Advertisement

ಸೇನೆ ಸೇರುವ ತವಕದಲ್ಲಿ ಸಂತ್ರಸ್ತ ಯುವಕರು

07:43 AM Oct 15, 2018 | Team Udayavani |

ಮಡಿಕೇರಿ: ವೀರರ ನಾಡು, ಕ್ರೀಡಾಕಲಿಗಳ ಬೀಡು ಎಂಬುದು ಕೊಡಗಿನ ಪ್ರಖ್ಯಾತಿ. ಸೇನೆ ಹಾಗೂ ಕ್ರೀಡಾ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿರುವ ಈ ಪುಟ್ಟ ಜಿಲ್ಲೆ, ಈಗ ಮಹಾಮಳೆಯಿಂದ ಬೆಟ್ಟದಷ್ಟು ಸಂಕಷ್ಟ ಹೊದ್ದುಕೊಂಡಿದೆ. ಆದರೆ, ಸಂತ್ರಸ್ತ ಯುವ ಸಮೂಹ ಈ ಕಹಿಯನ್ನು ಮೆಟ್ಟಿ ನಿಂತು ದೇಶ ಕಾಯುವ ಯೋಧರಾಗಲು ಸಜ್ಜಾಗುತ್ತಿದೆ.  ಸುಮಾರು ಏಳು ಗ್ರಾ.ಪಂ ವ್ಯಾಪ್ತಿಯ 40ರಷ್ಟು ಗ್ರಾಮಗಳ ಸಾವಿರಕ್ಕೂ ಹೆಚ್ಚು ಮಂದಿ ಸಂತ್ರಸ್ತರಾಗಿದ್ದಾರೆ. ಈ ಕುಟುಂಬಗಳ ಯುವ ಸದಸ್ಯರಿಗೆ ಈಗ ಉದ್ಯೋಗದ ಅನಿವಾರ್ಯತೆ
ಎದುರಾಗಿದೆ.

Advertisement

ಕೂಲಿಯಲ್ಲ, ದೇಶಸೇವೆ: ಮಹಾಮಳೆಯಿಂದ ಎಲ್ಲವನ್ನೂ ಕಳೆದುಕೊಂಡು ಕೂಲಿ ಕೆಲಸಕ್ಕೆ ಹೋಗಬೇಕಾದ ಅನಿವಾರ್ಯತೆ ಈ ಯುವಕರದು. ಆದರೆ, ಇಂದಿನ ಪರಿಸ್ಥಿತಿಯಲ್ಲಿ ಕೂಲಿ ಕೆಲಸವೂ ಮರೀಚಿಕೆ. ಇಂಥ ಹೊತ್ತಿನಲ್ಲೇ ಕೊಡವ ಸಮಾಜದ ಪ್ರಮುಖರು ಹಾಗೂ ನಿವೃತ್ತ ಸೇನಾಧಿಕಾರಿಗಳು ದೇಶ ಕಾಯುವ ಗೌರವಯುತ ವೃತ್ತಿಯನ್ನು ಆರಿಸಿಕೊಳ್ಳುವಂತೆ ಇವರನ್ನು ಪ್ರೇರೇಪಿಸಿದ್ದಾರೆ.
ಮಾನಸಿಕವಾಗಿ ಕುಸಿದಿದ್ದರೂ ದೈಹಿಕವಾಗಿ ಸದೃಢರಾಗಿರುವ ಈ ಯುವಕರನ್ನು ನಿವೃತ್ತ ಸೇನಾಧಿಕಾರಿಗಳು ಕೊಡವ ಸಮಾಜದ ಸಹಕಾರದೊಂದಿಗೆ ಸೇನಾ ನೇಮಕಾತಿ ರ್ಯಾಲಿಗೆ ಸಜ್ಜುಗೊಳಿಸಿದ್ದಾರೆ. ಅ.13ರಿಂದ ಮಂಡ್ಯದಲ್ಲಿ ಆರಂಭಗೊಂಡಿರುವ ಆಯ್ಕೆ ರ್ಯಾಲಿಯಲ್ಲಿ ಸಂತ್ರಸ್ತ ಕುಟುಂಬಗಳ 50ಕ್ಕೂ ಹೆಚ್ಚು ಯುವಕರು ಭಾಗವಹಿಸಿದ್ದಾರೆ.

ಸೇನಾ ಮಾರ್ಗದರ್ಶನ, ಸಲಹೆ: ಸೇನಾಧಿಕಾರಿಗಳಾದ ಕ| ಬೆಳ್ಳಿಯಪ್ಪ, ಗಜಾನನ, ನಾಯಕ್‌ ವೀರೇಶ್‌ ಮತ್ತು ನಿವೃತ್ತ
ಸೇನಾಧಿಕಾರಿಗಳಾದ ಮೇ| ನಂದಾ ನಂಜಪ್ಪ, ಕ| ಮುತ್ತಣ್ಣ ಮತ್ತಿತರರು ಈ ಯುವಕರಿಗೆ ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ತರಬೇತಿ ಹಾಗೂ ಮಾರ್ಗದರ್ಶನ ನೀಡಿದ್ದಾರೆ. ಲಿಖಿತ ಮತ್ತು ದೈಹಿಕ ಸಾಮರ್ಥ್ಯದ ಪರೀಕ್ಷೆ ಎದುರಿಸುವ ಕುರಿತು ಸಲಹೆ ನೀಡಿದ್ದಾರೆ. ಈ ಪೂರ್ವಭಾವಿ ತರಬೇತಿ ವೇಳೆ ಶಿಬಿರಾರ್ಥಿಗಳಿಗೆ ಮಡಿಕೇರಿ ಕೊಡವ ಸಮಾಜ ಊಟ ಹಾಗೂ ವಸತಿ ವ್ಯವಸ್ಥೆ ಕಲ್ಪಿಸಿತ್ತು. ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್‌ .ದೇವಯ್ಯ, ಪದಾಧಿಕಾರಿಗಳಾದ ಕಾಳೇಂಗಡ ಮುತ್ತಪ್ಪ, ಪುಟ್ಟಿಚಂಡ ಡಾನ್‌, ಮಾದೇಟಿರ ಬೆಳ್ಳಪ್ಪ ಅವರು ಸಂತ್ರಸ್ತ ಯುವಕರನ್ನು ಸೇನೆಗೆ ಸೇರ್ಪಡೆಗೊಳಿಸಲೇ ಬೇಕೆಂದು ಪಣ ತೊಟ್ಟಿದ್ದಾರೆ.

ಸಂತ್ರಸ್ತ ಯುವಕರಿಗೆ ತರಬೇತಿ ನೀಡಿದ್ದೇವೆ. ದೇಶ ಸೇವೆಗೆ ಸೇನೆ ಉತ್ತಮ ವೇದಿಕೆ, ಇದರಿಂದ ಉದ್ಯೋಗವೂ ದೊರೆತಂತಾ ಗುತ್ತದೆ. ನೌಕಾದಳ ಮತ್ತು ವಾಯುಪಡೆ ಭರ್ತಿಗೂ ತರಬೇತಿ ನೀಡುವ ಚಿಂತನೆಯಿದ್ದು, ಮುಂದಿನ ದಿನಗಳಲ್ಲಿ ಇದು ನಡೆಯಲಿದೆ.
● ಮುತ್ತಣ್ಣ ನಿವೃತ್ತ ಕರ್ನಲ್

ಪ್ರಾಕೃತಿಕ ದುರಂತದಿಂದ ಗ್ರಾಮೀಣ ಕುಟುಂಬಗಳಿಗೆ ಹಲವು ಸಂಕಷ್ಟಗಳು ಎದುರಾಗಿವೆ. ಇಂಥ ಪರಿಸ್ಥಿತಿಯಲ್ಲಿ ಯುವಕರು ಸೇನೆಗೆ ಸೇರ್ಪಡೆಗೊಂಡು ಬದುಕು ಕಟ್ಟಿಕೊಳ್ಳಲು ನೆರವಾಗುವ ದೃಷ್ಟಿಯಿಂದ ಕೊಡವ ಸಮಾಜ ಈ ಚಿಂತನೆ ನಡೆಸಿದೆ.
● ಕೆ ಎಸ್ ದೇವಯ್ಯ. ಕೊಡವ ಸಮಾಜದ ಅಧ್ಯಕ್ಷ

Advertisement

ಎಸ್ ಕೆ ಲಕ್ಷ್ಮೀಶ

Advertisement

Udayavani is now on Telegram. Click here to join our channel and stay updated with the latest news.

Next