Advertisement

ತಾರಸಿಯಲ್ಲೇ ತರಕಾರಿ

11:52 AM Apr 23, 2018 | |

ರಾಘವೇಂದ್ರ ರಾಮಚಂದ್ರ ರಾವ್‌ ಕೊಣ್ಣೂರು ವೃತ್ತಿಯಲ್ಲಿ ಇಂಜಿನಿಯರ್‌. ಹುಬ್ಬಳ್ಳಿಯ ವಿದ್ಯಾನಗರದ ಮಿತ್ರಾ ಶಾಲ್‌ ಪಾರ್ಕ್‌ ಹತ್ತಿರವಿರುವ ‘ಬಾಂಧವ್ಯ’ ಹೆಸರಿನ ಎರಡಂತಸ್ಥಿನ ಮನೆ ಇವರದೇ. ಕೃಷಿಯಲ್ಲಿ ಇವರಿಗೆ ಅಪರಿಮಿತ ಆಸಕ್ತಿ. ಸಾವಯವದೆಡೆಗೆ ಹೆಚ್ಚಿನ ಒಲವು. ಜೀವಾಮೃತ ಹಾಗೂ ಎರೆಗೊಬ್ಬರವನ್ನು ಸ್ವತಃ ತಾರಸಿಯ ಮೇಲೆಯೇ ತಯಾರಿಸಿ ಬಳಕೆ ಮಾಡಿಕೊಳ್ಳುತ್ತಾರೆ.

Advertisement

ಹುಬ್ಬಳ್ಳಿಯೊಂದರಲ್ಲೇ ನೂರಕ್ಕೂ ಅಧಿಕ ತಾರಸಿಗಳಲ್ಲಿ ಇವರ ಮಾರ್ಗದರ್ಶನದಲ್ಲಿ ಅಳವಡಿಕೆಯಾದ ತರಕಾರಿ ತೋಟಗಳಿವೆ. ಬೆಂಗಳೂರಿನಲ್ಲಿ ವಾಸವಿರುವ ಹತ್ತಾರು ಸ್ನೇತರೂ ತಾರಸಿ ತೋಟ ಅಭಿವೃದ್ದಿ ಪಡಿಸಿದ್ದು ಸಾವಯವ ತರಕಾರಿಗಳು ಅಡುಗೆಗೆ ಸಿಗುವಂತೆ ವ್ಯವಸ್ಥೆ ಕಲ್ಪಿಸಿಕೊಂಡಿದ್ದಾರೆ. 

ತಾರಸಿಯಲ್ಲಿ ಏನೇನಿದೆ?: ರಾಘವೇಂದ್ರ ಎಂಟು ವರ್ಷಗಳಿಂದ ತಾರಸಿ ಕೃಷಿ ಮಾಡುತ್ತಾ ಬಂದಿದ್ದಾರೆ. 3200 ಚದರ್‌ ಅಡಿ ಸ್ಥಳಾವಕಾಶ ಹೊಂದಿರುವ ತಾರಸಿಯದು. ಇದರಲ್ಲಿ 1,800 ಗಿಡಗಳು ತಾರಸಿಯ ಮೇಲೆ ಆಸರೆ ಪಡೆದುಕೊಂಡಿವೆ. ಪ್ರತಿಫ‌ಲ ನೀಡುತ್ತಿವೆ. ತರಕಾರಿ ಬೆಳೆಗಳು, ಹೂವಿನ ಗಿಡಗಳು, ಔಷಧಿಯ ಸಸ್ಯಗಳು, ಹಣ್ಣಿನ ಗಿಡಗಳನ್ನು ಆಸಕ್ತಿಯಿಂದ ಬೆಳೆಸಿದ್ದಾರೆ.

ಇವರಲ್ಲಿರುವ ತರಕಾರಿ ವೈವಿಧ್ಯ ಬೆರಗು ಮೂಡಿಸುತ್ತದೆ. ಹೂ ಕೋಸು, ಎಲೆಕೋಸು, ಚೈನೀಸ್‌ ಕ್ಯಾಬೇಜ್‌, ನವಿಲುಕೋಸು, ಎರಡು ರೀತಿಯ ಮೂಲಂಗಿ, ಬೂದುಗುಂಬಳ, ತೊಂಡೆಕಾಯಿ, ಅವರೆ, ಬೀನ್ಸ್‌, ಬೆಂಡೆ, ಚವಳಿ, ಮೂರು ಬಗೆಯ ಬದನೆ, ಟೊಮೆಟೊ, ನುಗ್ಗೆ, ಹಾಗಲ, ಸೋರೆಕಾಯಿ, ಹೀರೇಕಾಯಿ ಬೆಳೆಗಳಿವೆ. ಅಲ್ಲದೇ ಪಾಲಕ್‌, ಕೋತಂಬರಿ, ಸಬ್ಬಸಗಿ, ಕೆಂಪು ರಾಜಗಿರಿ, ಹುಳಿಟಿಕ್ಕು, ಪುದೀನ, ಮೆಂತೆ, ಮುಂತಾದ ಸೊಪ್ಪು ತರಕಾರಿ ವೈವಿಧ್ಯತೆಯೂ ಇವೆ.

ನಿಂಬೆ, ಪಪ್ಪಾಯ, ಚಿಕ್ಕು, ಪೇರಲ, ಡ್ರಾಗನ್‌ ಫ್ರುಟ್‌, ಚೆರ್ರಿ, ವಾಟರ್‌ ಆಪಲ್‌, ಚೈನೀಸ್‌ ಕಿತ್ತಳೆ, ಹಣ್ಣು ಗಿಡಗಳನ್ನು ಹೊಂದಿದ್ದಾರೆ. ಔಷಧಿ ಸಸ್ಯಗಳಾದ ಕಾಡು ಪುದೀನಾ, ಜಪಾನ್‌ ುಂಟ್‌, ಚಕ್ರಮುನಿ ಸೊಪ್ಪು, ಬಹುಧದ ಮಸಾಲೆ ಎಲೆಗಿಡ, ದೊಡ್ಡ ಪತ್ರೆ, ಅಮೃತ ಬಳ್ಳಿ ಮುಂತಾದವುಗಳಿವೆ. ಹೂವಿನ ಗಿಡಗಳ ವೈವಿಧ್ಯತೆ ಅವರ್ಣನೀಯ. ಬೆಟ್ಟದ ಹೂವು, ಬೆಟ್ಟದ ತಾವರೆ, ಕಣಗಲ, ಚಂಪಾ, ಐವತ್ತೆರಡು ಬಗೆಯ ದಾಸವಾಳ ಬ್ರಹ್ಮ ಕಮಲಗಳಿವೆ.

Advertisement

ಕಸಿ ಕಟ್ಟುವುದರಲ್ಲಿಯೂ ಪರಿಣತಿ ಸಾಧಿಸಿದ್ದಾರೆ. ಕಣಗಲ ಗಿಡದಲ್ಲಿ ನಾಲ್ಕು ಬಣ್ಣಗಳ ಹೂ ಬಿಡುವ ಗಿಡಗಳ ಕೊಂಬೆಗಳನ್ನು ಒಂದೇ ಗಿಡಕ್ಕೆ ಜೋಡಿಸಿದ್ದಾರೆ. ಚಂಪಾ ಗಿಡದಲ್ಲಿಯೂ ಒಂದು ಗಿಡದಲ್ಲಿ ನಾಲ್ಕು ಬಣ್ಣಗಳ ಕಸಿ ಮಾಡಿದ್ದಾರೆ. ದಾಸವಾಳ ಗಿಡಗಳಲ್ಲಿಯೂ ಬಣ್ಣ ವೈವಿಧ್ಯತೆ ಜೋಡಿಸಿದ್ದಾರೆ. ಬದನೆಯ ಗಿಡಗಳಲ್ಲಿಯೂ ಕಸಿ ಕೈಚಳಕ ತೋರಿದ್ದು ಬಗೆ ಬಗೆಯ ಗಾತ್ರದ, ವೈವಿಧ್ಯ ಬಣ್ಣದ ಬದನೆ ಒಂದೇ ಗಿಡದಲ್ಲಿ ತೂಗು ಬಿದ್ದಿರುತ್ತದೆ.

ಮಣ್ಣು ರಹಿತ ಕೃಷಿ ಇವರ ವಿಶೇಷತೆ. ಪಾಲೀಥಿನ್‌ ಬ್ಯಾಗ್‌ಗಳನ್ನು ಬಳಸುತ್ತಾರೆ. ಪೇಂಟ್‌ನ ಖಾಲಿ ಡಬ್ಬಗಳನ್ನು ಖರೀದಿಸಿ ತಂದುಕೊಂಡಿದ್ದಾರೆ. ಪಪ್ಪಾಯ, ಬಾಳೆ ಮುಂತಾದ ಗಿಡ ನಾಟಿಗೆ 200 ಲೀಟರ್‌ ಸಾಮರ್ಥ್ಯದ ನೀರಿನ ಹಳೆಯ ಟ್ಯಾಂಕ್‌ ಗಳನ್ನು ಬಳಕೆ ಮಾಡಿಕೊಂಡಿದ್ದಾರೆ. ಕೊಕೊಪಿತ್‌ ತುಂಬಿಸಿ ಗಿಡನಾಟಿ ಮಾಡಿದ್ದಾರೆ. ತರಕಾರಿ ಕೃಷಿಯಲ್ಲಿ ಅಂತರ್‌ ಬೇಸಾಯಕ್ಕೆ ಒತ್ತು ನೀಡುತ್ತಾರೆ. ಬದನೆ ಇಳುವರಿ ಬರುವುದರೊಳಗಾಗಿ ಮೂಲಂಗಿಯೂ ಕೊಯ್ಲಿಗೆ ಸಿಕ್ಕಿರುತ್ತದೆ. ಬಾಳೆ, ಪಪ್ಪಾಯ ಬುಡದಲ್ಲಿಯೂ ಸೊಪ್ಪು ತರಕಾರಿಗಳನ್ನು ಬೆಳೆದುಕೊಳ್ಳುತ್ತಾರೆ.

ಸಾವಯವ: ಕೃಷಿಗೆ ಬೇಕಾದ ಗೊಬ್ಬರ ತಾವೇ ತಯಾರಿಸಿಕೊಳ್ಳುತ್ತಾರೆ. 200 ಲೀಟರ್‌ ಸಾಮರ್ಥ್ಯದ ಎರಡು ನೀರಿನ ಟ್ಯಾಂಕ್‌ನ್ನು ಗೊಬ್ಬರ ತಯಾರಿಗೆ ಬಳಸಿಕೊಂಡಿದ್ದಾರೆ. ಇವರ ಮನೆಯ ಕಟ್ಟಡದಲ್ಲಿ ಆರು ಕುಟುಂಬಗಳು ಬಾಡಿಗೆಗೆ ಇದ್ದು ಬಾಡಿಗೆದಾರರಿಗೆಲ್ಲಾ ಅವರು ಬಳಸಿ ಉಳಿದ ತರಕಾರಿ ತ್ಯಾಜ್ಯಗಳನ್ನು ಈ ತೊಟ್ಟಿಗೆ ಹಾಕಲು ಸೂಚಿಸಿದ್ದಾರೆ. ಹಸಿ ಕಸ ದಣಿಲ್ಲದೇ ಸಂಗ್ರಹಗೊಳ್ಳುತ್ತದೆ.

ಎರೆ ಹುಳಗಳನ್ನು ತೊಟ್ಟಿಯಲ್ಲಿ ಬಿಟ್ಟಿದ್ದಾರೆ. ಜೀವಾಮೃತ ತಯಾರಿಸುತ್ತಾರೆ. ಗಿಡದ ಬುಡಕ್ಕೆ ಹಾಕುತ್ತಾರೆ. ತರಕಾರಿ ಕೃಯಲ್ಲಿ ರೋಗ ಕಂಡುಬಂದಲ್ಲಿ ಬೇವಿನ ಎಣ್ಣೆ ಕಷಾಯ, ಬೆಳ್ಳುಳ್ಳಿ , ಮೆಣಸಿನ, ಅರಿಶಿನ ಕಷಾಯ ಸಿಂಪಡಿಸುತ್ತಾರೆ. ಹನ್ನೊಂದು ಜನರನ್ನು ಹೊಂದಿರುವ ಕೂಡು ಕುಟುಂಬ ಇವರದು.

ಪತ್ನಿ ಪರಿಮಳರಿಗೂ ತರಕಾರಿ ಕೃಷಿಯಲ್ಲಿ ಅಪರಿಮಿತ ಆಸಕ್ತಿ. ನೀರುಣಿಸುವ, ಗಿಡಗಳಿಗೆ ಸಿಂಪಡಿಸಲು ಕಷಾಯ ತಯಾರಿಸುವ ಉಸ್ತುವಾರಿ ನೋಡಿಕೊಳ್ಳುತ್ತಾರೆ. ಸಹೋದರರಾದ ಪ್ರಶಾಂತ್‌ ಹಾಗೂ ಪ್ರಮೋದ್‌ ಕೂಡ ತಾರಸಿ ತೋಟದ ಕೆಲಸದಲ್ಲಿ ಪಾಲ್ಗೊಳ್ಳುತ್ತಾರೆ. ತಾಯಿ ಸುಜಾತಾ ಕೊಣ್ಣೂರು ಹೂವಿನ ಗಿಡಗಳ ಒಡನಾಟದಲ್ಲಿ ಸಂತೃಪ್ತಿ ಕಂಡುಕೊಂಡಿದ್ದಾರೆ.

* ಕೋಡಕಣಿ ಜೈವಂತ ಪಟಗಾರ

Advertisement

Udayavani is now on Telegram. Click here to join our channel and stay updated with the latest news.

Next