ಒಬ್ಬ ಸಂಗೀತ ನಿರ್ದೇಶಕನ ಸಿನಿ ಪಯಣದಲ್ಲಿ 25 ನೇ ಚಿತ್ರ ಅನ್ನೋದು ಒಂದು ಹಂತದ ಸಾಧನೆಯೇ ಸರಿ. ಅದೀಗ ಸಂಗೀತ ನಿರ್ದೇಶಕ ವೀರ್‌ಸಮರ್ಥ್ ಅವರ ಪಾಲಿಗೂ ಬಂದಿದೆ. ಶಿವರಾಜಕುಮಾರ್ ಅಭಿನಯದ “ಮಾಸ್ ಲೀಡರ್’ ಅವರ 25ನೇ ಚಿತ್ರ. ಈ ವಾರ ತೆರೆಕಾಣುತ್ತಿರುವ ಚಿತ್ರದ ಬಗ್ಗೆ ವೀರ್ ಸಮರ್ಥ್ಗೆ ಖುಷಿ ಮತ್ತು ಹೆಮ್ಮೆ ಇದೆ.
ಕಾರಣ, ಅವರ ಈ ಎಂಟು ವರ್ಷಗಳ ಜರ್ನಿಯಲ್ಲಿ ಇದೇ ಮೊದಲ ಸಲ ಸ್ಟಾರ್‌ನಟನ ಸಿನಿಮಾವೊಂದಕ್ಕೆ ಸಂಗೀತ ನೀಡಿದ್ದಾರೆ. ಅಷ್ಟೇ ಅಲ್ಲ, “ಮಾಸ್ ಲೀಡರ್’ನಲ್ಲಿ ಅವರ ಸಂಗೀತ ಹಾಡುಗಳು ಮೆಚ್ಚುಗೆಗೆ ಪಾತ್ರವಾಗಿರುವುದೂ ಅವರಿಗೆ ಖುಷಿಯ ಸಂಗತಿ.
ವೀರ್ ಸಮರ್ಥ್ ಸಂಗೀತ ನಿರ್ದೇಶನದ ಮೊದಲ ಚಿತ್ರ ಮುರಳಿ ಅಭಿನಯದ “ಶಿವಮಣಿ’. ಮೊದಲ ಪ್ರಯತ್ನದಲ್ಲೇ ಅವರು “ಮೊದ ಮೊದಲ ಮಾತು ಚೆಂದ …’ ಎಂಬ ಗುನುಗುವ ಹಾಡು ಕೊಟ್ಟರು. ಅದಾದ ಮೇಲೆ ಸಿಕ್ಕ ಒಂದೊಂದೇ ಚಿತ್ರಗಳಲ್ಲಿ ಒಳ್ಳೆಯ ಹಾಡು ಕೊಟ್ಟರೂ, ಸಿನಿಮಾಗಳು ಜನಮನ್ನಣೆ ಪಡೆಯಲಿಲ್ಲ.
“ಒಲವೇ ವಿಸ್ಮಯ’ದ “ಕೊಂಚ ರೇಷಿಮೆ, ಕೊಂಚ ಹುಣ್ಣಿಮೆ …’, “ಕಾರಂಜಿ’ಯ “ಕುಂಬಾರಕಿ …’, “ಈ ದಿನ ಹೊಸತಾಗಿದೆ …’, “ದ್ಯಾವ್ರೇ’ ಚಿತ್ರದ “ದ್ಯಾವ್ರೇ …’, “ಪರಪಂಚ’ದ “ಹುಟ್ಟಿದ ಊರನು ಬಿಟ್ಟು ಬಂದ ಮೇಲೆ …’ ಸೇರಿದಂತೆ ಹಲವು ಹಾಡುಗಳು ಹಿಟ್ ಆಗಿವೆಯಾದರೂ, ವೀರ್ ಸಮರ್ಥ್ ಆ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ ಅನ್ನೋದು ಸಿನಿಮಾ ಮಂದಿ ಹೊರತಾಗಿ ಬಹಳಷ್ಟು ಮಂದಿಗೆ ಗೊತ್ತಿಲ್ಲ.
ಆದರೆ, ಈಗ “ಮಾಸ್ ಲೀಡರ್’ ಬಿಡುಗಡೆಗೂ ಮುನ್ನ ಚಿತ್ರದ ಹಾಡುಗಳು ಕೇಳುಗರ ಮನಗೆದ್ದಿವೆ ಎನ್ನುವ ವೀರ್ ಸಮರ್ಥ್, ಆಡಿಯೋ ಗುಣಮಟ್ಟದ ಜತೆಗೆ ಹಾಡಿನ ವೀಡಿಯೋ ಕೂಡ ಫ್ರೆಶ್ ಎನಿಸಿರುವುದರಿಂದ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ’ ಎನ್ನುತ್ತಾರೆ ವೀರ್‌ಸಮರ್ಥ್.
“ನನ್ನ ಪಾಲಿಗೆ “ಮಾಸ್ ಲೀಡರ್’ ದೊಡ್ಡ ಬಜೆಟ್‌ನ ಸ್ಟಾರ್ ಚಿತ್ರ. ಸದ್ಯಕ್ಕೆ ಈಗ “ರಾಜ ಲವ್ಸ್ ರಾಧೆ’, “ಜಾಲಿಬಾರು ಪೋಲಿ ಹುಡುಗರು’, “ಶಿವಗಾಮಿ’, “ಡಬ್ಬಲ್ ಇಂಜಿನ್’ ಸೇರಿದಂತೆ ಏಳು ಸಿನಿಮಾಗಳು ಕೈಯಲ್ಲಿವೆ. ಇಷ್ಟು ವರ್ಷಗಳ ಪಯಣ ಖುಷಿಕೊಟ್ಟಿದೆ. “ಮಾಸ್ ಲೀಡರ್’ ಆ ಖುಷಿಯನ್ನು ಇನ್ನಷ್ಟು ಇಮ್ಮಡಿಗೊಳಿಸುತ್ತದೆ’ ಎನ್ನುತ್ತಾರೆ ವೀರ್‌ಸಮರ್ಥ್.