Advertisement

ಮಹಿಳಾ ದಿನದಂದು ನಡೆಯಿತು ವೀರಮಣಿ ಕಾಳಗ

12:30 AM Mar 15, 2019 | |

ಶತ್ರುಘ್ನನ ಒಡ್ಡೋಲಗದೊಂದಿಗೆ ಪ್ರಾರಂಭಗೊಂಡ ಯಕ್ಷಗಾನವು, ಮದನಾಕ್ಷಿ – ತಾರಾವಳಿಯರ ಆಖ್ಯಾನವನ್ನು ಒಳಗೊಂಡಂತೆ ಸಮಗ್ರವಾಗಿ ಮೂಡಿಬಂತು. ಯಜ್ಞಾಶ್ವದ ಅಪಹರಣ, ನಾರದರಿಂದ ಯಜ್ಞಾಶ್ವದ ಇರುವಿಕೆಯ ಬಗೆಗಿನ ಮಾಹಿತಿ, ಮಾಯಾಪುರಿಯ ದೂತಿಯರ ವಿಚಾರಣೆ, 
ಯುದ್ಧದ ಸನ್ನಿವೇಶ ಪೂರ್ವಾರ್ಧದ ಆಖ್ಯಾನದಲ್ಲಿತ್ತು.

Advertisement

ಇತ್ತೀಚೆಗೆ ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವರ್ಣೋತ್ಸವದ (ರಾಜ್ಯಮಟ್ಟದ ತಾಂತ್ರಿಕ-ಸಾಂಸ್ಕೃತಿಕ ಉತ್ಸವ) ಪ್ರಯುಕ್ತ ವಿದ್ಯಾಲಯದ ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳಿಂದ ನಡೆದ ತೆಂಕು ಬಡಗಿನ ಕೂಡಾಟ “ವೀರಮಣಿ ಕಾಳಗ’ ಪ್ರೇಕ್ಷಕರ ಪ್ರಶಂಸೆಗೆ ಪಾತ್ರವಾಯಿತು. ವಿಶ್ವ ಮಹಿಳಾದಿನಾಚರಣೆಯಂದು ನಡೆದ ಈ ಪ್ರದರ್ಶನದಲ್ಲಿ ಮುಮ್ಮೇಳದ ಕಲಾವಿದರಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿದ್ದುದು ವಿಶೇಷವಾಗಿತ್ತು.

ತೆಂಕುತಿಟ್ಟಿನ ಶತ್ರುಘ್ನನ ಒಡ್ಡೋಲಗದೊಂದಿಗೆ ಪ್ರಾರಂಭಗೊಂಡ ಯಕ್ಷಗಾನವು, ಮದನಾಕ್ಷಿ-ತಾರಾವಳಿಯರ ಆಖ್ಯಾನವನ್ನು ಒಳಗೊಂಡಂತೆ ಸಮಗ್ರವಾಗಿ ಮೂಡಿಬಂತು. ಯಮುನಾ ನದೀತೀರದಲ್ಲಿ ಯಜ್ಞಾಶ್ವದ ಅಪಹರಣ, ನಾರದರಿಂದ ಯಜ್ಞಾಶ್ವದ ಇರುವಿಕೆಯ ಬಗೆಗಿನ ಮಾಹಿತಿ, ಮಾಯಾಪುರಿಯ ದೂತಿಯರ ವಿಚಾರಣೆ, ಯುದ್ಧದ ಸನ್ನಿವೇಶ ಪೂರ್ವಾರ್ಧದ ಆಖ್ಯಾನದಲ್ಲಿದ್ದರೆ, ಜ್ಯೋತಿರ್ಮೆಧಪುರದಲ್ಲಿ ರುಕ್ಮಾಗ-ಶುಭಾಂಗರಿಂದ ಯಜ್ಞಾಶ್ವದ ಬಂಧನ, ತಂದೆ ವೀರಮಣಿಯಲ್ಲಿ ವಿಷಯ ಪ್ರಸ್ತಾಪ, ತಂದೆಯ ಮೆಚ್ಚುಗೆ, ಹನುಮಂತನ ಒಡ್ಡೋಲಗ, ವೀರಮಣಿಯೊಂದಿಗೆ ಸಂಧಾನ, ವಾಕ್ಸಮರ, ಸಂಧಾನ ಮುರಿದು ನಡೆದ ಸಂಗ್ರಾಮದಲ್ಲಿ ವೀರಮಣಿಯ ಸಾವು, ಈಶ್ವರನ ಪ್ರವೇಶ, ಶತ್ರುಘ್ನನ ಮರಣ, ಹನುಮಂತನ ಪರಾಕ್ರಮವನ್ನು ಮೆಚ್ಚಿದ ಈಶ್ವರನಿಂದ ವರಪ್ರದಾನ, ಸಂಜೀವಿನಿ ಮೂಲಿಕೆಯ ಮುಖಾಂತರ ಎರಡೂ ಪಕ್ಷಗಳಲ್ಲಿ ಮರಣ ಹೊಂದಿದವರನ್ನು ಬದುಕಿಸುವುದು, ಶ್ರೀರಾಮದರ್ಶನ ಮೊದಲಾದ ಪ್ರಮುಖ ಸನ್ನಿವೇಶಗಳ ಜೋಡಣೆ ಉತ್ತರಾರ್ಧದಲ್ಲಿತ್ತು. 

ವಿದ್ಯಾಲಯದ ಗಣಕಯಂತ್ರ ವಿಭಾಗದ ಮುಖ್ಯಸ್ಥರಾದ ಡಾ| ವಾಸುದೇವರ ಪರಂಪರೆಯ ಹನೂಮಂತ (ಪಾರಂಪರಿಕ ಒಡ್ಡೋಲಗದೊಂದಿಗೆ), ಮದನಾಕ್ಷಿ – ತಾರಾವಳಿಯರ ಪಾತ್ರನಿರ್ವಹಿಸಿದ ಭೂಮಿಕಾ ಐತಾಳ್‌ ಮತ್ತು ಪವಿತ್ರ, ರುಕಾ¾ಂಗ ಶುಭಾಂಗರಾಗಿ ಮೊದಲ ಭಾಗದಲ್ಲಿ ನಿರ್ವಹಿಸಿದ ಸಹನಾ ಮತ್ತು ಮಹಿಮಾರಾವ್‌ರವರ ನಾಟ್ಯ ಮತ್ತು ಮಾತುಗಾರಿಕೆ ಮನಸೂರೆಗೊಂಡು ಅಮೋಘ ಕರತಾಡನಕ್ಕೆ ಒಳಗಾಯಿತು. ದೂತಿಯರಾಗಿ ಪಾತ್ರನಿರ್ವಹಿಸಿದ ಉಪನ್ಯಾಸಕರಾದ ಕಿಶೋರ್‌ ಕುಮಾರ್‌ ಆರೂರ್‌ ಹಾಗೂ ರಂಜನ್‌ ಭಟ್‌ ಜೋಡಿಯ ಹಾಸ್ಯ, ವರ್ತಮಾನದ ವಿದ್ಯಮಾನಗಳಿಗೆ ಥಳುಕು ಹಾಕಿಕೊಂಡು ಮನರಂಜಿಸಿತು. ಪೂರ್ವಾರ್ಧದ ಶತ್ರುಘ್ನನಾಗಿ ಕಾಣಿಸಿಕೊಂಡ ಉಪನ್ಯಾಸಕ ವೇಣುಗೋಪಾಲ ರಾವ್‌ ಪ್ರಸಂಗಕ್ಕೆ ಗಂಭೀರ ಆರಂಭ ಒದಗಿಸಿದರೆ ಉತ್ತರಾರ್ಧದಲ್ಲಿ ಪ್ರದೀಪ ಆಚಾರ್ಯ ಅದನ್ನು ಸಮರ್ಥವಾಗಿ ಮುಂದುವರಿಸಿದರು. ಈಶ್ವರನಾಗಿ ಅಮಿತ್‌, ವೀರಮಣಿಯಾಗಿ ನಿರಂಜನ್‌, ಯುದ್ಧ ಸಂದರ್ಭದ ಹನೂಮಂತನಾಗಿ ಸನತ್‌ ಶೆಟ್ಟಿ, ಮತ್ತು ಎರಡನೆ ಭಾಗದ ರುಕಾ¾ಂಗ-ಶುಭಾಂಗರಾಗಿ ನಿಶಾ ಮತ್ತು ಶಿಲ್ಪಾ ಭಟ್‌ರವರ ನಿರ್ವಹಣೆ ಅದ್ಭುತವಾಗಿತ್ತು. ಶತ್ರುಘ್ನನ ಬಲಗಳಾಗಿ ಪೃಥ್ವಿ (ದಮನ), ಶಮಿತಾ (ಪುಷ್ಕಳ), ತೃಷ್ಣಾ (ಲಕ್ಷ್ಮೀನಿಧಿ) ಮತ್ತು ವಿನುತಾ ಭಾರ್ಗವಿ (ಸುಬಾಹು) ಪೂರ್ವಾರ್ಧದಲ್ಲಿ ಮೆರೆದರೆ, ಉತ್ತರಾರ್ಧದಲ್ಲಿ ಸುಹಾನಿ, ಶಿಶಿರ್‌, ಸ್ವಾತಿ ಮತ್ತು ಪ್ರಜ್ಯೋತ್‌ ನಿರ್ವಹಿಸಿದರು. ಉಳಿದಂತೆ ನಾಗರಾಜ ಕಳತ್ತೂರು (ನಾರದ), ಶರಧಿ (ಪದ್ಮಾಕ್ಷಿ), ರಶ್ಮಿತಾ (ಪದ್ಮಗಂಧಿ), ನಿಹಾರಿಕಾ (ವೀರಮಣಿಯ ಸೇನಾಪತಿ), ಶ್ರೀಕರ (ವೀರಭದ್ರ), ನಿತಿನ್‌ (ಘಂಟಾಕರ್ಣ), ತೃಪ್ತಿ ಶೆಟ್ಟಿ (ನಂದಿ), ತೇಜಸ್‌ (ಭೃಂಗಿ), ಶಿವಾನಿ (ಭೃಕುಟಿ), ವಸುಂಧರಾ (ಶ್ರೀರಾಮ) ಹೀಗೆ ಪ್ರತಿಯೋರ್ವರೂ ತಮಗೊದಗಿದ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿ, ದೊರೆತ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡರು. ಪಾತ್ರ ಸಂಯೋಜನೆಯಲ್ಲಿ ತೋರಿದ ಜಾಣ್ಮೆಯಿಂದ ಯುದ್ಧದ ಸನ್ನಿವೇಶಗಳು, ತೆಂಕು ಬಡಗಿನ ಸ್ಪರ್ಧಾತ್ಮಕ ಪ್ರದರ್ಶನದ ಮೂಲಕ ರಂಗೇರಿದವು. 

ಹಿಮ್ಮೇಳದಲ್ಲಿ ತೆಂಕುತಿಟ್ಟಿನ ಭಾಗವತರಾಗಿ ಯುವಭಾಗವತ ಗುರುರಾಜ್‌ ಭಟ್‌ ಮುಲ್ಕಿ, ಚೆಂಡೆಯಲ್ಲಿ ಗಣೇಶ್‌ ಭಟ್‌ ಹಾಗೂ ಸಂಸ್ಥೆಯ ಹಳೆವಿದ್ಯಾರ್ಥಿ ವಿಕಾಸ್‌ ರಾವ್‌, ಮದ್ದಳೆಯಲ್ಲಿ ಅವಿನಾಶ್‌ ಚಣಿಲ, ಬಡಗುತಿಟ್ಟಿನ ಭಾಗವತರಾಗಿ ಕಿರಿವಯಸ್ಸಿನ ಅದ್ಭುತ ಪ್ರತಿಭೆ ಗಣೇಶ್‌ ಆಚಾರ್‌ ಮಂದರ್ತಿ, ಚೆಂಡೆ ಮದ್ದಲೆಯಲ್ಲಿ ಗಣೇಶ್‌ ಶೆಣೈ ಮತ್ತು ಆನಂದ್‌ ಭಟ್‌, ಚಕ್ರತಾಳದಲ್ಲಿ ಅನೀಶ್‌ರವರ ಸಹಕಾರ ಇಡೀ ಪ್ರದರ್ಶನದ ಯಶಕ್ಕೆ ಕಾರಣವಾಯಿತು.

Advertisement

ಶೈಲೇಶ್‌ ಭಟ್‌, ಮುಲ್ಕಿ

Advertisement

Udayavani is now on Telegram. Click here to join our channel and stay updated with the latest news.

Next