Advertisement

“ಮನೆ ತಿಂಡಿ’ಮಹಾತ್ಮೆ! ಬೆಳ್ಳಿತಟ್ಟೆಯಲಿ  29 ಬಗೆಯ ಭಕ್ಷ್ಯಗಳು

04:10 PM Sep 16, 2017 | |

“ವಿವಾಹ ಭೋಜನವಿದು, ವಿಚಿತ್ರ ಭಕ್ಷ್ಯಗಳಿವು, ಇವೆಲ್ಲ ನನಗೆ ಸಾಟಿ, ಅಹಹ..ಹಹ..ಹಾ…’! “ಮಾಯಾಬಜಾರ್‌’ ಚಿತ್ರದ ಈ ಗೀತೆಗೆ, ಈ ಹಾಡಿನೊಂದಿಗೇ ಕಾಣಿಸುವ ಭೋಜನದ ಸೊಗಸಿಗೆ ಮರುಳಾಗದವರಿಲ್ಲ. ಆ ಸಿನಿಮಾದಲ್ಲಿ ನೋಡಿರುವಂಥ ಬಗೆಬಗೆಯ ಭಕ್ಷ್ಯಗಳನ್ನು ಸವಿಯಬೇಕು ಎಂಬ ಯೋಚನೆ ಮತ್ತು ಉತ್ಸಾಹ ನಿಮಗಿದ್ದರೆ ಸೀದಾ ಬೆಂಗಳೂರಿನ ಸಜ್ಜನರಾವ್‌ ಸರ್ಕಲ್‌ಗೆ ಬನ್ನಿ. 

Advertisement

ವೀಕೆಂಡ್‌ನ‌ಲ್ಲಿ ಒಳ್ಳೆಯ ಊಟಕ್ಕಾಗಿ ವೆಬ್‌ಸೈಟ್ಸ್‌ ತಡಕಾಡುವವರು ಹಲವರು. ಫೈವ್‌ಸ್ಟಾರ್‌ ಹೋಟೆಲ್‌, ಡಾಬಾಗಳಿಗೆ ಮೊರೆ ಹೋಗುವವರು ಶ್ರೀಮಂತರು. ಮತ್ತೂಂದಷ್ಟು ಜನ ಸ್ನೇಹಿತರ ಸಲಹೆ ಕೇಳುತ್ತಾರೆ. ಅವರು ಸೂಚಿಸುವ ಹೋಟೆಲ್‌ಗ‌ಳ ಊಟ ರುಚಿಸದೆ ಒಮ್ಮೆ ಹೋಟೆಲನ್ನೂ, ಇನ್ನೊಮ್ಮೆ ಸಲಹೆ ನೀಡಿದ ಸ್ನೇಹಿತರನ್ನೂ ಬೈದುಕೊಂಡು ವಾಪಸ್ಸಾಗುತ್ತಾರೆ.

ಆದರೆ, ವಿ.ವಿ. ಪುರಂನ ಸಜ್ಜನ್‌ರಾವ್‌ ವೃತ್ತದ ಸಮೀಪ ಹೋಟೆಲ್‌ವೊಂದಿದೆ. ಅದು ಅಪ್ಪಟ ಮನೆಯ ಊಟ ಸವಿದ ಅನುಭವ ನೀಡುತ್ತದೆ. ಅಷ್ಟೇ ಅಲ್ಲ, ಆ ಹೋಟೆಲ್‌ಗೆ ಹೋದರೆ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುವ ಭಾಗ್ಯವೂ ನಿಮ್ಮದಾಗಲಿದೆ. ವಾಸವಿ ಮನೆ ತಿಂಡಿ ಎಂಬುದು ಆ ಹೋಟೆಲಿನ ಹೆಸರು. ಅಲ್ಲಿ ಸಾಂಪ್ರದಾಯಿಕ ಊಟ ನೀಡುವುದು ಮಾತ್ರವಲ್ಲ, ಮುತ್ತೈದೆಯರಿಗೆ ಅರಿಶಿನ, ಕುಂಕುಮ, ಮಲ್ಲಿಗೆ ದಿಂಡು ನೀಡಿ ಸ್ವಾಗತಿಸಲಾಗುತ್ತದೆ. 

ಆರ್ಯವೈಶ್ಯ ಸಂಪ್ರದಾಯದ “ವಿಂದು ಭೋಜನ’ ಪದ್ಧತಿ ಇದಾಗಿದ್ದು, ಬೆಳ್ಳಿ ತಟ್ಟೆಯಲ್ಲಿ ಒಂದಲ್ಲ ಎರಡಲ್ಲ… ಬರೋಬ್ಬರಿ 29 ಬಗೆಯ ವಿಧದ ಭಕ್ಷ್ಯಗಳನ್ನು ಸವಿಯಬಹುದು. ಶುದ್ಧ ನಂದಿನಿ ತುಪ್ಪ, ಸೋನಾಮಸೂರಿ ಅಕ್ಕಿ ಬಳಸಿ ಅಡುಗೆ ಮಾಡುವ “ವಾಸವಿ ಮನೆ ತಿಂಡಿ’ ಹೋಟೆಲ್‌ನವರು ಅಡುಗೆಗೆ ಸೋಡಾ ಮತ್ತು ಕಲರ್‌ ಅನ್ನು ನಾವೆಂದೂ ಬಳಸುವುದಿಲ್ಲ ಎಂದು ಗ್ಯಾರಂಟಿ ಕೊಡುತ್ತಾರೆ. ಗುಣಮಟ್ಟದಲ್ಲಿ ಯಾವುದೇ ಕಾರಣಕ್ಕೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ನಮ್ಮಲ್ಲಿ ಸಿಗುವ ಊಟದ ಗುಣಮಟ್ಟ ಕುರಿತು ಯಾರಿಗೂ ಉತ್ತರ ಕೊಡಬೇಕಿಲ್ಲ. ನಮ್ಮ ಪಾಲಿಗೆ ಗ್ರಾಹಕರೇ ದೇವರು. ನಾವು ಮನಃಸಾಕ್ಷಿಗೆ ಹೆದರಿ ಕೆಲಸ ಮಾಡುತ್ತೇವೆ ಎನ್ನುತ್ತಾರೆ ವಾಸವಿ ಮನೆ ತಿಂಡಿ ಹೋಟೆಲ್‌ ಮಾಲೀಕ ಶಿವಕುಮಾರ್‌.

ರಜತದಿಂದ ಆರೋಗ್ಯ ವೃದ್ಧಿ
ಶ್ರೀಮಂತರೆಲ್ಲಾ ಮನೆಯಲ್ಲಿ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುತ್ತಾರೆ. ಹೀಗೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದೆಂದು ಹಿರಿಯರು ಹೇಳಿದ್ದಾರೆ. ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುವ ಅವಕಾಶ ಮಧ್ಯಮ ವರ್ಗದ ಜನರಿಗೂ ಸಿಗಲಿ ಎಂಬ ಉದ್ದೇಶದಿಂದಲೇ ಗ್ರಾಹಕರಿಗೆ ಬೆಳ್ಳಿ ತಟ್ಟೆಯಲ್ಲಿ ಭೋಜನ ನೀಡುವ ಪ್ರಯತ್ನ ಮಾಡಿದ್ದೇವೆ. “ಊಟಕ್ಕೆಂದು ಬಂದವರು ತಟ್ಟೆಯನ್ನೇ ಕದ್ದುಕೊಂಡು ಹೋಗುವ ಸಾಧ್ಯತೆಗಳಿವೆ. ಹಾಗಾಗಿ ಬೆಳ್ಳಿ ತಟ್ಟೆಯಲ್ಲಿ ಊಟ ಕೊಡುವ ಬದಲು ಜರ್ಮನ್‌ ಸಿಲ್ವರ್‌ನಲ್ಲಿ ಊಟ ಕೊಡಿ’ ಎಂದು ಕೆಲವರು ಸಲಹೆ ನೀಡಿದ್ದರು. ಆದರೆ ಹಾಗೆ ಮಾಡಿದರೆ, ನಿಜವಾದ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡಿದಂಥ ಖುಷಿ ಸಿಗುವುದಿಲ್ಲ ಎಂಬ ಕಾರಣಕ್ಕೆ ರಜತ ತಟ್ಟೆಯಲ್ಲೇ ಊಟ ಕೊಡುತ್ತಿದ್ದೇವೆ. ಆರ್ಯ ವೈಶ್ಯರ ಮನೆಯಲ್ಲಿ ಏನೇನು ಭಕ್ಷ್ಯಗಳನ್ನು ಕೊಡುತ್ತಾರೋ ಅದನ್ನೇ ಇಲ್ಲಿಯೂ ಕೊಡುವ ಪ್ರಯತ್ನ ಮಾಡಿದ್ದೇವೆ. ಪ್ರತಿದಿನ ಮಧ್ಯಾಹ್ನ, ಅದೂ 100 ಜನರಿಗೆ ಮಾತ್ರ ಊಟದ ವ್ಯವಸ್ಥೆಯಿದೆ ಎಂದು ಶಿವಕುಮಾರ್‌ ತಿಳಿಸಿದ್ದಾರೆ. 

Advertisement

ವಿಂದು ಭೋಜನದ ಮೆನು
ಉಪ್ಪು, ಅವರೆಕಾಯಿ, ಪೊಪ್ಪಿಂಡಿ, ಚಟ್ನಿಪುಡಿ, ಕೋಸಂಬರಿ, ಪಲ್ಯ, ಮೈಸೂರು ಮಸಾಲೆ ದೋಸೆ ಮತ್ತು ಚಟ್ನಿ, ಚಪಾತಿ ಸಾಗು, ವೆಜ್‌ ಬಿರಿಯಾನಿ, ರೈತಾ, ಚಿತ್ರಾನ್ನ, ಚಕ್ಕುಲಿ, ನಿಪ್ಪಟ್ಟು, ಕೋಡುಬಳೆ, ಹಪ್ಪಳ, ಗೊಂಗೂರ, ಹೋಳಿಗೆ ಅಥವಾ ಸುಗುಂಟಿ ಇಲ್ಲವೇ ಹಾಲು ಹೋಳಿಗೆ, ಪಡ್ಡು, ಪೊಪ್ಪು, ತುಪ್ಪ, ಪಾಯಸ, ಅನ್ನ, ಸಾಂಬಾರ್‌, ಮಜ್ಜಿಗೆ ಹುಳಿ, ರಸಂ, ಮೊಸರನ್ನ, ಹಣ್ಣು, ಬಿಸ್ಲೇರಿ ನೀರು (ಅರ್ಧ ಲೀಟರ್‌ ಬಾಟಲಿ), ಕಡಲೆಪುರಿ, ಎಲೆ ಅಡಿಕೆ ಸುಣ್ಣ. 

ಅವರೆ ಮೇಳ 
ಅವರೆ ಮೇಳಕ್ಕೆ ವಿವಿ ಪುರದ ಸಜ್ಜನ್‌ರಾವ್‌ ವೃತ್ತ ತುಂಬಾ ಫೇಮಸ್‌. ವಾಸವಿ ಕಾಂಡಿಮೆಂಟ್ಸ್‌ ಪ್ರತಿ ವರ್ಷವೂ ಈ ಅವರೆ ಮೇಳ ಆಯೋಜಿಸುತ್ತದೆ. ಶ್ರೀ ವಾಸವಿ ತಿಂಡಿ ಮನೆಯ ಮಾಲೀಕರೂ ಆಗಿರುವ ಶಿವಕುಮಾರ್‌ ಅವರ ಕುಟುಂಬದವರೇ ಈ ಅವರೆಕಾಯಿ ಮೇಳವನ್ನು ಪ್ರತಿವರ್ಷ ನಡೆಸುತ್ತಾ ಬಂದಿದ್ದಾರೆ. ಅವರೆಕಾಯಿಂದ ಮಾಡಿದ ಬೇಳೆ ಹಲ್ವಾ, ಜಹಾಂಗೀರ್‌, ಸ್ವೀಟ್‌ ಬೂಂದಿ, ಕಟ್‌ಲೆಟ್‌, ಅವರೆಕಾಯಿ ಹೋಳಿಗೆ, ನಿಪ್ಪಟ್ಟು, ಉಸುಳಿ, ಪಾಯಸ, ವಡೆಗಳು, ದೋಸೆ, ಎಳ್ಳವರೆ ಪಾಯಸ ಹೀಗೆ ಹಲವು ಬಗೆಯ ಭಕ್ಷ್ಯಗಳನ್ನು ಗ್ರಾಹಕರಿಗೆ ಒದಗಿಸಿ ಯಶಸ್ವಿಯಾಗಿದ್ದಾರೆ.

– ಸಜ್ಜನ್‌ರಾವ್‌ ಸರ್ಕಲ್‌ನಲ್ಲಿ ವಿ.ವಿ. ಬೇಕರಿಯ ಎದುರಿಗೇ ವಾಸವಿ ಮನೆ ತಿಂಡಿ ಹೋಟೆಲ್‌ ಇದೆ.
– 29 ಬಗೆಯ ಭಕ್ಷ್ಯಗಳಿಂದ ಕೂಡಿದ ಊಟಕ್ಕೆ 149 ರೂ. (ಜಿಎಸ್‌ಟಿ ಶುಲ್ಕವನ್ನು ಪ್ರತ್ಯೇಕವಾಗಿ ಕೊಡಬೇಕು)
– ಮುತ್ತೈದೆಯರಿಗೆ ಅರಿಶಿನ, ಕುಂಕುಮ, ಮಲ್ಲಿಗೆ ಹೂ!

Advertisement

Udayavani is now on Telegram. Click here to join our channel and stay updated with the latest news.

Next