Advertisement

ಯತೀಂದ್ರಗೆ ವೀರಶೈವ-ಲಿಂಗಾಯಿತರ ಬೆಂಬಲ

12:42 PM Apr 25, 2018 | Team Udayavani |

ಮೈಸೂರು: ಯಡಿಯೂರಪ್ಪ, ವಿಜಯೇಂದ್ರ ನಮಗೆ ಗೊತ್ತಿಲ್ಲ, ಕ್ಷೇತ್ರದಲ್ಲಿ ವೀರಶೈವ-ಲಿಂಗಾಯತ ಜನಾಂಗದ ಗ್ರಾಮಗಳಿಗೆ 300 ಕೋಟಿ ಅನುದಾನ ಕೊಟ್ಟು ಅಭಿವೃದ್ಧಿ ಮಾಡಿದ್ದೀರಿ, ಆದ್ದರಿಂದ ನೀವೇ ನಮ್ಮ ನಾಯಕರು ಎಂದು ಒಕ್ಕೊರಲಿನಿಂದ ಡಾ.ಯತೀಂದ್ರರನ್ನು ಬೆಂಬಲಿಸುವುದಾಗಿ ಮುಖಂಡರು ಘೋಷಿಸಿದರು.

Advertisement

ನಗರದಲ್ಲಿ ನಡೆದ ವರುಣಾ ಕ್ಷೇತ್ರದ ವೀರಶೈವ ಲಿಂಗಾಯಿತ ಮುಖಂಡರ ಸಭೆಯಲ್ಲಿ ಕೆಪಿಸಿಸಿ ಕಾರ್ಯದರ್ಶಿ ಗುರುಪಾದಸ್ವಾಮಿ ಮಾತನಾಡಿ, ಹದಿನಾರು ಗ್ರಾಮದಲ್ಲಿ ವೀರಶೈವ ಜನಾಂಗದವರ ಬೀದಿಗೆ 20 ಕೋಟಿ ರೂ. ಖರ್ಚು ಮಾಡಿ ಕಾಂಕ್ರಿಟ್‌ ರಸ್ತೆ ಮಾಡಿದ್ದಾರೆ.

ಕಳೆದ ಚುನಾವಣೆಯಲ್ಲಿ ಶೇ.90 ಮತಗಳನ್ನು ಬಿಜೆಪಿ ಪಕ್ಷಕ್ಕೆ ಹಾಕಿದ ಗ್ರಾಮದ ಅಭಿವೃದ್ಧಿಗೂ ಕೋಟಿಗಟ್ಟಲೆ ಹಣ ನೀಡಿದ್ದೀರಿ, ನಮ್ಮ ಕೆಲಸ ಮಾಡಿರುವ ಸಿದ್ದರಾಮಯ್ಯ, ಮಹಾದೇವಪ್ಪ, ಡಾ.ಯತೀಂದ್ರರವರೇ ನಮ್ಮ ನಾಯಕರು ಮುಂದೆ ನೀವು ಶಾಸಕರಾಗಿ ಮಂತ್ರಿಯಾಗಿ ಮುಖ್ಯಮಂತ್ರಿಯಾಗುವ ಅವಕಾಶವೂ ಇದೆ. ನಮ್ಮ ಸಮಾಜ ಯಾವಾಗಲೂ ನಿಮ್ಮ ಬೆಂಬಲಕ್ಕೆ ಇರುತ್ತದೆ ಎಂದರು.

ಕೆಪಿಸಿಸಿ ಕಾರ್ಯದರ್ಶಿ ವರುಣಾ ಮಹೇಶ್‌ ಮಾತನಾಡಿ, ಈ ಬಾರಿ ಕಾಂಗ್ರೆಸ್‌ ಸರ್ಕಾರವೇ ಅಧಿಕಾರಕ್ಕೆ ಬರಲಿದ್ದು, ನಮ್ಮ ಸಮಾಜದ ಯುವಕರು ಮುಖಂಡರಿಗೆ ಹೆಚ್ಚಿನ ಸ್ಥಾನಮಾನ ನೀಡಬೇಕು. ಯಾರೇ ಬಂದು ನಿಂತರೂ ಕೂಡ ನಮ್ಮ ಸಮಾಜ ನಿಮ್ಮ ಬೆಂಬಲಕ್ಕಿರುತ್ತದೆ. ಮತ್ತೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದು ಖಚಿತ ಎಂದರು.

ಡಾ.ಯತೀಂದ್ರ ಸಿದ್ದರಾಮಯ್ಯ ಮಾತನಾಡಿ, ಕಾಂಗ್ರೆಸ್‌ ಪಕ್ಷ ಸಾಮಾಜಿಕ ನ್ಯಾಯದ ಪರವಾಗಿದ್ದು, ಈ ಚುನಾವಣೆಯಲ್ಲಿ ವೀರಶೈವ-ಲಿಂಗಾಯಿತರಿಗೆ ಹೆಚ್ಚಿನ ಟಿಕೆಟ್‌ ನೀಡಲಾಗಿದೆ. ಮುಖ್ಯಮಂತ್ರಿಗಳು ಆ ಜನಾಂಗದ ವಿರೋಧಿಗಳು ಈ ಜನಾಂಗದ ವಿರೋಧಿಗಳು ಎನ್ನುತ್ತಾ ಅಪಪ್ರಚಾರ ಮಾಡುತ್ತಾರೆ. ಆದರೆ, ನಾವು ಯಾವುದೇ ಜನಾಂಗದ ವಿರೋಧಿಗಳಲ್ಲ ಎಂಬುದು ನಿಮಗೆ ಗೊತ್ತಾಗಬೇಕಾದರೆ ವರುಣಾ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳನ್ನೇ ನೋಡಿ ನಾವು ಯಾವುದೇ ತಾರತಮ್ಯ ಮಾಡಿಲ್ಲ,

Advertisement

ಯಾರನ್ನು ಕಡೆಗಣಿಸಿಲ್ಲ, ಪ್ರತಿಯೊಬ್ಬರು ಜಾತಿ ನೋಡಿ ಮತ ಹಾಕುವುದನ್ನು ಬಿಟ್ಟು ಅಭಿವೃದ್ಧಿ ನೋಡಿ ಮತ ಹಾಕಬೇಕು ಎಂದ ಅವರು, ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಸಿಬಿಐ, ಆರ್‌ಬಿಐ, ಐಟಿ ಇಲಾಖೆಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್‌ ಮುಖಂಡರ ಮೇಲೆ ಐಟಿ ದಾಳಿ ನಡೆಸಿ, ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ಐದು ವರ್ಷದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿದ್ದು, ಬಸವಣ್ಣನವರ ತತ್ವಸಿದ್ಧಾಂತಗಳನ್ನು ಮೈಗೂಡಿಸಿಕೊಂಡಿದ್ದಾರೆ. ಆದ್ದರಿಂದ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದ್ದು, ಕಾಂಗ್ರೆಸ್‌ ಪಕ್ಷದ ಸಾಧನೆಯನ್ನು ಮನೆಮನೆಗೆ ತಿಳಿಸಿ ನನ್ನನ್ನು ಆಶೀರ್ವದಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ದಾಸನೂರು ನಾಗೇಶ, ಶಾಂತಮ್ಮ, ಹಳ್ಳಿಕೆರೆಹುಂಡಿ, ಶಿವಕುಮಾರ್‌, ಗುರುಸ್ವಾಮಿ, ಮಹಾದೇವಪ್ಪ, ಪಾಳ್ಯಬಸವರಾಜು, ಶಿವನಾಗಪ್ಪ, ಹಡಜನಚಂದ್ರು, ಕಾರ್ಯ ನಾಗರಾಜು, ಎಪಿಎಂಸಿ ಸದಸ್ಯ ಪಟೇಲ್‌ ಮಹಾದೇವಪ್ಪಹಾಜರಿದ್ದರು. ಈ ಸಂದರ್ಭದಲ್ಲಿ ಬಿಜೆಪಿ ತೊರೆದು ಹಲವರು ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದರು.

Advertisement

Udayavani is now on Telegram. Click here to join our channel and stay updated with the latest news.

Next