ಬೆಂಗಳೂರು: ಕೋವಿಡ್-19 ಸೋಂಕಿನ ಕಾರಣದಿಂದ ದೇಶಾದ್ಯಂತ ಲಾಕ್ ಡೌನ್ ಇದ್ದು, ಮೇ 3ರವರೆಗೆ ಮುಂದುವರಿಸಲಾಗಿದೆ. ಸದಾ ಬ್ಯುಸಿ ಇರುತ್ತಿದ್ದ ಕೆಲವು ತಾರೆಯರು, ಕ್ರೀಡಾಪಟುಗಳು ಈಗ ಹೊಸ ಹೊಸ ಹವ್ಯಾಸಗಳನ್ನು ರೂಢಿಸಿಕೊಂಡು ಕಾಲಕಳೆಯುತ್ತಿದ್ದಾರೆ.
ಟೀಂ ಇಂಡಿಯಾ ಆಟಗಾರ್ತಿ ನಮ್ಮ ಕನ್ನಡದ ಹುಡುಗಿ ವೇದಾ ಕೃಷ್ಣಮೂರ್ತಿ ಲಾಕ್ ಡೌನ್ ನಲ್ಲಿ ಹೊಸ ಕ್ರಿಕೆಟ್ ಕೂಟವೊಂದನ್ನು ಆರಂಭಿಸಿದ್ದಾರೆ. ಹಲವು ಗೆಳೆತಿಯರೊಂದಿಗೆ ಸೇರಿ ಐಸೊಲೇಶನ್ ಕಪ್ ಆರಂಭಿಸಿದ್ದಾರೆ.
ಟೀಂ ಇಂಡಿಯಾ ಆಟಗಾರ್ತಿ, ವೇದಾ ಕೃಷ್ಣಮೂರ್ತಿ, ಮೋನಾ ಮೆಶ್ರಮ್, ಮಾಜಿ ಆಟಗಾರ್ತಿ ರೀಮಾ ಮಲ್ಹೋತ್ರಾ, ಆಕಾಂಕ್ಷ ಕೊಹ್ಲಿ, ಆಸೀಸ್ ಮಾಜಿ ಆಟಗಾರ್ತಿ ಲಿಸಾ ಸ್ಥಾಲೆಕರ್ ಮತ್ತು ಅನುಜ್ ಮಲ್ಹೋತ್ರಾ ಜೊತೆ ಕ್ರಿಕೆಟ್ ಆಡಿದ್ದಾರೆ. ಆದರೆ ಇವರೆಲ್ಲಾ ಅವರವರ ಮೆನಯಲ್ಲೇ ಕ್ರಿಕೆಟ್ ವಿಡಿಯೋ ಮಾಡಿದ್ದು ಅದನ್ನುಒಂದುಗೂಡಿಸಿ ಲಾಕ್ ಡೌನ್ ನ ವಿನೂತನ ಐಸೊಲೇಶನ್ ಕಪ್ ಮಾಡಿದ್ದಾರೆ.
ವೇದಾ ಈ ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದು, ನಾವು ಕ್ರಿಕೆಟ್ ಅನ್ನು ಮಿಸ್ ಮಾಡಿಕೊಳ್ತಿದ್ದೇವೆ. ಅದಕ್ಕಾಗಿ ನಮ್ಮದೇ ಒಂದು ಲೀಗ್ ಆರಂಭಿಸಿದ್ದೇವೆ ಎಂದು ಬರೆದುಕೊಂಡಿದ್ದಾರೆ.
ಲಿಸಾ ಸ್ಥಾಲೆಕರ್ ಅವರು ಕಮೆಂಟರಿ ಮಾಡುತ್ತಿದ್ದು, ವೇದಾ ಕೃಷ್ಣಮೂರ್ತಿ ಬ್ಯಾಟಿಂಗ್ ಮಾಡುತ್ತಿದ್ದರು. ಬೌಲಿಂಗ್ ನಲ್ಲಿ ರೀಮಾ ಮಲ್ಹೋತ್ರಾ ಇದ್ದರೆ ಅನುಜ್ ಅಂಪಾಯರ್ ಕೆಲಸ ನಿರ್ವಹಿಸಿದರು. ಮೊನಾ ಮೆಶ್ರಮ್ ಬೆಡ್ ರೂಮ್ ನಿಂದಲೇ ಫೀಲ್ಡಿಂಗ್ ಮಾಡಿದರೆ, ವಿಕೆಟ್ ಕೀಪರ್ ಆಗಿ ಅಕಾಂಕ್ಷ ಕೊಹ್ಲಿ ಕಾಣಿಸಿಕೊಂಡರು. ವೇದಾ ಹಂಚಿಕೊಂಡ ಈ ವಿಡಿಯೋ ಈಗ ಸಖತ್ ವೈರಲ್ ಆಗಿದೆ.