“ಕೆಂಡಸಂಪಿಗೆ’ ಚಿತ್ರದ ನಾಯಕ ವಿಕ್ಕಿ ಹೊಸ ಸಿನಿಮಾ ಮಾಡುತ್ತಿರುವ ಹಾಗೂ ಆ ಸಿನಿಮಾವನ್ನು “ಅಲೆಮಾರಿ’ ಸಂತು ನಿರ್ದೇಶನ ಮಾಡುತ್ತಿರುವ ವಿಷಯ ನಿಮಗೆ ಗೊತ್ತಿದೆ. ಆದರೆ, ಆ ಚಿತ್ರಕ್ಕೆ ಟೈಟಲ್ ಹಾಗೂ ನಾಯಕಿಯ ಆಯ್ಕೆಯಾಗಿರಲಿಲ್ಲ. ಈಗ ಎಲ್ಲವೂ ಅಂತಿಮವಾಗಿದೆ.
ಚಿತ್ರಕ್ಕೆ “ಕಾಲೇಜ್ ಕುಮಾರ್’ ಎಂದು ಟೈಟಲ್ ಇಡಲಾಗಿದೆ. ಅಲ್ಲಿಗೆ ಇದು ಪಕ್ಕಾ ಯೂತ್ಫುಲ್ ಹಾಗೂ ಕಾಲೇಜ್ ಸ್ಟೋರಿ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಸಂತು ಈ ಬಾರಿ ಇಂದಿನ ಟ್ರೆಂಡ್ಗೆ ಒಗ್ಗುವಂತಹ ಕತೆ ಮಾಡಿಕೊಂಡಿದ್ದು, ಬೇರೆ ಶೈಲಿಯ ಸಿನಿಮಾ ಇದಾಗಲಿದೆ ಎಂಬ ವಿಶ್ವಾಸವಿದೆಯಂತೆ.
ನಾಯಕ ವಿಕ್ಕಿಯವರ ಮ್ಯಾನರೀಸಂಗೆ ತಕ್ಕಂತೆ ಕಥೆ ನಾಯಕನ ಪಾತ್ರ ಇರುವುದರಿಂದ ಅವರನ್ನೇ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ಈಗ ಕಥೆಗೆ ಹೊಂದಿಕೆಯಾಗುವಂತೆ “ಕಾಲೇಜ್ ಕುಮಾರ್’ ಎಂದು ಟೈಟಲ್ ಕೂಡಾ ಇಡಲಾಗಿದೆ. ಚಿತ್ರಕ್ಕೆ ನಾಯಕಿಯಾಗಿ ಸಂಯುಕ್ತಾ ಹೆಗಡೆ ಆಯ್ಕೆಯಾಗಿದ್ದಾರೆ.
ಯಾವ ಸಂಯುಕ್ತಾ ಎಂದರೆ “ಕಿರಿಕ್ ಪಾರ್ಟಿ’ ಸಿನಿಮಾ ತೋರಿಸಬೇಕು. “ಕಿರಿಕ್ ಪಾರ್ಟಿ’ ಮೂಲಕ ಲಾಂಚ್ ಆದ ಸಂಯುಕ್ತಾ ಈಗ “ಕಾಲೇಜ್ ಕುಮಾರ್’ಗೆ ಜೊತೆಯಾಗಿದ್ದಾರೆ. ಈ ಸಿನಿಮಾವನ್ನು ಎಂ.ಆರ್.ಪಿಕ್ಚರ್ ನಿರ್ಮಿಸುತ್ತಿದೆ. ಈಗಾಗಲೇ ಎಂ.ಆರ್.ಪಿಕ್ಚರ್ ನಡಿ ಎಲ್.ಪದ್ಮನಾಭ್ ಹಾಗೂ ಸ್ನೇಹಿತರು ಸೇರಿ “ಜಾನ್ ಜಾನಿ ಜನಾರ್ಧನ್’ ಸಿನಿಮಾ ಮಾಡಿದ್ದಾರೆ.
ಈಗ ಎಂ.ಆರ್.ಪಿಕ್ಚರ್ನಡಿ ಎರಡನೇ ಸಿನಿಮಾ ತಯಾರಾಗುತ್ತಿದೆ. ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ, ಟಿ. ಅಲಗನ್ ಛಾಯಾಗ್ರಹಣವಿದೆ. ರವಿಶಂಕರ್, ಅಚ್ಯುತ್ ಕುಮಾರ್ ಸೇರಿದಂತೆ ಅನೇಕರು ಚಿತ್ರದಲ್ಲಿ ನಟಿಸುತ್ತಿದ್ದು, ಮೇ ಮೊದಲ ವಾರದಿಂದ ಚಿತ್ರೀಕರಣ ಶುರು.