ಇಂಡಿಯನ್ ವೆಲ್ಸ್: ರಶ್ಯದ ದರಿಯಾ ಕಸತ್ಕಿನಾ ಸತತ 2ನೇ ಸಲ ಟಾಪ್-10 ಆಟಗಾರ್ತಿಯನ್ನು ಮಣಿಸಿ ಇಂಡಿಯನ್ ವೆಲ್ಸ್ ಟೆನಿಸ್ ಪಂದ್ಯಾವಳಿಯ ಸೆಮಿಫೈನಲಿಗೆ ಆಗಮಿಸಿದ್ದಾರೆ. ಇಲ್ಲಿ ಅಮೆರಿಕದ ಹಿರಿಯ ಆಟಗಾರ್ತಿ ವೀನಸ್ ವಿಲಿಯಮ್ಸ್ ವಿರುದ್ಧ ಸೆಣಸಲಿದ್ದಾರೆ.
20ರ ಹರೆಯದ ದರಿಯಾ ಕಸತ್ಕಿನಾ 6-0, 6-2 ಅಂತರದಿಂದ ಜರ್ಮನಿಯ 10ನೇ ರ್‍ಯಾಂಕಿಂಗ್ ಆಟಗಾರ್ತಿ ಆ್ಯಂಜೆಲಿಕ್ ಕೆರ್ಬರ್‌ಗೆ ಸೋಲುಣಿಸಿದರು. ಇನ್ನೊಂದು ಮುಖಾ ಮುಖೀಯಲ್ಲಿ ವೀನಸ್ ವಿಲಿಯಮ್ಸ್ ಸ್ಪೇನಿನ ಕಾರ್ಲಾ ಸುರೆಜ್ ನವಾರೊ ಅವರನ್ನು 6-3, 6-2ರಿಂದ ಪರಾಭವಗೊಳಿಸಿದರು.
ವಿಶ್ವ ರ್‍ಯಾಂಕಿಂಗ್‌ನಲ್ಲಿ 19ನೇ ಸ್ಥಾನದಲ್ಲಿರುವ ದರಿಯಾ ಕಸತ್ಕಿನಾ ಈ ಕೂಟದಲ್ಲಿ 4 ಮಂದಿ ಮಾಜಿ ಗ್ರ್ಯಾನ್‌ಸ್ಲಾಮ್ ವಿಜೇತರನ್ನು ಮಣಿಸಿದ್ದೊಂದು ವಿಶೇಷ. 3ನೇ ಸುತ್ತಿನಲ್ಲಿ ಸ್ಲೋನ್ ಸ್ಟೀಫನ್ಸ್, ಪ್ರೀ-ಕ್ವಾರ್ಟರ್ ಫೈನಲ್‌ನಲ್ಲಿ ಕ್ಯಾರೋಲಿನ್ ವೋಜ್ನಿಯಾಕಿ ಅವರಿಗೆ ಕಸತ್ಕಿನಾ ಆಘಾತವಿಕ್ಕಿದ್ದರು.
ಆ್ಯಂಜೆಲಿಕ್ ಕೆರ್ಬರ್ ಪಾಲಿಗೆ ಇದೊಂದು ಆಘಾತಕಾರಿ ಸೋಲು. 2016ರಲ್ಲಿ ಆಸ್ಟ್ರೇಲಿಯನ್ ಓಪನ್ ಮತ್ತು ಯುಎಸ್ ಓಪನ್ ಪ್ರಶಸ್ತಿಗಳೆರಡನ್ನೂ ಗೆದ್ದ ಹೆಗ್ಗಳಿಕೆ ಕೆರ್ಬರ್ ಪಾಲಿಗಿದೆ. ಇದರೊಂದಿಗೆ ಕೆರ್ಬರ್ ವಿರುದ್ಧ ಕಸತ್ಕಿನಾ ಅವರ ಗೆಲುವಿನ ದಾಖಲೆ 3-2ಕ್ಕೆ ವಿಸ್ತರಿಸಲ್ಪಟ್ಟಿತು. ಇದು ಕಸತ್ಕಿನಾ ಪಾಲಿನ 3ನೇ ಇಂಡಿಯನ್ ವೆಲ್ಸ್ ಟೂರ್ನಿಯಾಗಿದ್ದು, ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸಿದ್ದಾರೆ.
ಮೂರನೇ ಮುಖಾಮುಖಿ
ದರಿಯಾ ಕಸತ್ಕಿನಾ ಮತ್ತು ವೀನಸ್ ವಿಲಿಯಮ್ಸ್ ಈವರೆಗೆ 2 ಸಲ ಮುಖಾಮುಖೀಯಾಗಿದ್ದಾರೆ. ಎರಡನ್ನೂ 2016ರಲ್ಲಿ ಆಡಲಾಗಿತ್ತು. ಆಕ್ಲೆಂಡ್ ಟೂರ್ನಿಯಲ್ಲಿ ಕಸತ್ಕಿನಾ ಜಯ ಸಾಧಿಸಿದರೆ, ವಿಂಬಲ್ಡನ್‌ನಲ್ಲಿ ವೀನಸ್ ಗೆದ್ದು ಬಂದಿದ್ದರು. ಎರಡೂ ಪಂದ್ಯಗಳು 3 ಸೆಟ್‌ಗಳಿಗೆ ವಿಸ್ತರಿಸಲ್ಪಟ್ಟಿದ್ದವು. ಹೀಗಾಗಿ ಇಂಡಿಯನ್ ವೆಲ್ಸ್ ಸೆಮಿಫೈನಲ್ ಸಹಜವಾಗಿಯೇ ಅನೇಕ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.