ಆನೇಕಲ್: ಬೆಂಗಳೂರು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಹುಲಿ ಸಿಂಹ ಸಫಾರಿ ಆವರಣದಲ್ಲಿ ಹುಲಿ ಒಂದು ಪ್ರವಾಸಿಗರನ್ನು ಕರೆದೊಯ್ದಿದ್ದ ವಾಹನವನ್ನು ಎಳೆದಾಡಿದ ಹಳೆ ವಿಡಿಯೋ ಒಂದು ಈಗ ವೈರಲ್ ಆಗಿದೆ.
ಕಳೆದ ವರ್ಷದ ಕೊನೆಯ ನ.22 ರಂದು ಈ ದೃಶ್ಯವನ್ನು ಜೆಸ್ವಿನ್.ಸಿ ಹೆಸರಿನಲ್ಲಿ ಯೂಟ್ಯೂಬ್‌ಗ ಅಪ್‌ಲೋಡ್ ಆಗಿದೆ. ಕಳೆದ ಹತ್ತು ದಿನಗಳ ಹಿಂದೆಯೂ ಸಾಮಾಜಿಕ ಜಾಲತಾಣದಲ್ಲಿ ಇದೇ ವಿಡಿಯೋ ಹರಿದಾಡುತ್ತಿತ್ತು. ಆದರೆ ಶುಕ್ರವಾರ ಈ ವಿಡಿಯೋ ದೃಶ್ಯ ಮಾಧ್ಯಮಗಳಲ್ಲಿ ಇತ್ತೀಚೆಗೆ ನಡೆದ ಘಟನೆ ಎಂದು ಪ್ರಸಾರ ಮಾಡಲಾಗಿದೆ.
ಇಂಜಿನ್ ಆಫ್ ಆಗಿತ್ತು: ಉದ್ಯಾನ ವನದಲ್ಲಿನ ಸಫಾರಿಯ ಹುಲಿ ಆವರಣದಲ್ಲಿ ಗಂಡು ಹುಲಿ ರಂಜನ್ ಇದಾಗಿದ್ದು, ಕೆಲ ವರ್ಷಗಳಿಂದ ಈ ರೀತಿ ವರ್ತಿಸುತ್ತಿದೆ. ಈ ವಿಡಿಯೋದಲ್ಲಿ ಸೆರೆಯಾಗಿರುವ ದಿನ ಸಹ ಸಫಾರಿ ವಾಹನ ಸೈಲೋ (ವಾಹನ) ಪ್ರವಾಸಿಗರನ್ನು ಕರೆದೊಯ್ದಿತ್ತು. ಆ ಸಮಯದಲ್ಲಿ ವಾಹನದ ಇಂಜಿನ್ ಆಫ್ ಆಗಿದೆ. ಮತ್ತೆ ಸ್ಟಾರ್ಟ್ ಮಾಡಲು ಚಾಲಕ ಮುಂದಾದರೂ ಬ್ಯಾಟರಿ ಸಮಸ್ಯೆಯಿಂದ ಸಾಧ್ಯವಾಗಿರಲಿಲ್ಲ. ಆಗ ಹುಲಿ ರಂಜನ್ ವಾಹನ ಹಿಂಭಾಗದಿಂದ ಬಂಪರ್‌ನ್ನು ಕಚ್ಚಿ ಎಳೆದು ಹೋಗಲು ಯತ್ನಿಸಿದೆ. ಇದನ್ನು ಮತ್ತೂಂದು ಪ್ರವಾಸಿ ವಾಹನದಲ್ಲಿದ್ದ ಪ್ರವಾಸಿಗರು ಸೆರೆ ಹಿಡಿದು ನ.22 ರಂದು ಯೂಟ್ಯೂಬ್‌ಗ ಅಪ್‌ಲೋಡ್ ಮಾಡಿದ್ದಾರೆ.= ಇದೇ ರೀತಿ ಸಿಂಹ ಒಂದು ಸಫಾರಿ ವಾಹನದ ಚಕ್ರ ಕಚ್ಚಲು ಹೋಗಿದ್ದ ವಿಡಿಯೋ ಸಹ ಸೆರೆಯಾಗಿ ವೈರಲ್ ಆಗಿತ್ತು. ಕರಡಿ ಸಫಾರಿ ವಾಹನದ ಕಿಟಕಿ ಹಿಡಿದು ನಿಂತಿರುವ ವಿಡಿಯೋ ಸಹ ಸೆರೆಯಾಗಿತ್ತು. ಇಂತಹ ಘಟನೆಗಳು ಸಫಾರಿಯಲ್ಲಿ ಆಗಿಂದಾಗ್ಗೆ ನಡೆಯುತ್ತಿರುವುದು ಸಾಮಾನ್ಯವಾಗಿದೆ.
ಇದನ್ನೂ ಓದಿ:ಭಾರತದಲ್ಲಿ ಬಡವರಿಗೂ ಕೈಗೆಟುಕುವ ದರದಲ್ಲಿ ವ್ಯಾಕ್ಸಿನ್ ಲಭ್ಯ: ಕೆ.ಎಸ್.ಈಶ್ವರಪ್ಪ
ಹಳೆ ವಿಡಿಯೋ ಈಗ ವೈರಲ್: ಇಂತಹ ಘಟನೆ ಸಾಮಾನ್ಯ
ಈ ವಿಡಿಯೋ ಕುರಿತು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕರಾದ ವನಶ್ರೀ ವಿಪಿನ್ ಸಿಂಗ್ ಮಾತನಾಡಿ, ಈ ವಿಡಿಯೋ ತುಂಬಾ ಹಳೆಯದು. ಯಾರೋ ಪ್ರವಾಸಿಗರು ಈಗ ವಿಡಿಯೋವನ್ನು ವೈರಲ್ ಮಾಡಿದ್ದಾರೆ. ಅಂದು ಸಫಾರಿ ವಾಹನದ ಬ್ಯಾಟರಿ ಸಮಸ್ಯೆಯಾಗಿತ್ತು. ನಮ್ಮ ರೆಸ್ಕ್ಯೂ ಟೀಮ್ ಕೂಡಲೇ ಹೋಗಿ ವಾಹನವನ್ನು ಅಲ್ಲಿಂದ ಹೊರ ತಂದಿದ್ದಾರೆ. ಹುಲಿ ಹಾಗೂ ಪ್ರವಾಸಿಗರಿಗೆ ಯಾವುದೇ ತೊಂದರೆ ಆಗಿಲ್ಲ ಎಂದು ಅವರು ಹೇಳಿದರು. ಸಫಾರಿಯಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿರುತ್ತವೆ. ಆದರೆ ಸಾರ್ವಜನಿಕರು ಆ ವಿಡಿಯೋಗಳನ್ನು ವೈರಲ್ ಮಾಡಿದರೆ ನಾವು ಏನು ಹೇಳಲು ಸಾಧ್ಯವಿಲ್ಲ ಎಂದು ಹೇಳಿದರು.