Advertisement

ಬಸವಾಭಿಮಾನಿಗಳಿಂದ ವೈದಿಕ ಸಂಸ್ಕೃತಿ ಮುಂದುವರಿಕೆ: ದರ್ಗಾ

02:51 PM Aug 21, 2017 | |

ಸಿಂಧನೂರು: ಯಾವ ವೈದಿಕ ಸಂಸ್ಕೃತಿಯನ್ನು ವಿರೋಧಿಸಿ ಬಸವಣ್ಣ ಹೊಸ ಧರ್ಮವನ್ನು ಹುಟ್ಟು ಹಾಕಿದನೋ ಆಧರ್ಮಕ್ಕೆ ಅಪಚಾರವಾಗುವಂತೆ ಇಂದು ಲಿಂಗಾಯತರು ನಡೆದುಕೊಳ್ಳುತ್ತಿರುವುದು ದುರಂತವೇ ಸರಿ ಎಂದು ಖ್ಯಾತ
ಬಸವ ಚಿಂತಕ ರಂಜಾನ್‌ ದರ್ಗಾ ಕಳವಳ ವ್ಯಕ್ತಪಡಿಸಿದರು. ನಗರದ ಸತ್ಯಗಾರ್ಡನ್‌ನಲ್ಲಿ ಬಸವಕೇಂದ್ರದ ವಿವಿಧ
ಘಟಕಗಳ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಶ್ರಾವಣ ಮಾಸದ ವಚನ ಶ್ರವಣ ಸಮಾರೋಪ ಸಮಾರಂಭದಲ್ಲಿ
ಅವರು ಮಾತನಾಡಿದರು. ಸ್ಥಾವರಕ್ಕೆ ಅಳಿವುಂಟು ಜಂಗಮಕ್ಕಿಲ್ಲವೆಂದು ಬಸವಣ್ಣ ಹೇಳಿದ್ದನ್ನು ಮರೆತಿರುವ
ಅನೇಕ ಮಠಾಧಿಧೀಶರು ಕೋಟ್ಯಂತರ ರೂ. ಖರ್ಚು ಮಾಡಿ ಬಸವಣ್ಣನ ಮೂರ್ತಿಗಳನ್ನು ಸ್ಥಾಪನೆ ಮಾಡುತ್ತಿದ್ದಾರೆ.
ಅದರ ಬದಲಾಗಿ ಸಮಾಜದಲ್ಲಿ ಶೋಷಣೆಗೆ ಒಳಗಾದ ಎಲ್ಲ ಧರ್ಮಿಯರಿಗೆ ಆರ್ಥಿಕ ಸಹಾಯ ಮಾಡಿದರೆ ಆ
ಧರ್ಮಿಯರು ಉದ್ಧಾರವಾಗುತ್ತಿದ್ದರು ಎಂದು ಅವರು ಅಭಿಪ್ರಾಯಪಟ್ಟರು. ಬಸವಣ್ಣ 12ನೇ ಶತಮಾನದಲ್ಲಿ ತುಳಿತಕ್ಕೊಳಗಾದವರ, ಶೋಷಿತರ, ಅನ್ಯಾಯಕ್ಕೆ ಒಳಗಾದವರ ಧ್ವನಿಯಾಗಿ ಕಾರ್ಯ ನಿರ್ವಹಿಸಿದ. 770 ಅಮರಗಣಂಗಳ ಪೈಕಿ 70 ಮಹಿಳೆಯರು ಶರಣೆಯರಾಗಿ ಸಮಾಜದ ಅಂಕು-ಡೊಂಕುಗಳನ್ನು ತಿದ್ದಲು ಮಹತ್ವದ ವಚನಗಳನ್ನು ರಚಿಸಿ ಸಮ ಸಮಾಜದ ಪರಿಕಲ್ಪನೆಗೆ ಮುಂದಾದರು ಎಂದು ದರ್ಗಾ ಬಣ್ಣಿಸಿದರು. “ಸ್ವಾಮಿ ನೀನು ಶಾಶ್ವತ ನಾನು’ ಎಂಬ ವಚನದ ಮೂಲಕ ಏಕದೇವೋಪಾಸನೆಯನ್ನು ನಿರ್ಮಿಸಿದ ಖ್ಯಾತಿ ಬಸವಣ್ಣನಿಗೆ
ಸಲ್ಲುತ್ತದೆ. ಇಸ್ಲಾಂ, ಯಹೂದಿ, ಸಿಖ್‌, ಕ್ರೈಸ್ತ್ ಧರ್ಮಗಳು ಸಹ ಏಕದೇವೋಪಾಸನೆಯನ್ನೆ ಮುಂದುವರಿಸಿವೆ. ಆದರೆ
ವೈದಿಕ ಪರಂಪರೆಯಲ್ಲಿ 33 ಕೋಟಿ ದೇವತೆಗಳನ್ನು ಹುಟ್ಟು ಹಾಕಿ ಮನು ಆಡಳಿತ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು. ಅದರ ಫಲವಾಗಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ. ಶೂದ್ರ ಎಂಬ ವರ್ಣಾಧಾರಿತ ಪಂಗಡಗಳನ್ನು ಹುಟ್ಟುಹಾಕುವ ಮೂಲಕ ಸಮಾಜದಲ್ಲಿ ಅಸಮಾನತೆ ಬೆಳೆಸಲಾಯಿತು ಎಂದು ವಿಶ್ಲೇಷಿಸಿದರು. ಬಸವಣ್ಣ ವೈದಿಕ ಪರಂಪರೆಯನ್ನು ವಿರೋಧಿಸಿ ಕಾಯಕ ಜೀವಿಗಳನ್ನು ಒಂದುಗೂಡಿಸಿ ಜಾತಿ ಬೇಧವನ್ನು ತೊಡೆದುಹಾಕಿ ಬಸವ ಧರ್ಮವನ್ನು ಪ್ರಚಾರಕ್ಕೆ ತಂದರು. ಬಸವಾಭಿಮಾನಿಗಳು ವಿಜಯನಗರ ಸಾಮ್ರಾಜ್ಯದ ಕಾಲಘಟ್ಟದಲ್ಲಿ ಬ್ರಾಹ್ಮಣ ಸಂಸ್ಕೃತಿಯನ್ನು ಮುಂದುವರಿಸಲು ಪ್ರಯತ್ನಿಸಿ ಅನೇಕರು ಲಿಂಗಿ ಬ್ರಾಹ್ಮಣರಾದರು. ಮೇಲ್ನೊಟಕ್ಕೆ
ಲಿಂಗವಂತರಾದರು. ಒಳಗೆ ಬಸವಣ್ಣನ ಬದಲಾಗಿ ಮನುವಿನ ಅಭಿಮಾನಿಗಳಾದರು. ಇದರ ಫಲವಾಗಿ
ಇಂದು ವೀರಶೈವ-ಲಿಂಗಾಯತ ಎಂದು ಬೀದಿಕಾಳಗ ನಡೆಸುವ ಪರಿಸ್ಥಿತಿ ಉದ್ಭವಿಸಿದೆ ಎಂದು ಮಾರ್ಮಿಕವಾಗಿ
ಹೇಳಿದರು. ಮಾಜಿ ಶಾಸಕ ವೆಂಕಟರಾವ್‌ ನಾಡಗೌಡ, ಮಕ್ಕಳ ತಜ್ಞ ಡಾ| ಕೆ.ಶಿವರಾಜ ಮಾತನಾಡಿದರು. ಕೃಷಿ ಬೆಲೆ ಆಯೋಗದ ಸದಸ್ಯ ಹನುಮನಗೌಡ ಬೆಳಗುರ್ಕಿ, ಕೆಪಿಸಿಸಿ ಕಾರ್ಯದರ್ಶಿ ಕೆ.ಕರಿಯಪ್ಪ, ಜೆಡಿಎಸ್‌ ತಾಲೂಕು ಘಟಕ ಅಧ್ಯಕ್ಷ ಎಂ.ಲಿಂಗಪ್ಪ, ಜಿಪಂ ಸದಸ್ಯ ಎನ್‌. ಶಿವನಗೌಡ ಗೊರೇಬಾಳ, ಮುಖಂಡರಾದ ಕರೇಗೌಡ ಕುರಕುಂದಿ, ನಾಗಭೂಷಣ ನವಲಿ, ಎಚ್‌.ಎನ್‌.ಬಡಿಗೇರ, ಸುಮಂಗಲಾ ಚಿಂಚರಕಿ ಇತರರು ಉಪಸ್ಥಿತರಿದ್ದರು. ಬಸವ ಕೇಂದ್ರದ ಗೌರವಾಧ್ಯಕ್ಷ ವೀರಭದ್ರಪ್ಪ ಕುರಕುಂದಿ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ಪಗಡದಿನ್ನಿ ನಿರೂಪಿಸಿದರು. ವಿವಿಧ ಗ್ರಾಮಗಳಿಂದ ನೂರಾರು ಸಂಖ್ಯೆಯಲ್ಲಿ ಬಸವಾಭಿಮಾನಿಗಳು ಆಗಮಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next