ಹೊಸದಿಲ್ಲಿ : ಉಗ್ರರಿಗೆ ನೆರವು ನೀಡುವ ವಿಚಾರದಲ್ಲಿ ಪಾಕಿಸ್ಥಾನ ವಿರುದ್ಧ ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿ ವೆಂಕಯ್ಯ ನಾಯ್ಡು ಕಿಡಿ ಕಾರಿದ್ದಾರೆ.
ಕಾರ್ಗಿಲ್ ಪರಾಕ್ರಮ ಪರೇಡ್ ಕಾರ್ಯಕ್ರಮದಲ್ಲಿ ಮಾಡತನಾಡಿದ ನಾಯ್ಡು ‘ಪಾಕ್ ಉಗ್ರರಿಗೆ ನೆರವು ನೀಡುವುದನ್ನು ಬಿಡಬೇಕು. 1971 ರ ಯುದ್ಧದಲ್ಲಿ ಏನಾಗಿದೆ ಎಂದು ನೆನಪು ಮಾಡಿಕೊಳ್ಳಿ. ಉಗ್ರವಾದವನ್ನು ಪೋಷಿಸುವುದರಿಂದ ನಿಮ್ಮ ಅಭಿವೃದ್ಧಿ ಸಾಧ್ಯವಿಲ್ಲ’ ಎಂದರು.
‘ಮಾನವತೆಯ ವಿರೋಧಿ ಉಗ್ರವಾದ,ಅದನ್ನು ಪಾಕ್ ಧರ್ಮದಲ್ಲಿ ಬೆರೆಸಿದೆ ಮತ್ತು ದುರದೃಷ್ಟವಷಾತ್ ರಾಜನೀತಿಯನ್ನಾಗಿಸಿಕೊಂಡಿದೆ’ ಎಂದರು.
‘ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಪುನಃರುಚ್ಚರಿಸಿದ ಅವರು ಒಂದು ಇಂಚು ಭೂಮಿಯನ್ನು ಪಾಕ್‌ಗೆ ಬಿಟ್ಟುಕೊಡುವ ಪ್ರಶ್ನೆ ಇಲ್ಲ’ ಎಂದರು.
‘ನಮ್ಮದು ಶಾಂತಿ ಬಯಸುವ ದೇಶ, ಯುದ್ಧ ನಮಗೆ ಬೇಡ.ಆದರೆ ತಾಳ್ಮೆ ಕೆಡಿಸುವ ಯತ್ನ ಮಾಡಿದರೆ ನಮ್ಮ ಸೈನಿಕರು ದಿಟ್ಟ ಉತ್ತರ ನೀಡಲಿದ್ದಾರೆ’ ಎಂದು ಎಚ್ಚರಿಕೆ ನೀಡಿದರು.
1971 ರಲ್ಲಿ ಬಾಂಗ್ಲಾ ವಿಮೋಚನೆ ಗಾಗಿ 13 ದಿನಗಳ ಕಾಲ ನಡೆದ ಯುದ್ಧದಲ್ಲಿ ಪಾಕ್ ಸೋತು ಸುಣ್ಣವಾಗಿತ್ತು.