Advertisement

“ಕಿಂಡಿ ಅಣೆಕಟ್ಟು ನೀರು ಸೋರಿಕೆ-ಕಾಮಗಾರಿ ಲೋಪ?’

04:43 PM Feb 28, 2017 | Harsha Rao |

ಉಡುಪಿ: ನೀರಾವರಿ ಇಲಾಖೆಯವರು ನದಿಗೆ ಅಡ್ಡಲಾಗಿ ಕಟ್ಟಿರುವ ಕಿಂಡಿ ಅಣೆಕಟ್ಟಿಗೆ ಅಳವಡಿಸಿರುವ ಹಲಗೆಯಲ್ಲಿ ನೀರು ಸೋರಿಕೆಯಾಗುತ್ತಿದೆ. ಸಮಸ್ಯೆಯನ್ನು ಅಧಿಕಾರಿಗಳ ಗಮನಕ್ಕೆ ತಂದರೆ ಸ್ಪಂದಿಸಿಲ್ಲ. ಇಂತಹ ಅನೇಕ ಕಾಮಗಾರಿಗಳಲ್ಲಿ ಲೋಪವಾಗಿದೆಯೇ ಎಂದು ಉಡುಪಿ ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌ ಅವರ ಅಧ್ಯಕ್ಷತೆಯಲ್ಲಿ ಉಡುಪಿ ತಾ.ಪಂ. ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆರೋಪಿಸಿದರು.

Advertisement

ಸದಸ್ಯ ಭುಜಂಗ ಶೆಟ್ಟಿಯವರು ವಿಷಯ ಪ್ರಸ್ತಾಪಿಸಿ, ಕಾಡೂರು, ಹೆಗ್ಗುಂಜೆ, ಶಿರೂರು, ಪೆಜಮಂಗೂರು ಗ್ರಾಮಗಳಿಗೆ ನೀರಿನ ಸಲುವಾಗಿ ಕೋಟಂಬೈಲಿನಲ್ಲಿ ಸೀತಾ ನದಿಗೆ ಅಡ್ಡಲಾಗಿ ಕಟ್ಟಿರುವ ಕಿಂಡಿ ಅಣೆಕಟ್ಟಿನಲ್ಲಿ ನೀರು ಸೋರಿಕೆಯಾಗುತ್ತಿದೆ ಎಂದು ಸಾರ್ವಜನಿಕರಿಂದ ಲಿಖೀತ ದೂರು ಬಂದಿದೆ. ಈ ಬಗ್ಗೆ ಅಧಿಕಾರಿಗಳು ಕೂಡ ಲಿಖೀತ ಉತ್ತರ ನೀಡಬೇಕು ಎಂದರು. ಇಲಾಖೆಯ ಎಂಜಿನಿಯರ್‌ ಹಾಜರಿರದ ಕಾರಣ ಅವರ ಸಹಾಯಕರೊಬ್ಬರು ಮುಂದಿನ ವಾರದಲ್ಲಿ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು. ಅವರು ನೀಡಿದ ಸಮಜಾಯಿಷಿಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು. 2 ದಿನದೊಳಗೆ ಕಿಂಡಿಅಣೆಕಟ್ಟು ಪ್ರದೇಶಕ್ಕೆ ಭೇಟಿ ಇತ್ತು ಪರಿಶೀಲನೆ ನಡೆಸಬೇಕು ಎಂದು ಅಧ್ಯಕ್ಷರು ಸೂಚಿಸಿದರು.

ಬೀದಿ ಶ್ವಾನಗಳ ನಿಯಂತ್ರಣಕ್ಕೆ ಆಯಾ ಗ್ರಾ.ಪಂ. ಕ್ರಮ ಕೈಗೊಳ್ಳಬೇಕು ಎಂದು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಹೇಳಿದರು. ಕ್ರಮ ಕೈಗೊಳ್ಳಲು ಎಲ್ಲ ಗ್ರಾ.ಪಂ.ಗಳಿಗೆ ಸುತ್ತೋಲೆ ಹೊರಡಿಸಲಾಗುವುದು ಎಂದು ಅಧ್ಯಕ್ಷರು ಹೇಳಿದರು. ಕಾಪು ಯೋಜನಾ ಪ್ರಾಧಿಕಾರಕ್ಕೆ ಗ್ರಾ.ಪಂ.ಗಳನ್ನು ಸೇರ್ಪಡೆ ಮಾಡುವುದನ್ನು ಸದಸ್ಯೆ ಶಶಿಪ್ರಭಾ ಶೆಟ್ಟಿ ವಿರೋಧಿಸಿದರು. ಸೇರ್ಪಡೆ ರದ್ದುಗೊಳಿಸಿ ಎಂದು ಆಗ್ರಹಿಸಿದರು. ಅಂಗನವಾಡಿಗೆ ಶಿಕ್ಷಕಿಯರ ನೇಮಕ, ಬ್ರಹ್ಮಾವರ ಪಂಚಾಯತ್‌ ಕಾಡು ಅತಿಕ್ರಮಣ ಇನ್ನಿತರ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
ಸದಸ್ಯರಾದ ಡಾ| ಸುನೀತಾ ಶೆಟ್ಟಿ, ರಜನಿ ಆರ್‌. ಅಂಚನ್‌, ಲಕ್ಷ್ಮೀನಾರಾಯಣ ಪ್ರಭು, ಬೆಳ್ಳೆ ಸುಜಾತಾ ಸುವರ್ಣ, ಧನಂಜಯ ಕುಂದರ್‌, ರಾಜೇಶ್‌ ಕುಮಾರ್‌ ಮತ್ತಿತರರು ಮಾತನಾಡಿದರು.

ತಾ.ಪಂ. ಉಪಾಧ್ಯಕ್ಷ ರಾಜೇಂದ್ರ ಪಂದುಬೆಟ್ಟು, ಸ್ಥಾಯಿ ಸಮಿತಿ ಅಧ್ಯಕ್ಷೆ ನೀತಾ ಗುರುರಾಜ್‌ ಪೂಜಾರಿ ಪಡುಬಿದ್ರಿ, ಇಒ ಶೇಷಪ್ಪ ಆರ್‌., ಬ್ರಹ್ಮಾವರ ವಿಶೇಷ ತಹಶೀಲ್ದಾರ್‌ ಪ್ರದೀಪ್‌ ಕುರುಡೇಕರ್‌ ಉಪಸ್ಥಿತರಿದ್ದರು. ಆರೋಗ್ಯ ಇಲಾಖೆಯ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಡಾ| ಮಾನಸ್‌ ಅವರು ತಾ.ಪಂ. ಸಭೆಯಲ್ಲಿ ಮಾನಸಿಕ ರೋಗದ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

“ಸಾಮಾನ್ಯಸಭೆ ರದ್ದು ಮಾಡಿ’
ಐರೋಡಿ ಗ್ರಾ.ಪಂ.ನಲ್ಲಿ ಅಕೌಂಟ್‌ ಆಫೀಸರ್‌, ಅಧ್ಯಕ್ಷರು ಸೇರಿಕೊಂಡು ಸಾಮಾನ್ಯಸಭೆ ನಡೆಸಿದ್ದಾರೆ. ಅವರಿಗೆ ನೊಟೀಸ್‌ ಕಳುಹಿಸಿ, ಸಾಮಾನ್ಯಸಭೆ ನಿರ್ಣಯಗಳನ್ನು ರದ್ದು ಮಾಡಿ. 2-3 ದಿನದೊಳಗೆ ಕ್ರಮ ಕೈಗೊಳ್ಳಿ ಎಂದು ಸದಸ್ಯೆ ವಸಂತಿ ಪೂಜಾರಿ ಆಗ್ರಹಿಸಿದರು.

Advertisement

ಪಡುಬಿದ್ರಿ: ಆಟದ ಮೈದಾನಕ್ಕೆ ತೊಂದರೆ ಬೇಡ
ಪಡುಬಿದ್ರಿಯ ನಡಾÕಲಿನಲ್ಲಿರುವ ಬೋರ್ಡು ಶಾಲಾ ಮೈದಾನದ ಪಕ್ಕದಲ್ಲಿ ತಾ.ಪಂ.ಗೆ ಸೇರಿದ ಕಟ್ಟಡವಿದೆ. ಅದರಲ್ಲಿ ಗೃಹರಕ್ಷಕದಳದವರು ಇರುವ ಕಟ್ಟಡ ಮೈದಾನಕ್ಕೆ ಅಡ್ಡವಾಗಿದೆ. ಈ ಕಟ್ಟಡವನ್ನು ಪಕ್ಕಕ್ಕೆ ಸ್ಥಳಾಂತರಿಸಿ 
ಮೈದಾನವನ್ನು ವಿಸ್ತರಿಸಲು ಅವಕಾಶವಿದೆಯೇ ಎಂದು ಸದಸ್ಯ ದಿನೇಶ್‌ ಕೋಟ್ಯಾನ್‌ ಪ್ರಶ್ನಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷೆ ನೀತಾ ಗುರುರಾಜ್‌ ಪೂಜಾರಿ ಅವರು ಕೂಡ ದನಿಗೂಡಿಸಿ ಇಲ್ಲಿ ಮೈದಾನಕ್ಕೆ ಅಡ್ಡಿಯಾಗುವಂತಹ ಕಾಮಗಾರಿ ಬೇಡ. ಸ್ಥಳೀಯ ಶಾಲೆ, ಸಂಸ್ಥೆಗಳ ಮುಖಂಡರೊಂದಿಗೆ ಸಭೆ ನಡೆಸೋಣ. ಸ್ಥಳೀಯ ಜನರಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದರು. ಜಾಗವು ತಾ.ಪಂ.ಗೆ ಸೇರಿದ್ದರೆ ತಾ.ಪಂ. ಆಸ್ತಿಯನ್ನು ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ಅಧ್ಯಕ್ಷೆ ನಳಿನಿ ಪ್ರದೀಪ್‌ ಹೇಳಿದರು.

“ಮದಗದಲ್ಲಿ ಮೀನುಗಾರಿಕೆ-ನೀರು ಕಲುಷಿತ’
ಚಾಂತಾರಿನಲ್ಲಿ ಸಣ್ಣ ನೀರಾವರಿ ಇಲಾಖೆಗೆ ಸೇರಿರುವ 33 ಎಕರೆ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಮದಗದಲ್ಲಿ ಬಲೆ ಹಾಕಿ ಮೀನುಗಾರಿಕೆ ನಡೆಸುತ್ತಿದ್ದಾರೆ. ಇದರಿಂದ ಸಮೀಪದ ಹಂದಾಡಿ, ಚಾಂತಾರು, ಆರೂರು ಗ್ರಾ.ಪಂ.ಗಳಿಗೆ ಸೇರಿದ 3 ಬಾವಿಯ ನೀರು ಕಲುಷಿತವಾಗಿದೆ. ಐಟಿಡಿಪಿ ವತಿಯಿಂದ ಕೊರಗ ಕಾಲನಿಗೆ ನೀರು ಒದಗಿಸುವ ಬಾವಿಯೂ ಕಲುಷಿತವಾಗಿದೆ. ಜನವರಿಯಿಂದ ಮೇ ವರೆಗೆ ಮೀನು ಹಿಡಿಯಬೇಡಿ ಎಂದು ಸದಸ್ಯ ಸುಧೀರ್‌ ಕುಮಾರ್‌ ಶೆಟ್ಟಿ ಆಗ್ರಹಿಸಿದರು. ಒಳನಾಡು ಮೀನುಗಾರಿಕೆಯವರು ಮೀನಿನ ಮರಿಗಳನ್ನು ಬಿಟ್ಟು ಬಳಿಕ ಟೆಂಡರ್‌ ಕರೆದು ಮೀನು ಹಿಡಿಯಲು ಅನುಮತಿ ನೀಡುತ್ತಾರೆ ಎಂದು ಅಧಿಕಾರಿಗಳು ಹೇಳಿದರು. ಕುಡಿಯುವ ನೀರಿಗೆ ಅಭಾವವಿರುವಾಗ ಈ ರೀತಿ ಮಾಡಬೇಡಿ ಎಂದು ಅಧ್ಯಕ್ಷರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next