ಮುಂಬಯಿ: 2022 ಬಾಲಿವುಡ್ ಸಿನಿಮಾ ರಂಗಕ್ಕೆ ಅಷ್ಟೇನೂ ಸಾಧನೆ ಹಾಗೂ ಪ್ರಶಂಸೆ ಗಿಟ್ಟಿಸಿಕೊಳ್ಳದ ವರ್ಷ. ಬೆರಳಣಿಗೆಯಷ್ಟು ಹಿಂದಿ ಸಿನಿಮಾಗಳು ಹಿಟ್ ಆಗಿವೆ. ಅದು ಬಿಟ್ಟರೆ ಸದ್ದು ಮಾಡಿರುವುದು ಸೌತ್ ಸಿನಿಮಾಗಳೇ ಹೆಚ್ಚು.
ಇಂಡಿಯಾ ಟುಡೇ ಶೃಂಗದಲ್ಲಿ ಬಾಲಿವುಡ್ ನಟ ವರುಣ್ ಧವನ್ ಹಿಂದಿ ಸಿನಿಮಾದ ಪ್ರಸ್ತುತ ಸ್ಥಿತಿಗತಿ ಹಾಗೂ ದಕ್ಷಿಣದ ಸಿನಿಮಾಗಳು ಯಶಸ್ಸಿನ ಜೊತೆ ಭಾರತೀಯ ಸಿನಿಮಾರಂಗದ ಬಗ್ಗೆ ಮಾತಾನಾಡಿದ್ದಾರೆ.
ತಮಿಳು, ತೆಲುಗು ಭಾಷೆಯಲ್ಲಿ ಸಿನಿಮಾ ಮಾಡಲು ಇಷ್ಟಪಡುತ್ತೇನೆ : ಭಾರತೀಯ ಚಿತ್ರರಂಗ ಪ್ರಸ್ತುತ ತುಂಬಾ ಒಳ್ಳೆಯ ರೀತಿಯಲ್ಲಿ ಬೆಳೆಯುತ್ತಿದೆ. ಭಾರತ ತಂಡ ಹೇಗೆ ವಿಶ್ವಕಪ್ ನಲ್ಲಿ ಒಗ್ಗಟ್ಟಾಗಿ ಆಡುತ್ತಿದೆ. ಅಲ್ಲಿ ದಕ್ಷಿಣ – ಉತ್ತರ ಎನ್ನುವ ಮಾತುಗಳು ಬರಲ್ಲ . ಕನ್ನಡದ ʼಕಾಂತಾರʼ, ʼಕೆಜಿಎಫ್-2ʼ ಅಥವಾ ʼವಿಕ್ರಂʼ ಸಿನಿಮಾ ಹಿಟ್ ಆದರೆ ನಾವು ಅದರಿಂದ ಸ್ಪೂರ್ತಿ ಪಡೆಯಬೇಕು ಹಾಗೂ ಒಟ್ಟಾಗಿ ಕೆಲಸ ಮಾಡಲು ಪ್ರಯತ್ನಿಸಿದರೆ ನಮ್ಮ ಸಿನಿಮಾ ರಂಗ ಬೆಳೆಯಲು ಸಹಾಯವಾಗುತ್ತದೆ ಎಂದರು.
ಹೌದು ಹಿಂದಿ ಸಿನಿಮಾಗಳು ಈಗ ಹೇಳಿಕೊಳ್ಳುವಷ್ಟು ಹೆಸರು ಮಾಡುತ್ತಿಲ್ಲ. ಇದನ್ನು ಹೇಳಲು ನನಗೆ ಇದು ಸೂಕ್ತ ಸಮಯ ಅನ್ನಿಸಿತು. ನನಗೆ ತಮಿಳು, ತೆಲುಗು ಭಾಷೆಯಲ್ಲಿ ಸಿನಿಮಾ ಮಾಡುವುದು ಯಾವಾಗಲೂ ಇಷ್ಟ. ನನ್ನ ಮುಂದಿನ ಸಿನಿಮಾ ʼಭೇಡಿಯಾʼ ತಮಿಳು- ತೆಲುಗಿನಲ್ಲಿ ರಿಲೀಸ್ ಆಗಲಿದೆ. ಇದು ಇತರ ಭಾಷೆಯ ಸಿನಿಮಾ ಕಲಾವಿದರು, ತಂತ್ರಜ್ಞರು ಒಂದಾಗಿ ಕೆಲಸ ಮಾಡಲು ಉತ್ತಮ ಎಂದರು.
ಕೆಜಿಎಫ್ ನಲ್ಲಿ ಹಿಂದಿಯ ಕಲಾವಿದರು ಇದ್ದಾರೆ: ನನಗೆ ಒಂದು ಅರ್ಥ ಆಗಲಿಲ್ಲ. ಕೆಜಿಎಫ್ -2 ನಲ್ಲಿ ಹಿಂದಿಯ ರವೀನಾ ಟೆಂಡನ್, ಸಂಜಯ್ ದತ್ ಅವರೂ ಕೂಡ ಇದ್ದಾರೆ. ಪ್ರೇಕ್ಷಕರು ಯಾಕೆ ಇದನ್ನು ಮರೆತು ಹೋಗಿದ್ದಾರೆ? ಅನ್ನೋದು ಗೊತ್ತಿಲ್ಲ. ಆ ಕಲಾವಿದರು ಅಲ್ಲಿನ ಪ್ರೇಕ್ಷಕರನ್ನು ಇಷ್ಟಪಡುತ್ತಾರೆ. ನಾವು ಅಲ್ಲಿನ ಕಲಾವಿದರನ್ನು ಇಷ್ಟಪಡುತ್ತೇವೆ ಮತ್ತು ಅಲ್ಲಿನವರಿಂದ ನಾವು ಸ್ಪೂರ್ತಿಯನ್ನು ಪಡೆಯುತ್ತೇವೆ ಎಂದರು.
ನಾನು ಕಮಲ್ ಹಾಸನ್, ರಜಿನಿಕಾಂತ್ ಇಬ್ಬರ ಅಭಿಮಾನಿ. ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕರೆ ಖಂಡಿತ ಮಾಡುತ್ತೇನೆ. ಅಲ್ಲು ಅರ್ಜುನ್ ಹಾಗೂ ಯಶ್ ಇಬ್ಬರು ಅದ್ಭುತ ಕಲಾವಿದರು. ಈಗ ಬಂದಿರುವ ʼಕಾಂತಾರʼದ ನಿರ್ದೇಶಕ, ನಟ ರಿಷಬ್ ಅವರನ್ನು ಭಾಷೆಯಾಗಿ ವಿಭಜಿಸಬಹುದು. ಆದರೆ ದೇಶ, ಸಿನಿಮಾದ ವಿಚಾರದಲ್ಲಿ ನಾವು ಒಂದಾಗಿಯೇ ಇರುತ್ತೇವೆ. ಇದು ಒಗ್ಗಟ್ಟಾಗಿ ಇರಲು ಸೂಕ್ತ ಸಮಯ. ಸಿನಿಮಾದಿಂದ ದೊಡ್ಡ ಪರಿವರ್ತನೆ ಕಾಣಲು ಸಾದ್ಯವೆಂದರು. ಲೋಕೇಶ್ ಕನಕರಾಜ್ ನನಗೊಂದು ಪಾತ್ರದ ಆಫರ್ ಕೊಟ್ಟಿದ್ದಾರೆ. ಖಂಡಿತ ನಾನು ಸಿನಿಮಾ ಮಾಡುತ್ತೇನೆ ಎಂದರು.