ಹೊಸದಿಲ್ಲಿ: ನೌಕಾಪಡೆ ಮುಖ್ಯಸ್ಥ ಸುನೀಲ್ ಲಾಂಬಾ ಮೇ 30 ರಂದು ನಿವೃತ್ತರಾಗಲಿರುವ ಹಿನ್ನೆಲೆಯಲ್ಲಿ, ವೈಸ್ ಅಡ್ಮಿರಲ್ ಕರಮ್ ಬೀರ್ ಸಿಂಗ್‌ರನ್ನು ನೌಕಾ ಪಡೆ ಮುಂದಿನ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ. ಮೆರಿಟ್ ಆಧರಿಸಿ ನೇಮಕಾತಿ ಮಾಡಲಾಗಿದ್ದು, ಈ ಹಿಂದಿನಂತೆ ಹಿರಿಯ ಅಧಿಕಾರಿಯನ್ನು ನೇಮಕ ಮಾಡುವ ಸಂಪ್ರದಾಯವನ್ನು ಮುರಿಯಲಾಗಿದೆ. ಹಿರಿತನದ ಆಧಾರದಲ್ಲಿ ಅಂಡಮಾನ್ ನಿಕೋಬಾರ್ ಕಮಾಂಡ್ ವೈಸ್ ಅಡ್ಮಿರಲ್ ವಿಮಲ್ ವರ್ಮಾ ನೇಮಕವಾಗ ಬೇಕಿತ್ತು. ಇವರನ್ನು ಹೊರತುಪಡಿಸಿ ನೌಕಾಪಡೆ ಸಿಬಂದಿ ವಿಭಾಗದ ಉಪ ಮುಖ್ಯಸ್ಥ ಜಿ ಅಶೋಕ್ ಕುಮಾರ್, ಪೂರ್ವ ಕಮಾಂಡ್‌ನ ವೈಸ್ ಅಡ್ಮಿರಲ್ ಅಜಿತ್ ಕುಮಾರ್ ಕೂಡ ಪರಿಗಣನೆಯಲ್ಲಿದ್ದರು.ಸದ್ಯ ಕರಮ್‌ಬೀರ್ ಸಿಂಗ್ ವಿಶಾಖ ಪಟ್ಟಣಂನ ನೌಕಾ ನೆಲೆಯಲ್ಲಿ ಫ್ಲಾಗ್ ಆಫೀಸರ್ ಕಮಾಂಡಿಂಗ್ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿಂಗ್ ಮೇ 31ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಇವರು ಹೆಲಿ ಕಾಪ್ಟರ್ ಪೈಲಟ್ ಆಗಿದ್ದರು. 1982ರ ವೇಳೆ ಚೇತಕ್ ಹಾಗೂ ಕಮೋವ್ ಹೆಲಿಕಾಪ್ಟರುಗಳಿಗೆ ಪೈಲಟ್ ಆಗಿ ಕೆಲಸ ಮಾಡಿದ್ದಾರೆ. ಹೆಲಿಕಾಪ್ಟರ್ ಪೈಲಟ್ ಆಗಿದ್ದವರು ಇದೇ ಮೊದಲ ಬಾರಿಗೆ ನೌಕಾಪಡೆಯ ಮುಖ್ಯಸ್ಥ ಹುದ್ದೆಗೇರುತ್ತಿದ್ದಾರೆ. ಜಲಂಧರ್ ಮೂಲದವರಾದ ಸಿಂಗ್ ಪರಮ ವಿಶಿಷ್ಟ ಹಾಗೂ ಅತಿ ವಿಶಿಷ್ಟ ಸೇವಾ ಪದಕಗಳನ್ನೂ ಪಡೆದಿದ್ದಾರೆ.