Advertisement

ಸಂಪೂರ್ಣ ಹದಗೆಟ್ಟ ವೇಣೂರು ಹೆದ್ದಾರಿ: ಸವಾರರಿಗೆ ಸಂಕಷ್ಟ

02:50 AM Nov 20, 2018 | Team Udayavani |

ವೇಣೂರು: ರಾಜ್ಯ ಹೆದ್ದಾರಿ 70ರ ವೇಣೂರು ಮುಖ್ಯಪೇಟೆಯ 2 ಕಿ.ಮೀ.ಯಲ್ಲಿ ವಾಹನಗಳು ನಿಂತು ನಿಂತು ಚಲಿಸುತ್ತವೆ. ಇದು ಟ್ರಾಫಿಕ್‌ ಜಾಮ್‌ ಸಮಸ್ಯೆಯಿಂದಲ್ಲ, ಇಲ್ಲಿನ ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರವೇ ದುಸ್ತರವಾಗಿದೆ. ರಾಜ್ಯ ಹೆದ್ದಾರಿ ಹೊಸಂಗಡಿಯಿಂದ ವೇಣೂರಿನ ಕರಿಮಣೇಲುವರೆಗೆ ವಿಸ್ತರಣೆಗೊಂಡು ಮರು ಡಾಮರು ಕಾಮಗಾರಿ ನಡೆದಿದೆ. ಹೆದ್ದಾರಿ ವಿಸ್ತರಣೆಗೊಳಿಸಿ ಡಾಮರು ಕಾಮಗಾರಿ ನಡೆಸಲು ವೇಣೂರು ನಗರ ಭಾಗದಲ್ಲಿ ಕೆಲವೊಂದು ಕಟ್ಟಡಗಳನ್ನು ತೆರವುಗೊಳಿಸಬೇಕಾದ ಅನಿವಾರ್ಯ ಇದೆ ಎಂದು ಅಂದು ಹೇಳುತ್ತಿದ್ದ ಜನಪ್ರತಿನಿಧಿಗಳು ಇಂದಿನವರೆಗೂ ವಿಸ್ತರಣೆ ಮಾಡಿಲ್ಲ, ಮರುಡಾಮರು ನಡೆಸಿಲ್ಲ. ಹೀಗಾಗಿ ವೇಣೂರು ಮುಖ್ಯಪೇಟೆಯ ಸುಮಾರು 2 ಕಿ.ಮೀ.ವರೆಗೆ ವಾಹನ ಚಾಲನೆ ಮೃತ್ಯುವಿಗೆ ಆಹ್ವಾನ ನೀಡುವಂತಿದೆ.

Advertisement


ಕಳೆದ ಮಳೆಗಾಲದ ಭಾರೀ ಮಳೆಗೆ ಹೆದ್ದಾರಿಯಲ್ಲೇ ನೀರು ಹರಿದು ತೋಡಾಗಿ ಮಾರ್ಪಟ್ಟಿತ್ತು.  ಇದೀಗ ಆ ತೋಡು ವಾಹನ ಸವಾರರಿಗೆ ಕಂಟಕವಾಗಿ ಪರಿಣಮಿಸಿದೆ. ಹಲವು ಮಹಿಳಾ ದ್ವಿಚಕ್ರ ಸವಾರರು, ಸವಾರರು ಹೊಂಡಕ್ಕೆ ಸಿಲುಕಿ ಬಿದ್ದು ಗಾಯಗೊಡ ಹಲವು ಉದಾಹರಣೆಗಳಿವೆ. ಈ ಹಿಂದೆ ಹಲವು ಬಾರಿ ದುರಸ್ತಿ ಕಾರ್ಯ ನಡೆಸಲಾಗಿದ್ದರೂ ಅದು ಸ್ವಲ್ಪ ದಿನಕ್ಕಷ್ಟೇ ಪರಿಹಾರ ನೀಡಿತ್ತು. ಆದರೆ ಇದೀಗ ಹೆದ್ದಾರಿಯಲ್ಲಿ ಬೃಹತ್‌ ಹೊಂಡಗಳೇ ನಿರ್ಮಾಣ ಆಗಿವೆ.

ಚರಂಡಿ ಅವ್ಯವಸ್ಥೆ
ನಗರ ಭಾಗದ ಹೆದ್ದಾರಿಗೆ ಕೆಲವೆಡೆ ಚರಂಡಿ ವ್ಯವಸ್ಥೆಯೇ ಇಲ್ಲವಾಗಿದೆ. ಹೀಗಾಗಿ ಮಳೆಗಾಲದಲ್ಲಿ ಹೆದ್ದಾರಿಯಲ್ಲೇ ನೀರು ಹರಿದು ತೋಡಾಗಿ ಮಾರ್ಪಟ್ಟಿತ್ತು. ಮತ್ತಷ್ಟು ಅವಘಡಗಳು ಸಂಭವಿಸುವ ಮೊದಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ವೇಣೂರು ಮುಖ್ಯಪೇಟೆ ಹೆದ್ದಾರಿಯ ಇಕ್ಕೆಲಗಳಲ್ಲಿ ಚರಂಡಿ ಹಾಗೂ ರಸ್ತೆ ಅಭಿವೃದ್ಧಿಗೆ ತುರ್ತು ಗಮನ ಹರಿಯಬೇಕಾಗಿದೆ ಎಂಬ ಮಾತು ಸಾರ್ವಜನಿಕರಿಂದ ಕೇಳಿ ಬಂದಿದೆ.


ಸರಕಾರಕ್ಕೆ ಪ್ರಸ್ತಾವನೆ

ವೇಣೂರಿನ ಕರಿಮಣೇಲುವಿನಿಂದ ಗುರುವಾಯನಕೆರೆವರೆಗಿನ ಹೆದ್ದಾರಿ ವಿಸ್ತರಣೆಗೊಳಿಸಿ ಅಭಿವೃದ್ಧಿಗೆ ಸರಕಾರಕ್ಕೆ ಈಗಾಗಲೇ ಪ್ರಸ್ತಾವನೆ ಕಳುಹಿಸಲಾಗಿದ್ದು, ಶೀಘ್ರ ಅನುದಾನ ದೊರೆಯುವ ನಿರೀಕ್ಷೆ ಇದೆ.  
– ಹರೀಶ್‌ ಪೂಂಜ, ಶಾಸಕರು, ಬೆಳ್ತಂಗಡಿ

Advertisement

Udayavani is now on Telegram. Click here to join our channel and stay updated with the latest news.

Next