ಕಟ್ಲೆಟ್ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ ! ಕಟ್ಲೆಟ್ ಎಲ್ಲರ ಬಾಯಲ್ಲೂ ನೀರೂರಿಸುವಂತಹ ತಿನಿಸು.ಟೀ-ಕಾಫಿ ಜೊತೆ ಏನಾದರೂ ಬಿಸಿ ಬಿಸಿಯಾದ ತಿಂಡಿಯಿದ್ದರೆ ಅದರ ಮಜವೇ ಬೇರೆ. ಆದರೆ ನಿಮಗೆ ಮನೆಯಲ್ಲಿ ಸುಲಭ ರೀತಿಯಲ್ಲಿ ವೆಜಿಟೇಬಲ್ ಕಟ್ಲೆಟ್ ತಯಾರಿಸುವ ವಿಧಾನವನ್ನು ತಿಳಿಸುತ್ತೇವೆ.
ಬೇಕಾಗುವ ಸಾಮಾಗ್ರಿಗಳು:
2 ಬೀಟ್‌ರೂಟ್, 1/4 ಪಾವು ಹಸಿರು ಬಟಾಣಿ, 1/2 ಪಾವು ರವೆ, 1ಚಮಚ ಕಡ್ಲೆ ಬೇಳೆ, 1 ಚಮಚ ಉದ್ದಿನ ಬೇಳೆ, 6 ಹಸಿ ಮೆಣಸಿನ ಕಾಯಿ, 4 ಬಟಾಟೆ, 2 ಒಣಮೆಣಸಿನಕಾಯಿ, 1/2 ಚಮಚ ಸಾಸಿವೆ, 2 ಬೆಳ್ಳುಳ್ಳಿ ಬೀಜ, 4 ಚಮಚ ಎಣ್ಣೆ, ಕಾಯಿಸಲಿಕ್ಕೆ ಎಣ್ಣೆ, ರುಚಿಗೆ ಉಪ್ಪು.
ಮಾಡುವ ವಿಧಾನ:
ಬಟಾಟೆಯನ್ನು ತೊಳೆದು ಬೇಯಿಸಿರಿ. ಬಟಾಣಿ ಕಾಳನ್ನು ಬೇಯಿಸಿಟ್ಟುಕೊಳ್ಳಿ, ಬೀಟ್‌ರೂಟ್‌ನ ಸಿಪ್ಪೆ ತೆಗೆದು, ತೊಳೆದು, ತುರಿದಿಟ್ಟುಕೊಳ್ಳಿ. ಬಾಣಲೆಗೆ ಎಣ್ಣೆ ಹೊಯ್ದು, ಒಲೆಯ ಮೇಲಿಟ್ಟು ಒಣಮೆಣಸಿನ ಕಾಯಿ, ಕಡ್ಲೆ ಬೇಳೆ ಮತ್ತು ಉದ್ದಿನ ಬೇಳೆಯ ಒಗ್ಗರಣೆ ಮಾಡಿ ಅದರಲ್ಲಿ ಬೀಟ್‌ರೂಟ್‌ನ ತುರಿ ಮೆಣಸಿನಕಾಯಿ ಕೊಚ್ಚಲು ಬೆಂದ ಬಟಾಣಿ ಕಾಳು ಮತ್ತು ಸುಲಿದ ಬೆಳ್ಳುಳ್ಳಿ ಬೀಜ ಇವನ್ನೆಲ್ಲ ಹಾಕಿರಿ ಚೆನ್ನಾಗಿ ಬೆಂದ ನಂತರ ಇಳಿಸಿರಿ.
ತಣಿದ ನಂತರ ಬೇಯಿಸಿಟ್ಟ ಬಟಾಟೆಯ ಸಿಪ್ಪೆ ಸುಲಿದು ಬೀಟ್‌ರೂಟ್‌ನೊಟ್ಟಿಗೆ ಬೆರಸಿ ಉಪ್ಪು ಹಾಕಿ ಚೆನ್ನಾಗಿ ಹಿಸುಕಿ,ಹಿಟ್ಟು ಮಾಡಿರಿ. ಆ ಹಿಟ್ಟಿನ ಉಂಡೆ ಕಟ್ಟಿ ,ತುಸು ಒತ್ತಿ ಚಪ್ಪಟೆ ಮಾಡಿ ರವೆಯಲ್ಲಿ ಹೊರಳಿಸಿ ತೆಗೆಯಿರಿ.ಒಲೆಯ ಮೇಲೆ ದೋಸೆ ಕಾವಲಿ ಇಟ್ಟು ಎಣ್ಣೆ ಸವರಿ ಕಾದ ನಂತರ 4-5 ಕಟ್ಲೆಟ್‌ಗಳನ್ನಿಟ್ಟು ಎರಡೂ ಬದಿ ಕಾಯಿಸಿ ತೆಗೆಯಿರಿ. ಟೊಮೆಟೋ ಸಾಸ್ ಜೊತೆಗೆ ಬಿಸಿ ಬಿಸಿ ವೆಜಿಟೇಬಲ್ ಕಟ್ಲೆಟ್ ಸವಿಯಿರಿ.