ಪಣಜಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುರವರು ಶುಕ್ರವಾರ ಬೆಳಿಗ್ಗೆ ಗೋವಾದ ಬಾಂಬೋಲಿಂ ಆಸ್ಪತ್ರೆಗೆ ಆಗಮಿಸಿ ಇಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೇಂದ್ರ ಆಯುಷ್ ಸಚಿವ ಶ್ರೀಪಾದ ನಾಯಕ್ ಆರೋಗ್ಯ ವಿಚಾರಿಸಿದರು.
ಈ ಸಂದರ್ಭದಲ್ಲಿ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಬಿಜೆಪಿ ರಾಜ್ಯಾಧ್ಯಕ್ಷ ಸದಾನಂದ ತಾನಾಡೆ, ಬಾಂಬೋಲಿಂ ಆಸ್ಪತ್ರೆಯ ಡೀನ್ ಡಾ. ಶಿವಾನಂದ ಬಾಂದೇಕರ್ ಉಪಸ್ಥಿತರಿದ್ದರು.
ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸಿಎಂ ಪ್ರಮೋದ್ ಸಾವಂತ್, ಕೇಂದ್ರ ಆಯುಷ್ ಮಂತ್ರಿ ಶ್ರೀಪಾದ ನಾಯಕ್ ಅವರ ಆರೋಗ್ಯದಲ್ಲಿ ಉತ್ತಮ ಚೇತರಿಕೆ ಕಂಡುಬರುತ್ತಿದೆ. ಇಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ಬಾಂಬೋಲಿಂ ಆಸ್ಪತ್ರೆಗೆ ಆಗಮಿಸಿ ಶ್ರೀಪಾದ ನಾಯ್ ಅರವರ ಆರೋಗ್ಯ ವಿಚಾರಿಸಿದರು. ಉಪರಾಷ್ಟ್ರಪತಿಗಳೊಂದಿಗೆ ಸಚಿವರು ಮಾತನಾಡಿದರು ಎಂದರು.
ಇದನ್ನೂ ಓದಿ:ಒಂದಾಗಿ ಶಾಲೆಗೆ ಹೋದವರು ಒಟ್ಟಿಗೆ ಮಸಣ ಸೇರಿದರು: ಗುರುತಿಸಲಾಗದಷ್ಟು ಜರ್ಜರಿತವಾದ ಮೃತದೇಹಗಳು
ಬಾಂಬೋಲಿಂ ಆಸ್ಪತ್ರೆಯ ವೈದ್ಯರೊಂದಿಗೆ ದೆಹಲಿಯ ಏಮ್ಸ್ ಆಸ್ಪತ್ರೆಯ ವೈದ್ಯರ ತಂಡ ಸತತ ಸಂಪರ್ಕದಲ್ಲಿದ್ದು ಶ್ರೀಪಾದ ನಾಯಕ್ ಅವರ ಆರೋಗ್ಯದ ಬಗ್ಗೆ ತೀವ್ರ ನಿಗಾ ವಹಿಸಲಾಗುತ್ತಿದೆ. ಪತ್ನಿ ನಿಧನರಾಗಿರುವ ಮತ್ತು ಅವರ ಅಂತ್ಯಕ್ರಿಯೆ ನಡೆಸಿರುವ ವಿಷಯವನ್ನು ಶ್ರೀಪಾದ ನಾಯಕ್ ಅವರಿಗೆ ತಿಳಿಸಲಾಗಿದೆ ಎಂದು ಸಿಎಂ ಸಾವಂತ್ ಹೇಳಿದರು.
ಆಸ್ಪತ್ರೆಯ ಡೀನ್ ಡಾ. ಶಿವಾನಂದ ಬಾಂದೇಕರ್ ಮಾತನಾಡಿ, ಶ್ರೀಪಾದ ನಾಯಕ್ ಅವರ ಆರೋಗ್ಯ ಸುಧಾರಿಸುತ್ತಿದೆ. ಇಂದು ಬೆಳಗ್ಗೆ ಅಲ್ಪ ಉಪಹಾರ ಸೇವನೆ ಮಾಡಿದ್ದಾರೆ. ಅವರನ್ನು ಡಿಸ್ಚಾರ್ಜ್ ಮಾಡುವುದು ಯಾವಾಗ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಅವರು ಸ್ವತಂತ್ರವಾಗಿ ಓಡಾಟ ನಡೆಸುವಂತೆ ಆಗಬೇಕು. ಗುರುವಾರ ಎಕ್ಸ್ ರೇ ತೆಗೆಯಲಾಗಿದ್ದು ಮೂಳೆಗಳು ಸರಿಯಾಗಿ ಕೂಡುತ್ತಿರುವುದು ಕಂಡುಬಂದಿದೆ. ಎಲ್ಲ ಶಸ್ತ್ರಚಿಕಿತ್ಸೆಗಳು ಯಶಸ್ವಿಯಾಗಿದೆ. ಅವರ ಆರೋಗ್ಯದ ಬಗ್ಗೆ ಏಮ್ಸ್ ವೈದ್ಯರ ಸೂಚನೆಯಂತೆಯೇ ನಿಗಾ ವಹಿಸಲಾಗುತ್ತಿದೆ ಎಂದರು
ಇದನ್ನೂ ಓದಿ:ರಾಮಮಂದಿರ ಕಟ್ಟಡ ನಿರ್ಮಾಣ; ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೀಡಿದ ದೇಣಿಗೆ ಎಷ್ಟು?
ಕಳೆದ ಸೋಮವಾರ ರಾತ್ರಿ ಉತ್ತರ ಕನ್ನಡದ ಯಲ್ಲಾಪುರದಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಸಚಿವ ಶ್ರೀಪಾದ ನಾಯಕ್ ರವರ ಕಾರು ಅಪಘಾತಕ್ಕೀಡಾಗಿತ್ತು. ಪರಿಣಾಮ ಶ್ರೀಪಾದ ನಾಯಕ್ ಗಂಭೀರ ಗಾಯಗೊಂಡಿದ್ದರು. ಅಪಘಾತದಲ್ಲಿ ಶ್ರೀಪಾದ ನಾಯಕ್ ಪತ್ನಿ ವಿಜಯಾ ನಾಯ್ಕ ಸಾವನ್ನಪ್ಪಿದ್ದರು.