Advertisement

ಕೈ ನಾಯಕರಿಗಿಂದು ವೇಣುಗೋಪಾಲ ಕ್ಲಾಸ್‌!

10:13 AM Oct 06, 2017 | Team Udayavani |

ಬೆಂಗಳೂರು: ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸಲು ರೂಪಿಸಿದ್ದ ಮಹತ್ವಾಕಾಂಕ್ಷಿ ಮನೆ ಮನೆಗೆ ಕಾಂಗ್ರೆಸ್‌ ಯೋಜನೆ ಟೇಕ್‌ ಅಪ್‌ ಆಗದಿರುವುದಕ್ಕೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ ಗರಂ ಆಗಿದ್ದಾರೆ. ಶುಕ್ರವಾರ ಸರಣಿ ಸಭೆಗಳನ್ನು ನಡೆಸಿ ರಾಜ್ಯನಾಯಕರಿಗೆ ಕ್ಲಾಸ್‌ ತೆಗೆದುಕೊಳ್ಳಲಿದ್ದಾರೆ. 

Advertisement

ಯೋಜನೆಯನ್ನು ಜಾರಿ ಗೊಳಿಸುವಲ್ಲಿ ಶಾಸಕರ ನಿರಾಸಕ್ತಿ ಹಿನ್ನೆಲೆಯಲ್ಲಿ ವೇಣುಗೋಪಾಲ್‌ಗೆ ದೂರು ಸಲ್ಲಿಕೆಯಾಗಿದೆ. ಹೀಗಾಗಿ ಸಿಟ್ಟಾಗಿರುವ ಅವರು, ತುರ್ತು ಶಾಸಕಾಂಗ ಸಭೆ ಕರೆಯಲು ಸೂಚಿಸಿದ್ದು, ಶುಕ್ರವಾರ ಬೆಳಗ್ಗೆಯಿಂದ
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಶೇಷ ಶಾಸಕಾಂಗ ಪಕ್ಷದ ಸಭೆಗಳನ್ನು ನಡೆಸಲಿದ್ದಾರೆ. ಸಭೆಯಲ್ಲಿ ಬೂತ್‌ಮಟ್ಟದ ಕಮಿಟಿ ರಚನೆ ಮತ್ತು ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮ ಜಾರಿಗೊಳಿಸುವಲ್ಲಿ ನಿರ್ಲಕ್ಷ್ಯ ವಹಿಸಿರುವ ಶಾಸಕರಿಗೆ ಎಚ್ಚರಿಕೆ ಸಂದೇಶ ರವಾನಿಸುವ ಸಾಧ್ಯತೆಗಳಿವೆ. ಬಳಿಕ ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮ ಅನುಷ್ಠಾನ ಸಮಿತಿಯೊಂದಿಗೆ ಪ್ರತ್ಯೇಕ ಸಭೆ ನಡೆಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್‌ ಅಧ್ಯಕ್ಷತೆಯಲ್ಲಿ ರಚನೆಯಾಗಿರುವ ಅನುಷ್ಠಾನ ಸಮಿತಿ ಸರಿಯಾಗಿ ಮೇಲುಸ್ತುವಾರಿ ನಡೆಸುತ್ತಿಲ್ಲವೆಂದು ಈಗಾಗಲೇ ವೇಣುಗೋಪಾಲ ಅವರು ಅಧ್ಯಕ್ಷರಿಗೆ ದೂರವಾಣಿ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆಂದು ತಿಳಿದು ಬಂದಿದೆ. ಶುಕ್ರವಾರ ಈ
ಸಮಸ್ಯೆಗಳ ಕುರಿತು ಚರ್ಚಿಸಲಿದ್ದಾರೆ.

ಸಂಜೆ ಪದಾಧಿಕಾರಿಗಳಿಗೆ ಉಸ್ತುವಾರಿ ವಹಿಸಿರುವ ಜಿಲ್ಲೆಗಳಲ್ಲಿ ಬೂತ್‌ ಕಮಿಟಿ ರಚನೆ ಕುರಿತು ಪದಾಧಿಕಾರಿಗಳಿಗೆ ಕ್ಲಾಸ್‌ ತೆಗೆದುಕೊಳ್ಳುವ ಸಾಧ್ಯತೆಯಿದೆ. ಈ ಹಿಂದೆ ಪಕ್ಷದಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಪದಾಧಿಕಾರಿಗಳನ್ನು ನಿರ್ದಾಕ್ಷಿಣ್ಯವಾಗಿ ತೆಗೆಯುವುದಾಗಿ ಎಚ್ಚರಿಕೆ ನೀಡಿದ್ದರು. ಈ ಬಾರಿಯೂ ಮತ್ತೆ ಎಚ್ಚರಿಸುವ ಸಾಧ್ಯತೆಯಿದೆ.

ಮುಂಚೂಣಿ ಘಟಕಗಳ ಸಭೆ: ವೇಣುಗೋಪಾಲ
ಉಸ್ತುವಾರಿ ವಹಿಸಿಕೊಂಡು ಬಂದ ಮೇಲೆ ರಾಜ್ಯ ಕಾಂಗ್ರೆಸ್‌ನ ಎಲ್ಲ ಘಟಕಗಳನ್ನು ಸಕ್ರಿಯಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ಅಲ್ಲದೇ, 2018ರ ಚುನಾವಣೆಗೆ ಪ್ರತಿಯೊಂದು ಘಟಕ ಮಾಡುವ ಕಾರ್ಯಕ್ರಮಗಳ ಪಟ್ಟಿ
ಸಿದ್ಧಪಡಿಸಲು ಸೂಚಿಸಿದ್ದರು. ಆದರೆ, ಯಾವುದೇ ಘಟಕ ಅವರ ಆದೇಶವನ್ನು ಗಂಭೀರವಾಗಿ ಪರಿಗಣಿಸದಿರುವುದರಿಂದ ವಿವಿಧ ಘಟಕಗಳ ಅಧ್ಯಕ್ಷರಿಗೂ ವೇಣುಗೋಪಾಲ ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next