Advertisement

ಹಕ್ಕುಪತ್ರಕ್ಕೆ ಆಗ್ರಹಿಸಿ ವಿಭೂತಿಹಳ್ಳಿ ಪ್ರವಾಹ ಸಂತ್ರಸ್ತರ ಧರಣಿ

12:00 PM Feb 05, 2019 | |

ವಿಜಯಪುರ: ದಶಕದ ಹಿಂದೆ ಅಧಿಕ ಮಳೆ ಪ್ರವಾಹದಿಂದಾಗಿ ಜಲಾವೃತಗೊಂಡಿದ್ದ ವಿಭೂತಿಹಳ್ಳಿ ಪುನರ್ವಸತಿ ಕೇಂದ್ರದಲ್ಲಿ ಅರ್ಹ ಸಂತ್ರಸ್ತರ ಬದಲಿಗೆ ಅನರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಅರ್ಹರು ಮನೆ ಇಲ್ಲದೇ ಬೀದಿಗೆ ಬಿದ್ದಿದ್ದು, ಈ ಅಕ್ರಮ ಕುರಿತು ಉನ್ನತ ಮಟ್ಟದ ತನಿಖೆ ಮಾಡುವಂತೆ ಆಗ್ರಹಿಸಿ ಸಂತ್ರಸ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

Advertisement

ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸಿದ ಸಂತ್ರಸ್ತರು, ತಮ್ಮ ಬೇಡಿಕೆಗಳ ಈಡೇರಿಕೆ ಅಗದ ಹೊರತು ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.

ಈ ಹಂತದಲ್ಲಿ ಸ್ಥಳಕ್ಕೆ ತೆರಳಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಸಿ. ಮನಗೂಳಿ, ವಿಭೂತಿಹಳ್ಳಿ ಗ್ರಾಮಕ್ಕೆ ಸ್ವಯಂ ನಾನೇ ಭೇಟಿ ನೀಡಿ ಸಮಸ್ಯೆ ಪರಿಹರಿಸುತ್ತೇನೆ. ನೈಜ ಫಲಾನುಭವಿಗಳಿಗೆ ಯಾವುದೇ ರೀತಿ ಅನ್ಯಾಯವಾಗಲು ಬಿಡುವುದಿಲ್ಲ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಧರಣಿ ಹಿಂಪಡೆದುಕೊಂಡರು.

ಸಂತ್ರಸ್ತರ ಪರ ಸಲೀಂ ಆಲ್ದಿ ಮಾತನಾಡಿ, ವಿಭೂತಿಹಳ್ಳಿ ಪುನರ್ವಸತಿ ಕೇಂದ್ರದ ಹಕ್ಕುಪತ್ರ ವಿತರಣೆಯಲ್ಲಿ ಭಾರಿ ಅವ್ಯವಹಾರ ನಡೆದಿದೆ. ವಿಭೂತಿಹಳ್ಳಿಯಲ್ಲಿ ಇರದೇ ಇರುವ ಅನೇಕ ನಕಲಿ ಫಲಾನುಭವಿಗಳನ್ನು ಸೃಷ್ಟಿಸಿ, ಅಷ್ಟೇ ಅಲ್ಲ ಜೀವಂತವಿಲ್ಲದೇ ಇರುವವ ಹೆಸರಿನಲ್ಲಿಯೂ ಖೊಟ್ಟಿ ದಾಖಲೆ ಸೃಷ್ಟಿಸಿ ಹಕ್ಕುಪತ್ರ ನೀಡಲಾಗಿದೆ. ಒಂದೇ ಕುಟುಂಬಕ್ಕೆ ಎರಡು ಮೂರು ಮನೆಗಳನ್ನು ನೀಡಲಾಗಿದೆ ಎಂದು ದೂರಿದರು.

ವರ್ಷಗಳಿಂದ ಈ ಸಮಸ್ಯೆ ಬಗ್ಗೆ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ, ಅವ್ಯವಹಾರ ತನಿಖೆಗೆ ನಿಯೋಜಿತವಾಗುವ ಅಧಿಕಾರಿಗಳ ತಂಡ ಕೇವಲ ನಾಮಕೆವಾಸ್ತೆ ವರದಿ ತಯಾರಿಸಿ ಯಾವುದೇ ಲೋಪವಾಗಿಲ್ಲ ಎನ್ನುತ್ತಾರೆ. ಸ್ಥಳಕ್ಕೆ ಭೇಟಿ ನೀಡದೇ, ಫಲಾನುಭವಿಗಳನ್ನು ಮಾತನಾಡಿಸದೇ ಏಕಪಕ್ಷೀಯವಾಗಿ ವರದಿ ಸಲ್ಲಿಸಿದ್ದೇ ಹೆಚ್ಚು. ಈ ಕಾರಣದಿಂದಾಗಿ ನೈಜ ಫಲಾನುಭವಿಗಳು ಸೌಲಭ್ಯಗಳಿಂದ ವಂಚಿತವಾಗಬೇಕಾಗಿದೆ. ಅಷ್ಟೇ ಅಲ್ಲದೇ ಅನೇಕ ಉಳ್ಳವರು ಸಹ ಗ್ರಾಮದಲ್ಲಿ ಪಡಿತರ ಚೀಟಿ ಹೊಂದಿ ಬಡವರಿಗೆ ದಕ್ಕಬೇಕಾದ ಸೌಲಭ್ಯಗಳನ್ನು ತಾವೇ ಪಡೆದುಕೊಳ್ಳುತ್ತಿದ್ದಾರೆ ಎಂದು ದೂರಿದರು.

Advertisement

ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಈ ಬಗ್ಗೆ ಉನ್ನತ ಮಟ್ಟದ ತನಿಖೆ ಕೈಗೊಂಡು ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಂಡು ನೈಜ ಫಲಾನುಭವಿಗಳಿಗೆ ನ್ಯಾಯ ಒದಗಿಸಬೇಕು ಎಂದು ಗ್ರಾಮಸ್ಥರು ಹಕ್ಕೊತ್ತಾಯ ಮಂಡಿಸಿದರು.

ಬಸೀರ್‌ ಅಹ್ಮದ್‌ ತಾಂಬೆ, ಎಚ್.ಮೈನುದ್ದೀನ್‌, ಶಫೀಕ್‌ ಕನ್ನೂರ, ಅಶ್ಫಾಕ್‌ ಜಮಖಂಡಿ, ರಿಯಾಜ್‌ ಹುಂಡೇಕಾರ, ಜಿ.ಎಂ. ಜಮಖಂಡಿ, ಸಂಗಮೇಶ ಹಡಪದ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next