Advertisement
ವೇಣೂರಿನ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಯ ಮಹಾ ಮಸ್ತಕಾಭಿಷೇಕದ ಎರಡನೇ ದಿನವಾದ ಶುಕ್ರವಾರ ನಡೆದ ಧಾರ್ಮಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
Related Articles
Advertisement
ಮೂಡುಬಿದಿರೆ ಎಕ್ಸಲೆಂಟ್ ಶಿಕ್ಷಣ ಸಸಂಸ್ಥೆಗಳ ಆಡಳಿತ ನಿರ್ದೇಶಕ ಡಾ| ಬಿ.ಪಿ. ಸಂಪತ್ ಕುಮಾರ್ ಅವರು “ಕನ್ನಡ ಕವಿಗಳು ಕಂಡ ಬಾಹುಬಲಿಯ ಚಿತ್ರಣ’ ಉಪನ್ಯಾಸ ನೀಡಿದರು.
ಯುಗಳ ಮುನಿಶ್ರೀ 108 ಅಮೋಘಕೀರ್ತಿ ಮುನಿಮಹಾ ರಾಜರು ಮತ್ತು ಪರಮಪೂಜ್ಯ 108 ಶ್ರೀ ಅಮರಕೀರ್ತಿ ಮಹಾರಾಜರು, ಮುಕ್ತಿಶ್ರೀ ಮಾತಾಜಿ, ದಿವ್ಯಶ್ರೀ ಮಾತಾಜಿ ದಿವ್ಯ ಉಪಸ್ಥಿತಿಯಲ್ಲಿ ಧಾರ್ಮಿಕ ಸಭೆ ನಡೆಯಿತು.
ಸೇವಾಕರ್ತ ಪ್ರವೀಣ್ ಕುಮಾರ್ ಇಂದ್ರ ಸ್ವಾಗತಿಸಿದರು. ಸತ್ಯಪ್ರಭಾ ವಿ. ಜೈನ್ ವಂದಿಸಿದರು. ಶುಭಶ್ರೀ ಜೈನ್ ನಿರೂಪಿಸಿದರು.
ಹೆಲಿಕಾಪ್ಟರ್‌ನಿಂದ ಪುಷ್ಪಾರ್ಚನೆ
ಶುಕ್ರವಾರ ನಿತ್ಯ ವಿಧಿ ಸಹಿತ ಮೃತ್ತಿಕ ಸಂಗ್ರಹಣ, ಅಂಕುರಾರ್ಪಣೆ, ಪಂಚ ಕಲ್ಯಾಣ ಮಂಟಪ ಪ್ರವೇಶ, ಯಕ್ಷ ಪ್ರತಿಷ್ಠೆ, ಮಧ್ಯಾಹ್ನ ಧ್ವಜಾರೋಹಣ ಸಂಜೆ ಬ್ರಹ್ಮಸ್ತಂಭದ ಬ್ರಹ್ಮ ಯಕ್ಷ ಪ್ರತಿಷ್ಠೆ, ಅಗ್ರೋದಕ ಮೆರವಣಿಗೆ ಸಹಿತ 108 ಕಲಶಗಳಿಂದ ಮಹಾಮಸ್ತಕಾಭಿಷೇಕ, ಮಹಾಪೂಜೆ ಹಾಗೂ ಇನ್ನಿತರ ಕಾರ್ಯಕ್ರಮಗಳು ನಡೆದವು. ಎರಡನೇ ದಿನದ ಸೇವಾಕರ್ತರಾದ ಪ್ರವೀಣ್ ಕುಮಾರ್ ಇಂದ್ರ ಅವರ ನೇತೃತ್ವದಲ್ಲಿ ಮಧ್ಯಾಹ್ನ ಬಾಹುಬಲಿ ಮೂರ್ತಿಗೆ ಹೆಲಿಕಾಪ್ಟರ್ ಮೂಲಕ ಪುಷ್ಪಾರ್ಚನೆ ಜರಗಿತು. ಸಂಜೆ 7ರಿಂದ ಜಿನದಿಗಂಬರನಿಗೆ 108 ಕಲಷಾಭಿಷೇಕ, ಕ್ಷೀರ, ಎಳನೀರು, ಇಕ್ಷುರಸ, ಗಂಧ, ಚಂದನಾದಿ ಅಷ್ಟಗಂಧಗಳ ದ್ರವ್ಯದ ಮಜ್ಜನ ನೆರವೇರಿತು. ರಾತ್ರಿ ಆಳ್ವಾಸ್ ಸಾಂಸ್ಕೃತಿಕ ವೈಭವ, ಸುಗಮಸಂಗೀತ, ರಸಮಂಜರಿ, ನೃತ್ಯಾಂಜಲಿ ರಸದೌತಣ ನೀಡಿತು.
ಇಂದಿನ ಕಾರ್ಯಕ್ರಮ
ಫೆ. 24ರಂದು ಬೆಳಗ್ಗೆ ನಿತ್ಯವಿಧಿ ಸಹಿತ ಶ್ರೀ ಪೀಠ ಯಂತ್ರರಾಧನಾ ವಿಧಾನ, ಧ್ವಜಪೂಜೆ ಶ್ರೀ ಬಲಿ ವಿಧಾನ, ಮಧ್ಯಾಹ್ನ ಭಕ್ತಾಮರ ಯಂತ್ರಾರಾಧನ ವಿಧಾನ, ಅಗ್ರೋದಕ ಮೆರವಣಿಗೆ ಬಳಿಕ 108 ಕಲಶಗಳಿಂದ ಮಹಾಮಸ್ತಕಾಭಿಷೇಕ ಮಹಾಪೂಜೆ ಹಾಗೂ ಮಂಗಳಾರತಿ ಮೊದಲಾದ ವೈದಿಕ ಕಾರ್ಯಕ್ರಮಗಳು ನಡೆಯಲಿವೆ.
ಅಪರಾಹ್ನ 3ಕ್ಕೆ ಯುಗಳ ಮುನಿಗಳ ಆಶೀರ್ವಚನದೊಂದಿಗೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ. ಹರ್ಷೇಂದ್ರ ಕುಮಾರ್, ಶಾಸಕ ಹರೀಶ್ ಪೂಂಜ, ಎಂಎಲ್‌ಸಿ ಮಂಜುನಾಥ ಭಂಡಾರಿ, ಹೃದ್ರೋಗ ತಜ್ಞ ಡಾ| ಪದ್ಮನಾಭ ಕಾಮತ್, ಎಚ್‌ಪಿಸಿಎಲ್‌ನ ಡಿಜಿಎಂ ನವೀನ್ ಕುಮಾರ್‌ಎಂ.ಜಿ., ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಜಿನೇಂದ್ರ ಕಣಗಾವಿ, ಹೈಕೋರ್ಟ್‌ನ ಹಿರಿಯ ನ್ಯಾಯವಾದಿ ಪಿ.ಪಿ. ಹೆಗ್ಡೆ ಭಾಗವಹಿಸುವರು. ಜಿನ ಸಿದ್ಧಾಂತದ ಶ್ರೇಷ್ಠತೆ-ಅನೇಕಾಂತವಾದದ ಕುರಿತು ಪತ್ರಕರ್ತ ಅಜಿತ್ ಹನುಮಕ್ಕನವರ್ ಉಪನ್ಯಾಸ ನೀಡಲಿರುವರು.
ಸಂಜೆ ಅಜಯ್ ವಾರಿಯರ್ ಮತ್ತು ಬಳಗದವರಿಂದ ಸಂಗೀತಯಾನ, ಭರತನಾಟ್ಯ, ನೃತ್ಯ ಸಂಗಮ ನಡೆಯಲಿದೆ.
ವಾಹನ ಮಾರ್ಗ ಬದಲಾವಣೆ
ಮಂಗಳೂರು: ಮಹಾಮಸ್ತಕಾಭಿಷೇಕ ಸಂದರ್ಭ ಜನದಟ್ಟಣೆಯಿಂದ ರಸ್ತೆ ಸಂಚಾರಕ್ಕೆ ಅಡಚಣೆ ಆಗುವ ಸಾಧ್ಯತೆ ಇರುವುದರಿಂದ ಮಾ. 1ರ ವರೆಗೆ ಮೂಡುಬಿದಿರೆ ಕಡೆಯಿಂದ ವೇಣೂರು ಮೇಲಿನ ಪೇಟೆಯ ಮುಖಾಂತರ ಬೆಳ್ತಂಗಡಿ ಸಂಪರ್ಕಿಸುವ ವಾಹನಗಳ ಸಂಚಾರಕ್ಕೆ ಬದಲಿ ದಾರಿಯನ್ನು ಸೂಚಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಎಂ.ಪಿ. ಆದೇಶಿಸಿದ್ದಾರೆ.
ಲಘು ವಾಹನ ಪಡ್ಯಾರಬೆಟ್ಟು, ಹೊಕ್ಕಾಡಿಗೋಳಿ, ಕೂಡುರಸ್ತೆ, ಬಜಿರೆ, ಮುದ್ದಾಡಿ, ನೈನಾಡು ಮೂಲಕ ಗೋಳಿಯಂಗಡಿ ಆಗಿ ಬೆಳ್ತಂಗಡಿ ರಸ್ತೆಗೆ ಸಂಪರ್ಕಿಸಬೇಕು.
ಬೆಳ್ತಂಗಡಿ ಕಡೆಯಿಂದ ಬಂದು ವೇಣೂರು ಪೇಟೆ ಮುಖಾಂತರ ಮೂಡುಬಿದಿರೆ ಕಡೆಗೆ ಹೋಗುವ ಲಘು ವಾಹನಗಳು ಗೋಳಿಯಂಗಡಿಯಿಂದ ಪಥ ಬದಲಿಸಿ ನೈನಾಡು, ಬಜಿರೆ, ಆರಂಬೋಡಿ, ಪಡ್ಯಾರಬೆಟ್ಟು ಮೂಲಕ ಮುಖ್ಯ ರಸ್ತೆಯನ್ನು ಸಂಪರ್ಕಿಸಬೇಕು.
ಮೂಡುಬಿದಿರೆಯಿಂದ ಬೆಳ್ತಂಗಡಿಗೆ ಹೋಗುವ ಘನ ವಾಹನ ಮೂಡುಬಿದಿರೆ ಶಿರ್ತಾಡಿ, ನಾರಾವಿ, ಗುರುವಾಯನಕೆರೆ ಮೂಲಕ ಬೆಳ್ತಂಗಡಿ ಕಡೆಗೆ ಹಾಗೂ ಬೆಳ್ತಂಗಡಿಯಿಂದ ಮೂಡಬಿದಿರೆಗೆ ಹೋಗುವ ಘನ ವಾಹನ ಗುರುವಾಯನಕೆರೆ, ನಾರಾವಿ, ಮೂಡುಬಿದಿರೆ ಮೂಲಕ ಸಂಚರಿಸಬೇಕು.