ನವದೆಹಲಿ: ರಾಷ್ಟ್ರಪತಿ ಚುನಾವಣೆ ಬೆನ್ನಲ್ಲೇ ಇದೀಗ ಉಪರಾಷ್ಟ್ರಪತಿ ಚುನಾವಣೆಯ ಚಟುವಟಿಕೆ ಗರಿಗೆದರಿದೆ. ಸೋಮವಾರ (ಜುಲೈ 18) ಎನ್ ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾದ ಜಗದೀಪ್ ಧನ್ಕರ್ ಅವರು ನಾಮಪತ್ರ ಸಲ್ಲಿಸಿದ್ದು, ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಜರಿದ್ದರು.
ಇದನ್ನೂ ಓದಿ:ಮಹಿಳೆಯ ಕೊಲೆ: 11 ವರ್ಷದ ಬಳಿಕ ಪ್ರಕರಣ ಭೇದಿಸಿದ ಮುದ್ದೇಬಿಹಾಳ ಪೊಲೀಸರು
2022ರ ಆಗಸ್ಟ್ 6ರಂದು ಉಪರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಜಗದೀಪ್ ಧನ್ಕರ್ ಅವರನ್ನು ಎನ್ ಡಿಎ ತಮ್ಮ ಉಪರಾಷ್ಟ್ರಪತಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದು, ವಿರೋಧ ಪಕ್ಷಗಳು ಮಾರ್ಗರೇಟ್ ಆಳ್ವ ಅವರನ್ನು ಕಣಕ್ಕಿಳಿಸಿದೆ.
“ದೇಶದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ನಾನು ಸದಾ ಸಿದ್ಧನಾಗಿದ್ದೇನೆ” ಎಂದು ಧನ್ಕರ್ ನಾಮಪತ್ರ ಸಲ್ಲಿಕೆಯ ಬಳಿಕ ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದರು. ನನಗೆ ಇಂತಹ ಒಂದು ಅವಕಾಶ ದೊರೆಯುತ್ತದೆ ಎಂದು ನಾನು ಕನಸಿನಲ್ಲೂ ಊಹಿಸಿರಲಿಲ್ಲ. ಇದಕ್ಕಾಗಿ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ಧನ್ಕರ್ ಹೇಳಿದರು.
ಉಪರಾಷ್ಟ್ರಪತಿ ಅಭ್ಯರ್ಥಿ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಆಗಮಿಸಿದ್ದ ಧನ್ಕರ್ ಅವರಿಗೆ ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ ಸಿಂಗ್, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ, ಜೆಡಿಯುನ ಲಾಲನ್ ಸಿಂಗ್, ಬಿಜೆಡಿಯ ಪಿನಾಕಿ ಮಿಶ್ರಾ ಸಾಥ್ ನೀಡಿದ್ದರು.