Advertisement

ವಸಾಯಿ ತಾಲೂಕು ಮೊಗವೀರ ಸಂಘ :ವಿಶ್ವ ಮಹಿಳಾ ದಿನಾಚರಣೆ

02:14 PM Mar 19, 2019 | Team Udayavani |

ಮುಂಬಯಿ: ಹಲವಾರು ಸನ್ನಿವೇಶಗಳಲ್ಲಿ ಕೆಲವೊಂದು ವಿಶೇಷ ಪ್ರತಿಭೆಗಳನ್ನು ಸೃಷ್ಟಿ ಮಾಡಿದ ಈ ಸಂಸ್ಥೆಯಲ್ಲಿ ಇಂದು ಸಂಘದ ಮಹಿಳಾ ಸದಸ್ಯರು ವಿವಿಧ ಸಂಘ-ಸಂಸ್ಥೆಗಳಲ್ಲಿ ಉನ್ನತ ಹುದ್ದೆಯಲ್ಲಿದ್ದು ಸಮಾಜ ಸೇವೆ ಮಾಡುವ ಅವಕಾಶ ಪಡೆದಿದ್ದಾರೆ. ನಟನೆ, ಸಂಗೀತ ಇನ್ನಿತರ ಕಾರ್ಯ ಚಟುವಟಿಕೆಗಳಿಗೆ ಕಾರಣವಾದ ಈ ಸಂಸ್ಥೆಯಿಂದ ಮಹಿಳೆಯರು ಇನ್ನಷ್ಟು ಸಮಾಜ ಸೇವೆಯಲ್ಲಿ ಯಶಸ್ಸು ಸಾಧಿಸಲಿ ಎಂದು ವಸಾಯಿ ತಾಲೂಕು ಮೊಗವೀರ ಸಂಘದ ಸ್ಥಾಪಕ ಅಧ್ಯಕ್ಷ ಚಂದ್ರಶೇಖರ್‌ ಆರ್‌. ಪುತ್ರನ್‌ ಅವರು ಅಭಿಪ್ರಾಯಿಸಿದರು.

Advertisement

ಮಾ. 17ರಂದು ವಸಾಯಿ ತಾಲೂಕು ಮೊಗವೀರ ಸಂಘದ ಮಹಿಳಾ ವಿಭಾಗದ ವತಿಯಿಂದ ಸಂಘದ ಕಚೇರಿಯ ಸಭಾಗೃಹದಲ್ಲಿ ನಡೆದ ವಿಶ್ವ ಮಹಿಳಾ ದಿನಾಚರಣೆ ಮತ್ತು ಅರಸಿನ ಕುಂಕುಮ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತ
ನಾಡಿದ ಅವರು, ಮಹಿಳಾ ವಿಭಾಗದ ಕಾರ್ಯಕರ್ತೆಯರ ಚಟುವಟಿಕೆಗಳನ್ನು ಶ್ಲಾಘಿಸಿ ಅಭಿನಂದಿಸಿದರು. ದಿ| ರತ್ನಾ ಕರ್ಕೇರ, ಕೃಷ್ಣ ಸಫಲಿಗ ಅವರ ಸೇವೆ ಈ ಸಂಘಕ್ಕೆ ಬಹುದೊಡ್ಡ ಕೊಡುಗೆಯಾಗಿದ್ದು, ಕೃಷ್ಣ ಸಫಲಿಗರ ಗೌರವಾರ್ಥಕವಾಗಿ ಅವರು ಸಂಘಕ್ಕೆ ನೀಡಿದ ಅತ್ಯುನ್ನತ ಸೇವೆಗಾಗಿ ಅವರ ಪತ್ನಿ ಸವಿತಾ ಸಫಲಿಗ ಅವರನ್ನು ಇಂದು ಸಮ್ಮಾನಿಸುವ ಮೂಲಕ ಗೌರವ ಸಂದಾಯ ಮಾಡಿದ್ದೇವೆ. ಮುಂದೆಯೂ ಅವರ ಕುಟುಂಬ ಈ ಸಂಸ್ಥೆಯೊಂದಿಗೆ ಅನ್ಯೋನ್ಯತೆಯಿಂದ ಸೇವಾಪ್ರವೃತ್ತವಾಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ವಿನೋದ್‌ ಕುಂದರ್‌ ಅವರು ಮಾತನಾಡಿ, ಸಂಘದ ಉದ್ದೇಶವೇ ಸಮಾಜ ಸೇವೆಯಾಗಿದೆ. ಈ ಸಂಘವನ್ನು ಈ ಮಟ್ಟಕ್ಕೆ ತರಲು ಎಲ್ಲರೂ ನೀಡಿದ ಸಹಕಾರ ಅಭಿನಂದನೀಯ. ಸಮಾಜ ಬಾಂಧವರಲ್ಲಿ ಪ್ರೀತಿ, ವಿಶ್ವಾಸದಿಂದ ಬೆರೆತಾಗ ಸಂಘ ಕುಟುಂಬವಾಗಿ ಪರಿವರ್ತನೆಗೊಳ್ಳುತ್ತದೆ. ಸಂಸಾರದ ಎಲ್ಲ ಕಷ್ಟಕಾರ್ಪಣ್ಯಗಳನ್ನು ಮೆಟ್ಟಿ ನಿಂತು, ಜನ್ಮ ನೀಡಿದ ಮಗುವಿಗೆ ಸಂಸ್ಕಾರವನ್ನು ತಿಳಿಸಿ  ಸಮಾಜದಲ್ಲಿ ಗೌರವಾನ್ವಿತ ವ್ಯಕ್ತಿಯನ್ನಾಗಿಸುವ ಶಕ್ತಿ ಮಹಿಳೆಯರಿಗಿದೆ. ನಾವು ಮಾಡುವ ಯಾವುದೇ ಕೆಲಸಕ್ಕೆ ಮಹಿಳೆಯರ ಹಿನ್ನೆಲೆಯಿದ್ದರೆ ಮಾತ್ರ ನಾವು ಯಶಸ್ವಿಯಾಗಲು ಸಾಧ್ಯ. ಸಂಸಾರದ ನೌಕೆಯಲ್ಲಿ ಸಹಜತೆ, ಭಿನ್ನತೆಯ ನಡುವೆ ಗಣ್ಯ ವ್ಯಕ್ತಿಗಳನ್ನಾಗಿ ಪರಿವರ್ತಿಸುವುದರಲ್ಲಿ ಮಹಿಳೆಯ ಪಾತ್ರ ಹಿರಿದಾಗಿದೆ. ವಿಶ್ವ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ಇಂತಹ ಮಹಿಳೆಯರನ್ನು ಅಭಿನಂದಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ನುಡಿದು ಸರ್ವರನ್ನು ಅಭಿನಂದಿಸಿದರು.
ಸಂಘದ ಸದಸ್ಯ ದಯಾನಂದ ಕುಂದರ್‌ ಅವರು ಮಾತನಾಡಿ, ವಸಾಯಿ ತಾಲೂಕು ಮೊಗವೀರ ಸಂಘದ ಮಹಿಳಾ ವಿಭಾಗದ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಸಂಘಕ್ಕೆ ವಿಶೇಷ ಕೊಡುಗೆ ನೀಡಿದ ಕೊಡುಗೈದಾನಿ, ಹಲವಾರು ವರ್ಷಗಳಿಂದ ಸಂಘದ ಸದಸ್ಯೆಯಾಗಿ ಸಂಘಕ್ಕೆ ಸೇವೆ ಸಲ್ಲಿಸಿದ ಸವಿತಾ ಸಫಲಿಗ ಅವರನ್ನು ಸಂಘದ ವತಿಯಿಂದ ಈ ಕಾರ್ಯಕ್ರಮದಲ್ಲಿ ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿ ಗೌರವಿಸಲಾಯಿತು.

ಪ್ರಾರಂಭದಲ್ಲಿ ಅತಿಥಿಗಳು, ಪದಾಧಿ ಕಾರಿಗಳು ದೀಪ ಪ್ರಜ್ವಲಿಸಿ ಕಾರ್ಯ ಕ್ರಮಕ್ಕೆ ಚಾಲನೆ ನೀಡಿದರು. ಸುಗಂಧಿ ಪುತ್ರನ್‌ ಮತ್ತು ಬಳಗದವರು ಪ್ರಾರ್ಥ ನೆಗೈದರು. ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಇಂದಿರಾ ಪುತ್ರನ್‌ ಸ್ವಾಗತಿಸಿದರು. ಮಹಿಳೆಯರಿಂದ, ಮಕ್ಕಳಿಂದ ವಿವಿಧ  ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.
ಇತ್ತೀಚೆಗೆ ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ವಿಧ್ವಂಸಕ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಶ್ರದ್ಧಾಂಜಲಿ ಗೀತೆಯನ್ನು ಅರ್ಪಿಸಿದರು. ಮಹಿಳಾ ವಿಭಾಗದ ಸದಸ್ಯೆ ಮೋಹಿನಿ ಎಸ್‌. ಮಲ್ಪೆ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಸದಸ್ಯೆ ಯಶೋದಾ ಬಂಗೇರ ಸಹಕರಿಸಿದರು. ಕೊನೆಯಲ್ಲಿ ಮಹಿಳೆಯರು ಪರಸ್ಪರ ಅರಸಿನ ಕುಂಕುಮವನ್ನು ಹಚ್ಚಿಕೊಂಡು ಶುಭ ಹಾರೈಸಿಕೊಂಡರು.

ಸಮಾಜ ಬಾಂಧವರು, ಸಮಾಜದ ಮಹಿಳೆಯರು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಸಂಸ್ಥೆಯ ಗೌರವ ಪ್ರಧಾನ ಕಾರ್ಯದರ್ಶಿ ಮುರಳೀಧರ ಪುತ್ರನ್‌, ಗೌರವ ಕೋಶಾಧಿಕಾರಿ ರಾಜ್‌ ಕಾಂಚನ್‌, ಕಾರ್ಯಕ್ರಮ ವಿಭಾಗದ ಕಾರ್ಯಾಧ್ಯಕ್ಷ ಸುಧೀರ್‌ ಸಾಲ್ಯಾನ್‌ ಮೊದಲಾದವರು ಉಪಸ್ಥಿತರಿದ್ದರು. 

Advertisement

 ಚಿತ್ರ-ವರದಿ: ರಮೇಶ್‌ ಉದ್ಯಾವರ್‌ 

Advertisement

Udayavani is now on Telegram. Click here to join our channel and stay updated with the latest news.

Next