ಸಾಗರ: ವಿಶ್ವಕ್ಕೆ ಮಾನವ ಧರ್ಮವನ್ನು ಸಾರಿರುವ ವೀರಶೈವ ಧರ್ಮದಲ್ಲಿ ಒಡಕು ಉಂಟು ಮಾಡುವ ಹೇಳಿಕೆಗಳು ಸರಿಯಲ್ಲ. ಇತ್ತೀಚಿನ ದಿನಗಳಲ್ಲಿ ವೀರಶೈವ ಹಾಗೂ ಲಿಂಗಾಯಿತ ಧರ್ಮದ ಬಗ್ಗೆ ಎದ್ದಿರುವ ಚರ್ಚೆ ಹುರುಳಿಲ್ಲದ್ದು, ಇವೆರಡೂ ಬೇರೆ ಬೇರೆಯಲ್ಲ. ಸಮಾಜ ಬಾಂಧವರು ಅಪಪ್ರಚಾರಗಳಿಗೆ ಕಿವಿಗೊಡಬಾರದು ಎಂದು ಕೆಳದಿ ರಾಜಗುರು ಹಿರೇಮಠದ ಡಾ| ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸೋಮವಾರ ತಾಲೂಕು ವೀರಶೈವ ಯುವ ವೇದಿಕೆ ಆಶ್ರಯದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಧರ್ಮಸಭೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಹಾಲು ಯಾವುದೇ ಕೆಚ್ಚಲಿನಿಂದ ಬಂದಿದ್ದರೂ ಅದು ಬಿಳಿ ಬಣ್ಣದಿಂದ ಕೂಡಿರುತ್ತದೆ. ಹಾಗೆಯೇ ಗುರುಗಳು ಹಲವರಿದ್ದರೂ ಅವರು ಬೋಧಿಸುವ ತತ್ವಾದರ್ಶಗಳು ಒಂದೇ ಆಗಿರುತ್ತದೆ ಎಂದರು. ಪ್ರತಿಯೊಂದು ಹಂತದಲ್ಲಿಯೂ ಸಮಾಜವನ್ನು ಜೋಡಿಸುವ ಕೆಲಸ ಪರಿಣಾಮಕಾರಿಯಾಗಿ ನಡೆಯಬೇಕು. ಪರಸ್ಪರ ವಿಭಿನ್ನವಾದ ಆಲೋಚನೆ, ದೃಷ್ಟಿಕೋನದಿಂದಾಗಿ ಸಮಾಜವನ್ನು ಸದೃಢಗೊಳಿಸಲು ಸಾಧ್ಯವಿಲ್ಲ ಎಂದರು.
ಹೊಸನಗರ ತಾಲೂಕು ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಚನ್ನಬಸವ ಸ್ವಾಮೀಜಿ ಮಾತನಾಡಿ, ಯುವ ಸಮುದಾಯ ಬೇರೆಬೇರೆ ಆಕರ್ಷಣೆಗೆ ಒಳಗಾಗಿ ದಾರಿ ತಪ್ಪುತ್ತಿದ್ದಾರೆ. ಸಮಾಜ ನಮಗೆ ಏನನ್ನು ಕೊಟ್ಟಿದೆ ಎಂದು ಹಲಬುವುದಕ್ಕಿಂತ ನಾವು ಸಮಾಜಕ್ಕೆ ಏನು ಕೊಡುಗೆ ನೀಡಿದ್ದೇವೆ ಎನ್ನುವುದರ ಬಗ್ಗೆ ಚಿಂತನೆ ನಡೆಸಬೇಕು ಎಂದರು.
ಸಮಾಜ, ಧರ್ಮವನ್ನು ನಾವು ರಕ್ಷಿಸಿದರೆ ಅವುಗಳು ನಮ್ಮನ್ನು ರಕ್ಷಿಸುತ್ತವೆ. ಸಮಾಜವನ್ನು ಒಡೆಯುವ ಹೇಳಿಕೆ ಯಾರಿಂದಲೂ ಬರಬಾರದು. ಇದರಿಂದ ಅಭಿವೃದ್ಧಿಪಥದತ್ತ ಸಾಗುತ್ತಿರುವ ಸಮಾಜ ಹಿನ್ನಡೆ ಅನುಭವಿಸುತ್ತದೆ ಎಂದು ಹೇಳಿದರು.
ಶಿಕ್ಷಕ ಪಾಲಾಕ್ಷಪ್ಪ ಎಸ್.ಎನ್. ಉಪನ್ಯಾಸ ನೀಡಿದರು. ವೇದಿಕೆಯಲ್ಲಿ ಶಿವಮೊಗ್ಗ ಪದವೀಧರರ ಸಹಕಾರಿ ಸಂಘದ ಅಧ್ಯಕ್ಷ ಎಸ್ .ಪಿ. ದಿನೇಶ್, ಮಲ್ಲವ ಸಮಾಜದ ರಾಜ್ಯಾಧ್ಯಕ್ಷ ಕೆ.ಜಿ. ಜಗದೀಶ್ ಒಡೆಯರ್, ಶಿರಸ್ತೇದಾರ್ ಕಲ್ಲಪ್ಪ ಮೆಣಸಿನಾಳ್, ವೀರಶೈವ ಸಮಾಜದ ಅಧ್ಯಕ್ಷ ಯು.ಸಿ. ಸಿದ್ದಲಿಂಗೇಶ್, ಜಂಗಮ ಸಮಾಜದ ಅಧ್ಯಕ್ಷ ಜಿ.ಎಸ್. ಹಿರೇಮಠ, ಎ. ಭೋಜಕುಮಾರ್ ಇದ್ದರು. ಕೊಟ್ರೇಶಯ್ಯ
ಕಲ್ಯಾಣಮಠ ಮತ್ತು ಸಂಗಡಿಗರು ವೇದಘೋಷ ಪಠಿಸಿದರು. ನವೀನ್ ಜೇಡಿಸರ ಸ್ವಾಗತಿಸಿದರು. ಸುಭಾಷ್ ಕೌತಳ್ಳಿ ಪ್ರಾಸ್ತಾವಿಕ ಮಾತನಾಡಿದರು.