Advertisement

ವರ್ಮಾ ಪ್ರತಿಕ್ರಿಯೆ ಸೋರಿಕೆ: ಸುಪ್ರೀಂ ಕೆಂಡ

10:51 AM Nov 21, 2018 | Team Udayavani |

ಹೊಸದಿಲ್ಲಿ: ಸಿಬಿಐಯೊಳಗಿನ ಕಲಹಕ್ಕೆ ಸಂಬಂಧಿಸಿ ನಡೆದ ಕೆಲವು ಬೆಳವಣಿಗೆಗಳು ಸುಪ್ರೀಂ ಕೋರ್ಟ್‌ ಅನ್ನು ಕೆಂಡಾಮಂಡಲ ವಾಗಿಸಿದ ಘಟನೆ ಮಂಗಳವಾರ ನಡೆದಿದೆ. ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿ ಸಿವಿಸಿ ಸಲ್ಲಿಸಿದ ವರದಿಗೆ ಸಿಬಿಐ ನಿರ್ದೇಶಕ ಅಲೋಕ್‌ ಕುಮಾರ್‌ ವರ್ಮಾ ಅವರು ಮುಚ್ಚಿದ ಲಕೋಟೆಯಲ್ಲಿ ನೀಡಿದ ಪ್ರತಿಕ್ರಿಯೆ ಸೋರಿಕೆ ಯಾಗಿದ್ದೇ ನ್ಯಾಯಾಲಯದ ಆಕ್ರೋಶಕ್ಕೆ ಕಾರಣ.

Advertisement

ವರ್ಮಾ ನೀಡಿರುವ ರಹಸ್ಯ ಪ್ರತಿಕ್ರಿಯೆಯಲ್ಲಿ ಏನಿತ್ತು ಎಂಬುದನ್ನು ಮಾಧ್ಯಮವೊಂದು ವರದಿ ಮಾಡಿತ್ತು. ಪ್ರತಿಕ್ರಿಯೆಯು ರಹಸ್ಯವಾಗಿರಬೇಕು ಎಂದು ಕೋರ್ಟ್‌ ಹೇಳಿದ್ದರೂ, ಅದು ಸೋರಿಕೆಯಾಗಿದ್ದರಿಂದ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಪೀಠ ಸಿಡಿಮಿಡಿಗೊಂಡಿತು. ಮಂಗಳವಾರ ಮಾಧ್ಯಮ ವರದಿಯ ಪ್ರತಿಯನ್ನು ಕೋರ್ಟ್‌ಗೆ ತಂದಿದ್ದ ಸಿಜೆಐ, ಅದನ್ನು ವರ್ಮಾ ಪರ ವಕೀಲ ಫಾಲಿ ಎಸ್‌. ನಾರಿಮನ್‌ ಅವರ ಮುಂದಿಟ್ಟು, “ಇದೇನು’ ಎಂದು ಪ್ರಶ್ನಿಸಿದರು. ಗೊಂದಲಗೊಂಡ ನಾರಿಮನ್‌ ಅವರು, “ಇದು ನಿಜಕ್ಕೂ ಅನಧಿಕೃತ. ವರದಿ ಸೋರಿಕೆಯಿಂದ ನನಗೆ ಆಘಾತವಾಗಿದೆ’ ಎಂದರು.

ಇನ್ನೊಂದೆಡೆ, ಸಿಬಿಐ ಡಿಐಜಿ ಮನೀಷ್‌ ಸಿನ್ಹಾ ಅವರು ತಮ್ಮನ್ನು ನಾಗ್ಪುರಕ್ಕೆ ವರ್ಗಾಯಿಸಿದ್ದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯ ವಿವರವೂ ಮಾಧ್ಯಮಗಳಲ್ಲಿ ಪ್ರಕಟವಾಗಿದ್ದು, ಸಿಜೆಐ ಸಿಟ್ಟನ್ನು ಇನ್ನಷ್ಟು ಹೆಚ್ಚಿಸಿತು. ಒಂದು ಹಂತದಲ್ಲಿ ಸಹನೆ ಕಳೆದುಕೊಂಡ ಸಿಜೆಐ ರಂಜನ್‌ ಗೊಗೋಯ್‌, ನೀವ್ಯಾರೂ ಯಾವುದೇ ವಿಚಾರಣೆಗೆ ಅರ್ಹರಲ್ಲ. ತನಿಖಾ ಸಂಸ್ಥೆಯ ಘನತೆ ಕಾಪಾಡುವ ಉದ್ದೇಶದಿಂದ ಎಲ್ಲ ವರದಿಗಳೂ ರಹಸ್ಯವಾಗಿರಲಿ ಎಂದು ನಾವು ಆದೇಶಿಸಿದ್ದೆವು. ಆದರೆ, ಸಂಸ್ಥೆಯ ಘನತೆ ಕಾಪಾಡುವುದು ನಿಮಗ್ಯಾರಿಗೂ ಬೇಕಾಗಿಲ್ಲ ಎಂದು ಆಕ್ರೋಶಭರಿತರಾಗಿ ನುಡಿದಿದ್ದೂ ಕಂಡುಬಂತು. ಮುಂದಿನ ವಿಚಾರಣೆಯನ್ನು ನ.29ಕ್ಕೆ ಮುಂದೂಡಿದ ನ್ಯಾಯಾಲಯ, ಈ ಕುರಿತು ಸಿವಿಸಿ ಸೇರಿದಂತೆ ಯಾರ ವಾದವನ್ನೂ ನಾವು ಇಂದು ಆಲಿಸುವುದಿಲ್ಲ ಎಂದು ಖಡಕ್ಕಾಗಿ ನುಡಿಯಿತು.

Advertisement

Udayavani is now on Telegram. Click here to join our channel and stay updated with the latest news.

Next