ಯೋಜನೆಗಳನ್ನು, ಅವರಿಗಾ-ಇವರಿಗಾ ಎನ್ನುವ ಗೊಂದಲ ಸೃಷ್ಟಿಸುತ್ತಾರೆ. ನೀವು ಗೊಂದಲಕ್ಕೆ ಒಳಗಾಗಬೇಡಿ. ಯೋಜನೆಗಳ ಅನುಕೂಲ ಪಡೆಯಿರಿ ಎಂದು ಹೇಳಿದರು.

ಇದು ನನ್ನ ಕೊನೇ ಚುನಾವಣೆ ಆಗಿದೆ. ಆದರೆ ನಾನು ಉಸಿರು ಇರುವವರೆಗೂ ಸಕ್ರಿಯ ರಾಜಕಾರಣದಲ್ಲಿದ್ದು ಜನರ ಸೇವೆಯನ್ನು ಮುಂದುವರಿಸುತ್ತೇನೆ ಎಂದರು. ಗಗನಕ್ಕೇರಿರುವ ರಸಗೊಬ್ಬರ ಬೆಲೆಯನ್ನು ಕಡಿಮೆ ಮಾಡಿ ಎಂದು ಸಭೆಯಲ್ಲಿದ್ದ ರೈತರು ಕೂಗಿದರು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು, ರಸಗೊಬ್ಬರ ಬೆಲೆ ಏರಿಸಿರುವುದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ. ಬೆಲೆ ಇಳಿಸಬೇಕಾಗಿರುವುದೂ ಮೋದಿ ಸರ್ಕಾರವೇ. ಆದರೆ ಅವರು ಬೆಲೆ ಇಳಿಸಲ್ಲ. ನಾವು 2024 ರ ಲೋಕಸಭಾ ಚುನಾವಣೆಯಲ್ಲೂ ಗೆಲ್ಲುತ್ತೇವೆ. ಆಗ  ಬೆಲೆಗಳನ್ನು ಇಳಿಸುತ್ತೇವೆ ಎಂದರು. ಆಗ ನೆರೆದಿದ್ದ ಜನ, ನೀವು ಪ್ರಧಾನಿ ಆಗಬೇಕು ಎಂದು ಮುಗಿಲು ಮುಟ್ಟುವಂತೆ ಕೂಗಿದರು.

ವರುಣ ತಾಲೂಕು ಕೇಂದ್ರವಾಗಬೇಕೆಂದು ಜನರು ಕೇಳಿಲ್ಲ

ಮೈಸೂರು: ಮೈಸೂರು ಜಿಲ್ಲೆಯಲ್ಲಿ  ವರುಣ ತಾಲೂಕು ಕೇಂದ್ರವಾಗಬೇಕೆಂದು ಜನರು ಕೇಳಿಲ್ಲ ಎಂದು ವರುಣ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಸಿಎಂ ಸಿದ್ದರಾಮಯ್ಯ ತಿಳಿಸಿದರು. ಸುತ್ತೂರಿನ ಹೆಲಿಪ್ಯಾಡ್‌ನಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು,   ಬಸವರಾಜ ಬೊಮ್ಮಾಯಿ ನಾವು ಅಧಿಕಾರಕ್ಕೆ  ಬಂದರೆ ವರುಣ ಕ್ಷೇತ್ರವನ್ನು ತಾಲೂಕು ಮಾಡುತ್ತೇವೆ ಎಂದು ಹೇಳಿದ್ದರು. ಇದನ್ನು ಜನ ಕೇಳಿಲ್ಲ. ವರುಣ ಕ್ಷೇತ್ರದಲ್ಲಿ ನಾನು ಮೂರು ದಿನ ಪ್ರಚಾರ ಮಾಡಿದ್ದೇನೆ. ಎಲ್ಲಿಯೂ ಜನ  ಕೇಳಿಲ್ಲ.  ಬೊಮ್ಮಾಯಿ ಕೇಳಿದ ತಕ್ಷಣ ಇದನ್ನು  ಮಾಡುವುದಿಲ್ಲ. ವರುಣ ಕ್ಷೇತ್ರದ ಜನರು ಕೇಳಿದರೆ ಮಾಡುತ್ತೇವೆ ಎಂದರು.

Advertisement

ಬಿಜೆಪಿ ಅಧಿಕಾರದಲ್ಲಿದ್ಧಾಗ ತಮಗೆ ಬೇಕಾದವರಿಗೆ  ಭೂಮಿ ನೀಡಿರುವ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡರಿಗೆ ಮಾಹಿತಿ ಸಂಗ್ರಹಿಸಲು ತಿಳಿಸಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಮುಖ್ಯಮಂತ್ರಿಗಳು ಉತ್ತರಿಸಿದರು.

200 ಯೂನಿಟ್‌ ವಿದ್ಯುತ್‌ನ್ನು ಎಲ್ಲರೂ ತೆಗೆದುಕೊಳ್ಳಲೇಬೇಕು ಎಂದು ಕಡ್ಡಾಯವಿಲ್ಲ. ತೆಗೆದುಕೊಳ್ಳುವವರು ಪಡೆಯಬಹುದು. ಬೇಡ ಎನ್ನುವವರು ಬಿಲ್‌ ಹಣ ಕಟ್ಟಬಹುದು. ಒಂದು ವರ್ಷದಲ್ಲಿ ಬಳಕೆ ಮಾಡುವ ಯೂನಿಟ್‌ಗಳ ಸರಾಸರಿ ಆಧರಿಸಿ ಶೇ.10  ವಿದ್ಯುತ್‌ ಉಚಿತವಾಗಿ ನೀಡಲಾಗುವುದು. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ನ್ಯಾಯಯುತವಾಗಿ ಬರಬೇಕಿರುವ ಎಲ್ಲವನ್ನೂ ಒತ್ತಾಯಪೂರ್ವಕವಾಗಿ ಪಡೆದುಕೊಳ್ಳುವ ಪ್ರಯತ್ನ ಮಾಡಲಾಗುವುದು. -ಸಿದ್ದರಾಮಯ್ಯ, ಮುಖ್ಯಮಂತ್ರಿ

ಜೀರೋ ಟ್ರಾಫಿಕ್‌ ಕೊಟ್ಟಿದ್ದಕ್ಕೆ ಸಿದ್ದು ಗರಂ

ಮೈಸೂರು: ಮುಖ್ಯಮಂತ್ರಿಯಾಗಿರುವ ನನಗೆ ಜೀರೋ ಟ್ರಾಫಿಕ್‌ ಬೇಡ ಎಂದಿದ್ದೆ. ಆದರೂ, ಜೀರೋ ಟ್ರಾಫಿಕ್‌ ಏಕೆ ಕೊಟ್ಟಿದ್ದೀರಿ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಮೈಸೂರು ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌  ಅವರ ವಿರುದ್ಧ ಗರಂ ಆದರು. ಮುಖ್ಯಮಂತ್ರಿಯಾದ ನಂತರ ಮೈಸೂರಿಗೆ ಆಗಮಿಸಿದ ಸಿದ್ದರಾಮಯ್ಯ ಅವರಿಗೆ ಶಿಷ್ಟಾಚಾರದಂತೆ ಪೊಲೀಸರು ಜೀರೋ ಟ್ರಾಫಿಕ್‌ ನೀಡಿದ್ದರು. ಮೈಸೂರಿನ ಮಂಡಕಳ್ಳಿ ವಿಮಾನನಿಲ್ದಾಣದಿಂದ ಜಿಲ್ಲಾ ಪಂಚಾಯಿತಿ ಆವರಣದವರೆಗೂ ಜೀರೋ ಟ್ರಾಫಿಕ್‌ ನೀಡಲಾಗಿತ್ತು. ಇದರಿಂದ ಸಿದ್ದರಾಮಯ್ಯ ಗರಂ ಆದರು.  ನಾನು ಜೀರೋ ಟ್ರಾಫಿಕ್‌ ಬೇಡ ಎಂದಿದ್ದೆ. ಆದರೂ, ಏಕೆ ಮಾಡಿದ್ದೀರಿ? ಎಂದು  ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌ ಅವರನ್ನು ಸಿದ್ದರಾಮಯ್ಯ ಪ್ರಶ್ನಿಸಿದರು. ಆಗ ಪೊಲೀಸ್‌ ಆಯುಕ್ತರು ಮೌನಕ್ಕೆ ಶರಣಾದರು. ಜೀರೋ ಟ್ರಾಫಿಕ್‌ ಮಾಡಬೇಡಿ ಎಂದು ಸಿದ್ದರಾಮಯ್ಯ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next