Advertisement

ವಾಹನಗಳ ವಿಮೆ ನವೀಕರಣ: ಮಾಲಿನ್ಯ ತಪಾಸಣೆ ಪ್ರಮಾಣ ಪತ್ರ ಕಡ್ಡಾಯ

01:18 AM Sep 06, 2020 | mahesh |

ಮಣಿಪಾಲ: ವಾಹನಗಳ ವಿಮೆ ನವೀಕರಿಸುವ ಸಂದರ್ಭದಲ್ಲಿ ನಿಗದಿಪಡಿಸಲಾದ ಮಾಲಿನ್ಯ ನಿಯಂತ್ರಣ ಮಾನದಂಡಗಳನ್ನು ಪರಿಶೀಲಿಸುವಂತೆ ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ಎಲ್ಲ ವಿಮಾ ಸಂಸ್ಥೆಗಳಿಗೆ ಸೂಚನೆ ನೀಡಿದೆ. ಈ ಮೂಲಕ ಮಾಲಿನ್ಯ ನಿಯಂತ್ರಣಕ್ಕೆ ಕಠಿನ ಮಾರ್ಗಗಳನ್ನು ಅನುಸರಿಸಲು ಸರಕಾರ ಮುಂದಾಗಿದೆ. ವಿಮೆ ಪಾಲಿಸಿ ಮಾಡಿಸುವ ಸಂದರ್ಭದಲ್ಲಿ ಎಲ್ಲ ಮಾದ ರಿಯ ಮೋಟಾರು ವಾಹನಗಳ ಹೊಗೆ ತಪಾಸಣೆ ಪ್ರಮಾಣ ಪತ್ರವನ್ನು ಪರಿಶೀಲಿಸುವಂತೆ ಸೂಚಿಸಿದೆ. ಆಗಸ್ಟ್‌ 20ರಂದು ಐಆರ್‌ಡಿಎಐ ಈ ಸುತ್ತೋಲೆ ಹೊರಡಿಸಿದೆ.

Advertisement

ವಾಯು ಮಾಲಿನ್ಯ ಆತಂಕ
ದಿಲ್ಲಿ ಮಹಾನಗರದಲ್ಲಿ ವಾಯು ಮಾಲಿನ್ಯ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಇದು ಅಪಾಯಕಾರಿ ಮಟ್ಟದಲ್ಲಿದೆ. ವಾಯುಮಾಲಿನ್ಯದಿಂದಾಗಿ ವಾತಾವರಣ ಹದಗೆಡುತ್ತಿದ್ದು ಜನರು ಉಸಿರಾಡಲೂ ಪರದಾಟ ಅನುಭವಿಸುವಂತಾಗಿದೆ. ಇದು ಲಕ್ಷಾಂತರ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟು ಮಾಡಿದೆ. ಈ ನಿಟ್ಟಿನಲ್ಲಿ ವಾಯು ಮಾಲಿನ್ಯಕ್ಕೆ ಕಡಿವಾಣ ಹಾಕಲು ಮೋಟಾರು ವಿಮೆ ಸಂದರ್ಭ ಪಿಯುಸಿ ಪ್ರಮಾಣ ಪತ್ರ ಅಥವಾ pollution under control certificate P ಕಡ್ಡಾಯವಾಗಿ ಪಡೆಯಬೇಕು.

ಸುಪ್ರೀಂ ಕೋರ್ಟ್‌ ಹೇಳಿಕೆ
ಹೆಚ್ಚುತ್ತಿರುವ ವಾಹನ ಮಾಲಿನ್ಯದ ಬಗ್ಗೆ ಸುಪ್ರೀಂ ಕೋರ್ಟ್‌ ಕಳವಳ ವ್ಯಕ್ತಪಡಿಸಿತ್ತು. ಮೋಟಾರು ವಿಮಾ ಪಾಲಿಸಿಯನ್ನು ನವೀಕರಿಸುವ ದಿನಾಂಕದಂದು ಮಾನ್ಯತೆ ಪಡೆದ ಪ್ರಮಾಣಪತ್ರವನ್ನು ಹೊಂದಿಲ್ಲದಿದ್ದರೆ ವಾಹನವನ್ನು ವಿಮೆ ಮಾಡದಂತೆ ವಿಮೆದಾರರಿಗೆ ನಿರ್ದೇಶನ ನೀಡಿತ್ತು.

ಏನಿದು ಪಿಯುಸಿ ಪ್ರಮಾಣಪತ್ರ?
ವಾಹನಗಳಿಂದ ಹೊರಸೂಸುವಿ ಕೆಯು ಮಾಲಿನ್ಯವನ್ನು ಪರಿಶೀಲಿಸುವ ಪ್ರಮಾಣಪತ್ರ ಇದಾಗಿದೆ. ಎಲ್ಲ ರೀತಿಯ ಮೋಟಾರು ವಾಹನಗಳಿಗೆ ಮಾಲಿನ್ಯ ಮಾನದಂಡಗಳು ಮತ್ತು ಹೊರಸೂಸುವಿಕೆಯ ಮಟ್ಟವನ್ನು ನಿಗದಿಪಡಿಸಲಾಗಿದೆ. ವಾಹನವು ಹೊರಸೂಸುವ ಮಾಲಿನ್ಯದ ಪ್ರಮಾಣವು ನಿಗದಿತ ಪ್ರಮಾಣದಲ್ಲಿದ್ದರೆ ಮಾತ್ರವೇ ಪಿಯುಸಿ ವಾಹನ ಮಾಲಕರಿಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ.

ಹೊಸ ವಾಹನಕ್ಕೂ ಅನ್ವಯವೇ?
ಹೊಸದಾಗಿ ಖರೀದಿಸಿದ ವಾಹನಗಳಿಗೆ ಒಂದು ವರ್ಷದ ಮಟ್ಟಿಗೆ ಪಿಯುಸಿ ಹೊಂದುವ ಅಗತ್ಯವಿಲ್ಲ. ನಿಯಮಗಳ ಪ್ರಕಾರ ವಾಹನ ನೋಂದಣಿಯ 1 ವರ್ಷದ ಬಳಿಕ ಕಡ್ಡಾಯವಾಗಿ ಪಿಯುಸಿ ಪ್ರಮಾಣಪತ್ರ ಪಡೆಯಬೇಕು. ಇದನ್ನು ಹೊಂದಿಲ್ಲದಿದ್ದರೆ ದಂಡ ವಿಧಿಸಲಾಗುತ್ತದೆ. ವಿವಿಧ ಅವಧಿಗಳಿಗೆ ಪಿಯುಸಿ ಪ್ರಮಾಣಪತ್ರವನ್ನು ಪಡೆಯಬಹುದಾಗಿದೆ.

Advertisement

ಅಧಿಕ ಮಾಲಿನ್ಯ ಇದ್ದರೆ ಪ್ರಮಾಣ ಪತ್ರ ಇಲ್ಲ
ನಿಗದಿಪಡಿಸಿದ ಮಾನದಂಡಗಳಿಗಿಂತ ಹೆಚ್ಚಿನ ಪ್ರಮಾಣದ ಮಾಲಿನ್ಯವನ್ನು ಹೊರಸೂಸುತ್ತಿದ್ದರೆ ಪಿಯುಸಿ ಪ್ರಮಾಣಪತ್ರವನ್ನು ನೀಡಲಾಗುವುದಿಲ್ಲ. ಪ್ರಮಾಣ ಪತ್ರ ಇಲ್ಲದ ವಾಹನಗಳನ್ನು ಓಡಿಸುವಂತಿಲ್ಲ. ವಾಹನವನ್ನು ದುರಸ್ತಿ ಮಾಡಿಸಿ ಪ್ರಮಾಣಪತ್ರವನ್ನು ಪಡೆಯಬಹುದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next