Advertisement
ವೀವಿಯನ್ ಸಿಕ್ವೇರಾ ಅವರು ಈ ಡಿವೈನ್ ಸೆಂಟರ್‌ನಲ್ಲಿ ಬೋಧಕರಾಗಿ, ಕೌನ್ಸೆಲರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾಮಾನ್ಯವಾಗಿ ಮಂಗಳವಾರ ಸಂಜೆ ಮಂಗಳೂರಿನಿಂದ ಚಾಲಕುಡಿ ತೆರಳುವ ಅವರು ಶನಿವಾರ ವಾಪಸಾಗುತ್ತಾರೆ. ಆ. 14ರಂದು ಸಂಜೆ ಮಂಗಳೂರಿನಿಂದ ರೈಲಿನಲ್ಲಿ ಹೊರಟು ತಡರಾತ್ರಿ 2.30ಕ್ಕೆ ಚಾಲಕುಡಿ, ಅಲ್ಲಿಂದ 2.45ಕ್ಕೆ ಡಿವೈನ್ ಸೆಂಟರ್ ತಲುಪಿದ್ದರು. ಬುಧವಾರ ಬೆಳಗ್ಗೆ, ಸಂಜೆ ಬೋಧಕರಾಗಿ ಅಲ್ಲಿ ಕಾರ್ಯನಿರ್ವಹಿಸಿದ್ದು, ರಾತ್ರಿ 9.30ಕ್ಕೆ ಮಲಗಿದ್ದರು. ಡಿವೈನ್ ಸೆಂಟರ್‌ನಲ್ಲಿ ಕನ್ನಡ, ಕೊಂಕಣಿ, ಇಂಗ್ಲಿಷ್ ಭಾಷಿಗರು ಸಹಿತ ಒಟ್ಟು 1,500 ಮಂದಿ, ಮಲಯಾಳಿಗರು ಸುಮಾರು 2,000 ಮಂದಿಯಿದ್ದರು.
‘ನೆಲ ಮಹಡಿಗೆ ನೀರು ಬಂದ ಕಾರಣ ನಾವು ಒಂದನೇ ಮಾಳಿಗೆಗೆ ಹೋದೆವು. ಒಂದು ಗಂಟೆ ಅವಧಿಯಲ್ಲಿ ನೆಲ ಮಹಡಿಯ ಅರ್ಧ ತನಕ ನೀರು ತುಂಬಿತ್ತು. ನಾವಿದ್ದ ಕಟ್ಟಡವು 6 ಮಹಡಿಗಳಿಂದ ಕೂಡಿದ್ದರಿಂದ ವಾಸ್ತವ್ಯಕ್ಕೆ ಸಮಸ್ಯೆ ಆಗಿಲ್ಲ. ಪ್ರಾರ್ಥನೆಯಲ್ಲಿಯೇ ಬೆಳಗ್ಗಿನ ತನಕ ಕಾಲ ಕಳೆದೆವು. ಗುರುವಾರ ಬೆಳಗ್ಗೆ 9 ಗಂಟೆ ವೇಳೆಗೆ 10 ಅಡಿಗಳಷ್ಟು ನೀರು ತುಂಬಿದ್ದು, ಒಂದನೇ ಮಹಡಿ ತನಕ ನೀರಿತ್ತು. ಅಲ್ಲಿ ನಿಲ್ಲಿಸಿದ್ದ ವಾಹನಗಳೆಲ್ಲವೂ ಮುಳುಗಿದ್ದವು’. ಆಹಾರ ವಸ್ತುಗಳೆಲ್ಲವೂ ನೀರು ಪಾಲಾಗಿದ್ದವು. ಗುರುವಾರ ಮಧ್ಯಾಹ್ನ ಆಹಾರದ ಕೊರತೆ ಎದುರಾಯಿತು. ಅಂದು ನಮಗೆ ಒಂದು ಮುಷ್ಟಿ ಅನ್ನ, ಸಾರು ಬಡಿಸಲಾಗಿತ್ತು. ಅಂದು ರಾತ್ರಿ ತಿನ್ನಲು ಏನೂ ಇರಲಿಲ್ಲ. ಶುಕ್ರವಾರ ಬೆಳಗ್ಗೆ ಚಿಪ್ಸ್ ಮತ್ತು ಬ್ಲ್ಯಾಕ್ ಕಾಫಿ, ಸಂಜೆ ಹೆಲಿ ಕಾಪ್ಟರ್‌ನಲ್ಲಿ ಬ್ರೆಡ್ ಬಂದಿತ್ತು. ಎಲ್ಲರಿಗೂ ಎರಡು ಪೀಸ್ ಬ್ರೆಡ್, ಕಾಫಿ ವಿತರಿಸಲಾಗಿತು.
Related Articles
ವಿದ್ಯುತ್ ಸಂಪರ್ಕ ಇಲ್ಲದ ಕಾರಣ ನಳ್ಳಿ ನೀರು ಪೂರೈಕೆ ಇರಲಿಲ್ಲ. 6ನೇ ಮಾಳಿಗೆಯಲ್ಲಿದ್ದ ಟ್ಯಾಂಕ್‌ನಿಂದ ಹಗ್ಗದ ಮೂಲಕ ಬಕೆಟ್‌ನಲ್ಲಿ ನೀರನ್ನು ಎತ್ತಿ ಕುಡಿಯುವ ನೀರನ್ನು ನೀಡಲಾಗಿತ್ತು. ಒಬ್ಬೊಬ್ಬರಿಗೆ ಅರ್ಧ ಲೀ. ನೀರು ಮಾತ್ರ ಲಭಿಸಿತ್ತು. ಶನಿವಾರ ಬೆಳಗ್ಗೆ ನೆರೆ ನೀರು ಇಳಿದಿತ್ತು. ನಾನು ಮತ್ತು ನನ್ನ ಜತೆಗಿದ್ದ ಕರ್ನಾಟಕದ ಸುಮಾರು 50 ಮಂದಿ ಧ್ಯಾನ ಕೇಂದ್ರದ ಗೇಟ್ ಬಳಿ ಹೋದಾಗ ಅಲ್ಲಿ ಮಿಲಿಟರಿಯ ಲಾರಿ ಲಭಿಸಿದ್ದು, ಅದರಲ್ಲಿ ತೃಶ್ಶೂರಿಗೆ ಪಯಣಿಸಿದೆವು. ಅಲ್ಲಿಂದ ಕೇರಳದ ಸರಕಾರಿ ಬಸ್‌ನಲ್ಲಿ ಪಾಲಕ್ಕಾಡ್ ಗೆ ತೆರಳಿದೆವು. ಅಲ್ಲಿ ನಮಗೆ ಈ ಮೊದಲೇ ಮಾಜಿ ಶಾಸಕ ಜೆ.ಆರ್. ಲೋಬೋ, ಸಚಿವ ಯು.ಟಿ. ಖಾದರ್ ಅವರ ಪ್ರಯತ್ನದ ಫಲವಾಗಿ ವ್ಯವಸ್ಥೆ ಮಾಡಲಾಗಿದ್ದ ಕರ್ನಾಟಕ ಕೆಎಸ್‌ಆರ್‌ಟಿಸಿ ಬಸ್ ಲಭಿಸಿದ್ದು, ಅದರಲ್ಲಿ ಬೆಂಗಳೂರಿಗೆ ಪ್ರಯಾಣಿಸಿ ರವಿವಾರ ರಾತ್ರಿ ಮಂಗಳೂರಿಗೆ ತಲುಪಿದೆವು ಎಂದು ವೀವಿಯನ್ ಸಿಕ್ವೇರಾ ವಿವರಿಸಿದರು.
Advertisement
ಭಯದ ನಡುವೆ 3 ಹಗಲು, 3 ರಾತ್ರಿನೆರೆಯಿಂದಾಗಿ ಡಿವೈನ್ ಸೆಂಟರ್‌ನ ವಾಹನಗಳಿಗೆ, ಮುದ್ರಣಾಲಯ, ಜನರೇಟರ್‌ಗೆ ಹಾನಿಯಾಗಿದೆ. 150 ದನ, 200 ಹಂದಿ, ಕೋಳಿ ಮತ್ತು ಬಾತುಕೋಳಿಗಳು ನೀರು ಪಾಲಾದ ಮಾಹಿತಿ ಇದೆ. ಭಯದ ನಡುವೆಯೂ 3 ಹಗಲು, 3 ರಾತ್ರಿ ಕಳೆದೆವು. ದೇವರ ಅನುಗ್ರಹದಿಂದಾಗಿ ಅಲ್ಲಿದ ಯಾರೊಬ್ಬರಿಗೂ ಅಪಾಯ ಸಂಭವಿಸಿಲ್ಲ ಎಂದು ಸಿಕ್ವೇರಾ ತಿಳಿಸಿದರು. ಆ. 21ರಂದು ವೀವಿಯನ್ ಸಿಕ್ವೇರಾ ಮತ್ತು ಸಂಗಡಿಗರು ಮಂಗಳೂರಿನಲ್ಲಿ ಮಾಜಿ ಶಾಸಕ ಜೆ.ಆರ್. ಲೋಬೋ ಅವರನ್ನು ಭೇಟಿ ಮಾಡಿ ನೆರವು ಒದಗಿಸಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.