Advertisement

ವೆಂಕಟೇಶ್‌ ಹೆಸರು ಪಿರಿಯಾಪಟ್ಟಣದಲ್ಲಿ ಶಾಶ್ವತ ಉಳಿಯುತ್ತೆ

12:51 PM Jun 01, 2017 | Team Udayavani |

ಪಿರಿಯಾಪಟ್ಟಣ: ಕಾವೇರಿ ನದಿಯಿಂದ ತಾಲೂಕಿನ 150 ಕೆರೆಗಳನ್ನು ತುಂಬಿಸುವ ಯೋಜನೆ ಸೇರಿದಂತೆ ತಾಲೂಕಿಗೆ 508 ಕೋಟಿ ರೂ. ಗಳ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಜಿಲ್ಲಾಡಳಿತ, ಜಿಪಂ ಬುಧವಾರ ತಾಲೂಕಿನ ಮುತ್ತಿನ ಮುಳಸೋಗೆ ಗ್ರಾಮದಲ್ಲಿ ಏರ್ಪಡಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

Advertisement

ಪಿರಿಯಾಪಟ್ಟಣ ತಾಲೂಕಿನ ಬತ್ತಿಹೋದ ಕೆರೆಗಳಿಗೆ ಮುತ್ತಿನ ಮುಳಸೋಗೆ ಗ್ರಾಮದ ಬಳಿ ಕಾವೇರಿ ನದಿಯಿಂದ ಏತ ನೀರಾವರಿ ಮೂಲಕ ತಾಲೂಕಿನ 150 ಕೆರೆಗಳಿಗೆ 295 ಕೋಟಿ ವೆಚ್ಚದಲ್ಲಿ ಕುಡಿಯುವ ನೀರು ತುಂಬಿಸುವುದು, ತಾಲೂಕು ವ್ಯಾಪ್ತಿಯ ಹಾರಂಗಿ ಬಲದಂಡೆ ನಾಲೆಯ ಆಧುನೀಕರಣ ಕಾಮಗಾರಿಗೆ 73 ಕೋಟಿ ರೂ. ಹಾಗೂ ಪಿರಿಯಾಪಟ್ಟಣದಲ್ಲಿ 57 ಕೋಟಿ ವೆಚ್ಚದಲ್ಲಿ ಒಳಚರಂಡಿ ಕಾಮಗಾರಿ ಸೇರಿದಂತೆ 508 ಕೋಟಿ ರೂ.ಗಳ ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ಮಾಡಿರುವುದಾಗಿ ಹೇಳಿದರು.

ತಾಲೂಕಿನ 150 ಕೆರೆಗಳನ್ನು ತುಂಬಿಸಲು ಕಾವೇರಿ ನದಿಯಿಂದ 0.722 ಟಿಎಂಸಿ ನೀರನ್ನು ಎತ್ತಲಾಗುವುದು. ಇದರಿಂದ ನೀರಾವರಿ, ಕುಡಿಯುವ ನೀರು, ಪಂಪ್‌ಸೆಟ್‌ಗಳಿಗೆ ಅನುಕೂಲವಾಗುವುದಲ್ಲದೆ, ಅಂತರ್ಜಲವು ವೃದ್ಧಿಯಾಗುತ್ತದೆ ಎಂದರು.

ಹಿಂದಿನ ಯಾವುದೇ ಶಾಸಕ ಕ್ಷೇತ್ರಕ್ಕೆ ಇಷ್ಟು ಕೆಲಸ ಮಾಡಿದ್ರಾ ಎಂದು ಪ್ರಶ್ನಿಸಿದ ಅವರು, ಕೆರೆ ತುಂಬಿಸುವ ಯೋಜನೆಗೆ ಶಾಸಕ ಕೆ.ವೆಂಕಟೇಶ್‌ ಒಂದು ವರ್ಷದಿಂದ ನನ್ನ ಮೇಲೆ ಒತ್ತಡ ತರುತ್ತಿದ್ದರು, ಹೀಗಾಗಿ ಇದಕ್ಕೆ ಕಾರಣಕರ್ತರು ವೆಂಕಟೇಶ್‌, ಪಿರಿಯಾಪಟ್ಟಣ ತಾಲೂಕಿನಲ್ಲಿ ಅವರ ಹೆಸರು ಶಾಶ್ವತವಾಗಿ ಉಳಿಯುತ್ತದೆ. ಕ್ಷೇತ್ರದ ಜನತೆ ಅವರನ್ನು ಚುನಾಯಿಸಿದ್ದು ಸಾರ್ಥಕವಾಯಿತು ಎಂದು ಹೇಳಿದರು.

ಎರಡು ವರ್ಷಗಳಿಂದ ಬರಗಾಲ ಇರುವುದರಿಂದ ರಾಜ್ಯದ ಆರ್ಥಿಕ ಬೆಳೆವಣಿಗೆಯೂ ಕುಂಠಿತವಾಯಿತು. ಬೋರ್‌ವೆಲ್‌ಗ‌ಳಲ್ಲೂ ನೀರು ಸಿಗುತ್ತಿಲ್ಲ. ಬೋರ್‌ವೆಲ್‌ಗ‌ಳಲ್ಲಿ ಜಲ ಮುರಪೂರಣವಾಗಲು ಹೆಚ್ಚು ಮಳೆಯಾಗಬೇಕು. ಜತೆಗೆ ಕೆರೆ ತುಂಬಿಸಬೇಕು. ಈ ವರ್ಷ ಮೇ ನಲ್ಲೇ ಒಳ್ಳೆ ಮಳೆಯಾಗುತ್ತಿರುವುದು ಸಂತಸದ ವಿಷಯ. ಒಳ್ಳೆ ಮಳೆಯಾಗಿ ಒಳ್ಳೆ ಬೆಳೆಯಾಗಿ ರೈತರ ಜೀವನ ಸುಗಮವಾಗಲಿ ಎಂದು ಆಶಿಸಿದರು.

Advertisement

ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ಮಾತನಾಡಿ, ನೀರಾವರಿ ಕ್ಷೇತ್ರದಲ್ಲಿ ಕಳೆದ 20 ವರ್ಷಗಳಲ್ಲಿ ಆಗದಷ್ಟು ಕೆಲಸವನ್ನು ನಾಲ್ಕು ವರ್ಷಗಳಲ್ಲಿ ಮಾಡಿದ್ದು, ಇನ್ನುಳಿದ ಒಂದು ವರ್ಷದಲ್ಲಿ ಹೆಚ್ಚು ಕೆಲಸ ಮಾಡುತ್ತೇವೆ. ರಾಜ್ಯದ ಎಲ್ಲ ಕೆರೆಗಳನ್ನು ತುಂಬಿಸಲು ಸರ್ಕಾರ ಬದ್ಧವಾಗಿದ್ದು, ಕೆರೆ ತುಂಬಿಸುವ 75 ಯೋಜನೆಗಳ ಪೈಕಿ ಕಾವೇರಿ ಕಣಿವೆಯಲ್ಲೇ 40 ಯೋಜನೆ ಜಾರಿ ಮಾಡಲಾಗುತ್ತಿದೆ. 6 ಸಾವಿರ ಕೋಟಿ ವೆಚ್ಚದಲ್ಲಿ ರಾಜ್ಯದ 1400 ಕೆರೆಗಳನ್ನು ತುಂಬಿಸುವ ಯೋಜನೆ ಕೈಗೆತ್ತಿಕೊಂಡಿದ್ದು, ಈಗಾಗಲೇ 3 ಸಾವಿರ ಕೋಟಿ ವೆಚ್ಚ ಮಾಡಿರುವುದಾಗಿ ಹೇಳಿದರು.

ನೀರನ್ನು ಶುದ್ಧೀಕರಿಸಿ ಸರಬರಾಜು: ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಅಭಾವ ತಲೆದೋರದಂತೆ ಸಮುದ್ರದ ನೀರನ್ನು ಶುದ್ಧೀಕರಿಸಿ ಸರಬರಾಜು ಮಾಡುವ 1500 ಕೋಟಿ ವೆಚ್ಚದ ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ಆರ್‌.ರೋಷನ್‌ ಬೇಗ್‌ ತಿಳಿಸಿದರು.

ಖಾಸಗಿ ಸಹಭಾಗಿತ್ವದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಿದ್ದು, ಸಿಂಗಾಪುರ, ಮಲೇಷ್ಯಾ, ದುಬೈಗಳಲ್ಲಿ ಸಮುದ್ರದ ನೀರನ್ನು ಶುದ್ಧೀಕರಿಸಿ ಕುಡಿಯಲು ಬಳಸುವಂತೆ ಮಂಗಳೂರು ನಗರಕ್ಕೆ ನಿತ್ಯ 200 ಎಂಎಲ್‌ಡಿ ಸಮುದ್ರದ ನೀರನ್ನು ಶುದ್ಧೀಕರಿಸಿ ಕುಡಿಯಲು ಸರಬರಾಜು ಮಾಡಲಾಗುವುದು. ಈ ಸಂಬಂಧ ಭೌತಿಕ ವರದಿಯನ್ನು ಸದ್ಯದಲ್ಲೇ ಸಿದ್ಧಪಡಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next