ಬೆಂಗಳೂರು: ನೀರಾವರಿ ಯೋಜನೆಗಳು ಹಾಗೂ ಸಾಲ ಮನ್ನಾಕ್ಕೆ ಆಗ್ರಹಿಸಿ ಜೂನ್ 12ರಂದು ವಾಟಾಳ್ ನಾಗರಾಜ್ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಬೆಂಬಲ ನೀಡಲು ಹಲವು ಸಂಘಟನೆಗಳು ನಿರಾಕರಿಸಿರುವುದರಿಂದ ಸೋಮವಾರ ಬಂದ್ ಇದೆಯೋ ಇಲ್ಲವೋ ಎಂಬ ಗೊಂದಲ ಹುಟ್ಟಿಕೊಂಡಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ಕನ್ನಡ ಒಕ್ಕೂಟದ ಪರವಾಗಿ ವಾಟಾಳ್ ನಾಗರಾಜ್ ಅವರು ರಾಜ್ಯ ಬಂದ್ ಗೆ ಕರೆ ನೀಡಿದ್ದಾರೆ. ಆದರೆ ಜೂನ್ 12ರಂದು ರಾಜ್ಯ ಬಂದ್ ಗೆ ನಾರಾಯಣ ಗೌಡ ನೇತೃತ್ವದ ಕರವೇ, ಕಾರ್ಮಿಕ ಸಂಘಟನೆಗಳು, ಕೆಎಸ್ ಆರ್ ಟಿಸಿ, ಬಿಎಂಟಿಸಿ, ಹೋಟೆಲ್ ಮಾಲೀಕರ ಸಂಘ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳೇ ಬೆಂಬಲ ನೀಡಲು ನಿರಾಕರಿಸಿವೆ.
ಆಟೋ ಚಾಲಕರ ಸಂಘದಿಂದಲೂ ಬೆಂಬಲ ಇಲ್ಲ ಎಂದು ಹೇಳಲಾಗಿದೆ. ಹಾಗಾಗಿ ಜೂನ್ 12ರ ಬಂದ್ ಗೆ ವಾಟಾಳ್ ನಾಗರಾಜ್ ಅವರು ಎಲ್ಲಾ ಸಂಘಟನೆಗಳ ಮನವೊಲಿಸಿ ಬೆಂಬಲ ಪಡೆದುಕೊಳ್ಳುತ್ತಾರೋ ಅಥವಾ ಬಂದ್ ಗೆ ನೀರಸ ಬೆಂಬಲ ವ್ಯಕ್ತವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಜೂನ್ 12ರಂದು ರಾಜ್ಯ ಬಂದ್ ಇದೆಯೋ ಇಲ್ಲವೋ ಎಂಬ ಬಗ್ಗೆ ಭಾನುವಾರದೊಳಗೆ ಅಂತಿಮ ನಿರ್ಧಾರ ಹೊರಬೀಳಬಹುದು ಎಂದು ವರದಿ ವಿವರಿಸಿದೆ.