ಚಿತ್ತಾಪುರ: ಮಾರಕವಾದ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ತೆಗೆದುಕೊಂಡಿದ್ದರಿಂದ ರೈತರ ಹೋರಾಟಕ್ಕೆ ಜಯ ಸಿಕ್ಕಂತಾಗಿದೆ ಎಂದು ಸಿಪಿಐಎಂ ರಾಜ್ಯ ಕಾರ್ಯದರ್ಶಿ ಯು. ಬಸವರಾಜ ಹೇಳಿದರು.
ಪಟ್ಟಣದ ಅಂಬಿಗರ ಚೌಡಯ್ಯ ಸಮುದಾಯ ಭವನದಲ್ಲಿ ನಡೆದ ಭಾರತ ಕಮ್ಯುನಿಸ್ಟ್ (ಮಾರ್ಕ್ಸ್ವಾದಿ) ಪಕ್ಷದ ತಾಲೂಕು ಮಟ್ಟದ ಸಮ್ಮೇಳನ, ಬಹಿರಂಗ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ತಂದ ಕರಾಳ ಕೃಷಿ ಕಾಯ್ದೆಗಳ ವಿರುದ್ಧ ರೈತರು ಸತತ ಎರಡು ವರ್ಷಗಳಿಂದ ಪ್ರತಿಭಟನೆ ಮಾಡುತ್ತಿದ್ದು, ನಿರಂತರ ಹೋರಾಟಕ್ಕೆ ಮಣಿದ ಬಿಜೆಪಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ರೈತರ ಚಳವಳಿ ಹತ್ತಿಕ್ಕುವ ಮತ್ತು ಅವರ ಹೋರಾಟವನ್ನು ದಮನ ಮಾಡುವ ಸರ್ಕಾರಗಳಿಗೆ ಇದೊಂದು ಪಾಠ ಎಂದು ಹೇಳಿದರು.
ಕೇಂದ್ರ ಸರ್ಕಾರದ ನೀತಿಗಳು ಸಂಪೂರ್ಣ ಶ್ರೀಮಂತರ ಪರವಾಗಿದ್ದು, ಬಡವರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುವಂತಾಗಿವೆ. ಅಡುಗೆ ಅನಿಲ, ರೈಲಬೆಲೆ ಸೇರಿದಂತೆ ಜನರ ಬದುಕಿಗೆ ಅತ್ಯಗತ್ಯವಾಗಿ ಬೇಕಾದ ವಸ್ತುಗಳ ಬೆಲೆ ವಿಪರೀತ ಏರಿಕೆಯಾಗುತ್ತಿವೆ. ಈ ಬೆಲೆ ಏರಿಕೆಗೆ ಕಡಿವಾಣ ಹಾಕಿ ಜನರಿಗೆ ಅನುಕೂಲ ಕಲ್ಪಿಸಬೇಕಿದ್ದ ಸರ್ಕಾರ ಮೌನವಹಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಯದರ್ಶಿ ಶರಣಬಸಪ್ಪ ಮಮಶೆಟ್ಟಿ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನಸಾಮಾನ್ಯರ ವಿರೋಧಿ ನೀತಿ ಅನುಸರಿಸುತ್ತಿವೆ. ರೈತರು ಬೆಳೆದ ಬೆಳೆ ಕೈಗೆ ಬಂದಿಲ್ಲ. ಕೃಷಿ ಕೂಲಿಕಾರರಿಗೆ ಉದ್ಯೋಗ ದೊರೆಯುತ್ತಿಲ್ಲ. ಹೀಗಾಗಿ ರೈತರು ಹಾಗೂ ಕೃಷಿ ಕೂಲಿಕಾರರು ಬೇರೆ ರಾಜ್ಯ, ನಗರ ಪ್ರದೇಶಗಳಿಗೆ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಷ್ಟಾದರೂ ರಾಜ್ಯ, ಕೇಂದ್ರ ಸರ್ಕಾರವಾಗಲಿ ರೈತರು, ಕೂಲಿಕಾರರ ಕಡೆಗೆ ಗಮನಹರಿಸಿ ಪರಿಹಾರ ನೀಡುವಲ್ಲಿ ವಿಫಲವಾಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾರ್ಯದರ್ಶಿ ಮಂಡಳಿ ಸದಸ್ಯರಾದ ಗೌರಮ್ಮ ಪಾಟೀಲ, ಶ್ರೀಮಂತ ಬಿರಾದಾರ, ಪಾಂಡುರಂಗ ಮಾವಿನಕರ್ ಮಾತನಾಡಿದರು. ಮುಖಂಡರಾದ ಶೇಖಮ್ಮ ಕುರಿ, ದೇವಮ್ಮ ಅನ್ನದಾನಿ, ಚಂದು ಜಾಧವ, ರೇವಯ್ಯ ಸ್ವಾಮಿ ಇತರರು ಇದ್ದರು. ಪ್ರಾಂತ ರೈತ ಸಂಘದ ತಾಲೂಕು ಅಧ್ಯಕ್ಷ ಸಾಯಬಣ್ಣ ಗುಡುಬಾ ನಿರೂಪಿಸಿದರು.