Advertisement

ಬಜಪೆ ಪರಿಸರದ ಮೂರು ರಸ್ತೆಗಳಲ್ಲಿ ವಾಹನ ಸಂಚಾರ ಅಪಾಯಕಾರಿ

12:23 PM May 31, 2018 | |

ಬಜಪೆ : ಬಜಪೆ ಪರಿಸರದ ಮೂರು ರಸ್ತೆಗಳು ಮಂಗಳವಾರ ಬಿದ್ದ ಮಳೆಯಿಂದಾಗಿ ಮಣ್ಣು ಕೊರೆದು ಹೋಗಿ ವಾಹನ ಸಂಚಾರಕ್ಕೆ ಅಪಾಯ ತಂದೊಡ್ಡಿವೆ. ಮಳೆಯಿಂದಾಗಿ ಬಜಪೆ -ಎಂಆರ್‌ ಪಿಎಲ್‌-ಸುರತ್ಕಲ್‌ ರಸ್ತೆಯ ಧೂಮಾವತಿ ಧಾಮಬಳಿಯ ಕಿರು ಸೇತುವೆಯ ಮಣ್ಣು ಕೊರೆದು ಸೇತುವೆ ಬಿರುಕುಬಿಟ್ಟಿದ್ದು, ಬಸ್‌ ಸಂಚಾರ ಸ್ಥಗಿತಗೊಂಡಿದೆ.

Advertisement

ಬಜಪೆ ತಾರಿ ಕಂಬ್ಳದಲ್ಲಿ ರಸ್ತೆಯನ್ನು ಬ್ಯಾರಿಕೇಡ್‌ ಹಾಕಿ ಬಂದ್‌ ಮಾಡಲಾಗಿದೆ. ಇದರಿಂದಾಗಿ ಎಂಆರ್‌ಪಿಎಲ್‌ ಹಾಗೂ
ಸುರತ್ಕಲ್‌ಗೆ ಹೋಗುವ ಬಸ್‌ಗಳು ಪೆರ್ಮುದೆಯಾಗಿ ಚಲಿಸಿವೆ. ಇತರ ವಾಹನಗಳು ಪೊರ್ಕೋಡಿಯಾಗಿ ಸುರತ್ಕಲ್‌ಗೆ ಸಂಚಾರ ಮಾಡಿವೆ.ಬಜಪೆ -ಮರವೂರು-ಮಂಗಳೂರು ರಾಜ್ಯ ಹೆದ್ದಾರಿ 67ರ ಕರಂಬಾರಿನ ಕಾಮಜಲು ಪ್ರದೇಶದಲ್ಲಿ ಚರಂಡಿ ಸಮಸ್ಯೆಯಿಂದಾಗಿ ಮಳೆ ನೀರು ರಸ್ತೆಯಲ್ಲಿ ಶೇಖರಣೆಗೊಂಡು ಇಕ್ಕೆಲದಲ್ಲಿ ಹರಿದು ಮಣ್ಣು ಕೊರೆದ ಕಾರಣ ಹೆದ್ದಾರಿ ಬದಿಯಲ್ಲಿ ಕಂದಕ ಸೃಷ್ಟಿಯಾಗಿದೆ.

ಇದರಿಂದಾಗಿ ಒಂದೇ ವಾಹನ ಚಲಿಸುವಂತಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬುಧವಾರ ಶಾಸಕ ಉಮಾನಾಥ ಕೋಟ್ಯಾನ್‌ ಅವರು ಭೇಟಿ ನೀಡಿ ಚರಂಡಿ ನಿರ್ಮಾಣಕ್ಕೆ ಸೂಚನೆ ನೀಡಿದ ಮೇಲೆ ಜೆಸಿಬಿ ಮೂಲಕ ಚರಂಡಿ ನಿರ್ಮಾಣದ ಜತೆಗೆ ಹೆದ್ದಾರಿ ಬದಿಯಲ್ಲಿ ಬಿದ್ದ ಕಂದಕವನ್ನು ಮಣ್ಣು ಹಾಕಿ ತುಂಬಿಸಲಾಯಿತು.

ಬಜಪೆ -ಹಳೆವಿಮಾನ ನಿಲ್ದಾಣ-ಉಣಿಲೆ-ಅದ್ಯಪಾಡಿ ರಸ್ತೆ
ಮಳೆಯಿಂದಾಗಿ ಕೊಳಂಬೆಯ ವಿಟ್ಲಬೆಟ್ಟು ದೇವಸ್ಥಾನದ ಬಳಿಯ ರಸ್ತೆಯಲ್ಲಿ ದೊಡ್ಡ ಕಂದಕ ನಿರ್ಮಾಣವಾಗಿತ್ತು.
ಇದರಿಂದ ಬಸ್‌ ಸಂಚಾರ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಯಿತು. ಮಂಗಳೂರು ವಿಮಾನ ನಿಲ್ದಾಣದ
ರನ್‌ ವೇ ನೀರು ಈ ಪ್ರದೇಶ ರಸ್ತೆಯಲ್ಲಿ ಸುರಿದ ಕಾರಣ ದೊಡ್ಡ ಕಂದಕ ಬೀಳಲು ಕಾರಣವಾಗಿದೆ. ಕಳೆದ ಸಾಲಿನಲ್ಲಿಯೂ ಇಲ್ಲಿ ಡಾಮಾರು ರಸ್ತೆ ನೀರಿನಲ್ಲಿ ಕೊಚ್ಚಿ ಹೋಗಿತ್ತು.

ತಗ್ಗು ಪ್ರದೇಶದ ಮನೆಗಳಿಗೆ ಹಾನಿ
ವಿಮಾನ ನಿಲ್ದಾಣದ ರನ್‌ವೇ ನೀರಿನ ರಭಸಕ್ಕೆ ಚರಂಡಿಗಳು ಕಂದಕವಾಗಿ ಪರಿವರ್ತನೆಗೊಂಡವು. ಮನೆಗಳಿಗೆ ಹೋಗುವ ರಸ್ತೆಯಲ್ಲಿ ಈ ನೀರು ಹರಿದು ತೋಡುಗಳಾದವು. ವಿದ್ಯುತ್‌ ಕಂಬಗಳು ಧರಶಾಯಿಯಾದವು. ಇಲ್ಲಿನ ತಗ್ಗು ಪ್ರದೇಶದ ಮನೆಗಳಿಗೆ ಹಾನಿಯುಂಟಾಯಿತು. ಮನೆ ಅಡಿಪಾಯ, ಗೋಡೆಗಳಲ್ಲಿ ಬಿರುಕು ಕಂಡುಬಂತು.

Advertisement

ಸ್ಥಳಕ್ಕೆ ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ಡಾ| ಭರತ್‌ ಶೆಟ್ಟಿ ಭೇಟಿ ನೀಡಿದರು. ಕಂದಾವರ ಗಾ.ಪಂ. ಅಧ್ಯಕ್ಷೆ ವಿಜಯ ಗೋಪಾಲ ಸುವರ್ಣ, ಪಿಡಿಒ ರೋಹಿಣಿ, ಗ್ರಾಮ ಲೆಕ್ಕಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮನೆ ಅಡಿಪಾಯದಲ್ಲಿ ಬಿರುಕು
ನೀರಿನ ರಭಸದಿಂದ ಮರವೊಂದು ವಿಟ್ಲಬೆಟ್ಟು ನಿವಾಸಿ ಶಿವರಾಮ್‌ ಕುಲಾಲ್‌ ಎಂಬವರ ಮನೆಗೆ ಬಿದ್ದು ಹಾನಿ ಉಂಟಾಯಿತು. ವಾಸು ಮೂಲ್ಯ ಹಾಗೂ ದೇವಪ್ಪ ಮೂಲ್ಯ ಎಂಬವರ ಮನೆಯ ಅಡಿಪಾಯದಲ್ಲಿ ಬಿರುಕು ಬಿಟ್ಟಿದೆ. ತಾರಾನಾಥ ಪೂಜಾರಿ, ದೇವಪ್ಪ ಪೂಜಾರಿ, ಲೀಲಾ ಪೂಜಾರಿ ಎಂಬವರ ಕುಡಿಯುವ ನೀರಿನ ಬಾವಿಗೆ ಮಣ್ಣು ಬಿದ್ದು ತುಂಬಿ ಹೋಗಿದೆ.ಬಾಲಕೃಷ್ಣ ಭಂಡಾರಿಯವರ ಕೆರೆ ಹಾಗೂ ಗದ್ದೆಗಳು ಮಣ್ಣಿನಿಂದ ತುಂಬಿ ಹೋಗಿವೆ.

Advertisement

Udayavani is now on Telegram. Click here to join our channel and stay updated with the latest news.

Next