ಬೆಳ್ತಂಗಡಿ: ನೆರಿಯದಲ್ಲಿ ಹಠಾತ್ ಗುಡ್ಡ ಕುಸಿತದಿಂದ ಸಾಕಷ್ಟು ಕೃಷಿ ಹಾನಿ ಜತೆಗೆ ಒಂದು ಕುಟುಂಬ ಸಂತ್ರಸ್ತಗೊಂಡಿದ್ದು, ಪ್ರಸ್ತುತ ಧ್ವಂಸಗೊಂಡ ಮನೆಗೆ ಇವರು 2 ತಿಂಗಳ ಹಿಂದೆಯಷ್ಟೇ ಬಂದು ನೆಲೆಸಿದ್ದರು. ವಿಶೇಷವೆಂದರೆ ಎರಡು ತಿಂಗಳ ಹಿಂದೆ ರೆನ್ನಿ ಸೆಬಾಸ್ಟಿನ್ ಅವರ ಮನೆ ಗಾಳಿಗೆ ಹಾನಿಗೊಂಡಿದ್ದು, ಹೀಗಾಗಿ ಅವರು ರೆನ್ನಿ ಅವರ ಅಣ್ಣ ಪಿ.ಡಿ. ಜೋಸೆಫ್ ಅವರ ಮನೆಯಲ್ಲಿ ಉಳಿದುಕೊಂಡಿದ್ದರು. ಪ್ರಸ್ತುತ ಹಾನಿಗೊಂಡ ಮನೆ ಪಿ.ಡಿ. ಜೋಸೆಫ್ ಅವರಿಗೆ ಸೇರಿದ್ದಾಗಿದ್ದು, ಇವರ ಕೃಷಿಯೂ ಹಾನಿಗೊಳಗಾಗಿದೆ.
ಎದುರಿಗೆ ಸಿಕ್ಕ ಎಲ್ಲವನ್ನೂ ಧ್ವಂಸ ಮಾಡುತ್ತಾ ಬಂದ ಬೃಹತ್ ಗಾತ್ರದ ಬಂಡೆಗಳು ಒಂದು ಮನೆಯನ್ನು ಧ್ವಂಸಗೊಳಿಸಿ, ಮತ್ತೆ ಮುಂದೆ ಹೋಗಿ ನೂರಾರು ಅಡಿಕೆ ಮರಗಳನ್ನು, ಹೊಸ ಕೆರೆಯನ್ನು ನಾಶ ಮಾಡಿದೆ. ಸುಮಾರು ಎರಡೂವರೆ ಕಿ.ಮೀ. ದೂರದಿಂದ ಹಾದು ಬಂದ ಕಲ್ಲುಗಳು, ಮಣ್ಣು ಹೊಸ ಕಂದಕವನ್ನೇ ಸೃಷ್ಟಿಸಿದೆ.
ಘಟನೆಯಿಂದ ಪಿ.ಡಿ. ಜೋಸೇಫ್ ಅವರಿಗೆ ಸೇರಿದ ರೆನ್ನಿ ಅವರು ವಾಸವಿದ್ದ ಒಂದು ಮನೆ ನಾಶವಾಗಿದೆ. ಅದರ ಒಂದು ಕೋಣೆ ಮಾತ್ರ ಉಳಿದರೂ ಪ್ರಯೋಜನ ಇಲ್ಲದಂತಾಗಿದೆ. ಜತೆಗೆ ಇವರ ನೂರಕ್ಕೂ ಅಧಿಕ ರಬ್ಬರ್ ಮರಗಳು, 5 ತೆಂಗಿನ ಮರಗಳು ನಾಶಗೊಂಡಿವೆ.
ಪಿ.ಡಿ. ಜೋಸೆಫ್ ಅವರ ಜಮೀನಿನ ಕೆಳಭಾಗದಲ್ಲಿ ಎ.ಟಿ. ಜೋಸೆಫ್ ಅವರ ಕೃಷಿ ಭೂಮಿಯಿದ್ದು, ಅಲ್ಲಿ ಹೊಸದಾಗಿ ನಿರ್ಮಿಸಿದ ಬೃಹತ್ ಕೆರೆಯ ಕುರುಹೂ ಇಲ್ಲದಾಗಿದೆ ಕೃಷಿ ಭೂಮಿಯ ನೀರಿಗಾಗಿ 20 ಅಡಿ ಆಳ ಹಾಗೂ 12 ವ್ಯಾಸ ವಿಸ್ತೀರ್ಣದಲ್ಲಿ ರಿಂಗ್ ಬಳಸಿ ಸುಮಾರು ರೂ. 2 ಲಕ್ಷಕ್ಕೂ ಅಧಿಕ ಖರ್ಚು ಮಾಡಿ ಈ ಕೆರೆ ನಿರ್ಮಿಸಿದ್ದರು. ಮೇಲಿನಿಂದ ಉರುಳಿಕೊಂಡು ಬಂದ ಎಲ್ಲ ವಸ್ತುಗಳು ಪ್ರಸ್ತುತ ಆ ಕೆರೆಯನ್ನು ನುಂಗಿ ಹಾಕಿವೆ. ಜತೆಗೆ ಕೆರೆಯ ನೀರೆತ್ತಲು ಬಳಸುವ ಪಂಪು ಕೂಡ ಮಣ್ಣಿನಲ್ಲಿ ಹೂತು ಹೋಗಿದೆ. 200ಕ್ಕೂ ಅಧಿಕ ಅಡಿಕೆ ಮರಗಳು, ಒಂದಷ್ಟು ತೆಂಗಿನ ಮರಗಳು, 2 ಹಲಸಿನ ಮರ ಸಹಿತ ಇನ್ನಿತರ ಮರಗಳನ್ನು ನಾಶ ಮಾಡಿದೆ.
1 ಕಿ.ಮೀ. ದೂರ ಶಬ್ಧ!
ಘಟನೆಯಿಂದ ಮಣ್ಣು, ಕಲ್ಲು, ಮರ ಗಿಡಗಳ ಅವಶೇಷಗಳನ್ನು ಖಾಲಿ ಮಾಡಬೇಕಾದರೆ ಒಂದು ತಿಂಗಳ ಕೆಲಸವಿದೆ ಎಂದು ಜೋಸೆಫ್ ಅಂದಾಜಿಸಿದ್ದಾರೆ. ಪಿಲತ್ತಡಿ ಎಂಬ ಪ್ರದೇಶದಲ್ಲಿ ಘಟನೆ ಸಂಭವಿಸಿದ್ದು, ಇದರ ಶಬ್ದ 1 ಕಿ.ಮೀ. ದೂರದ ಗಂಡಿಬಾಗಿಲಿನವರೆಗೆ ಕೇಳಿದೆ. ಭೂಕಂಪದ ರೀತಿಯಲ್ಲಿ ಮೇಲಿನಿಂದ ಬಂಡೆ-ಮಣ್ಣು ಹಾದು ಬಂದಿದ್ದು, ನಾವು ಬದುಕಿ ಉಳಿದದ್ದೇ ವಿಶೇಷ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.