ಚೆನ್ನೈ: ಕಾಲಿವುಡ್ ನಲ್ಲಿ ಪೊಂಗಲ್ ಹಬ್ಬದ ವೇಳೆ ರಿಲೀಸ್ ಆಗಿದ್ದ ದಳಪತಿ ವಿಜಯ್ ಅವರ ʼವಾರಿಸುʼ ಸಿನಿಮಾ 300 ಕೋಟಿ ಕ್ಲಬ್ ಸೇರುವ ಮೂಲಕ ವಿಜಯ್ ಸಿನಿ ಕೆರಿಯರ್ ನಲ್ಲಿ ಹೊಸ ದಾಖಲೆ ಬರೆದಿದೆ.
ವರ್ಷದ ಆರಂಭದಲ್ಲಿ ಅಂದರೆ ಜ.11 ರಂದು ರಿಲೀಸ್ ಆದ ʼವಾರಿಸುʼ ಕಾಲಿವುಡ್ ನಲ್ಲಿ ದೊಡ್ಡ ಹಿಟ್ ಆಗಿದೆ. ಬ್ಯುಸಿನೆಸ್ ಮ್ಯಾನ್ ಫ್ಯಾಮಿಲಿಯ ಕಥೆಯನ್ನೊಳಗೊಂಡಿರುವ ಸಿನಿಮಾದಲ್ಲಿ ದಳಪತಿ ವಿಜಯ್ ಮಾಸ್ & ಕ್ಲಾಸ್ ಅವತಾರಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈಗ ಸಿನಿಮಾ ಓಟಿಟಿ ಎಂಟ್ರಿಗೆ ಸಜ್ಜಾಗಿದೆ.
ಭಾರತದಲ್ಲಿ ʼವಾರಿಸುʼ 214 ಕೋಟಿ ರೂ.ಗಳಿಸಿದೆ. ವಿಜಯ್ ಅವರ ಸಿನಿಮಾ ಭಾರತದಲ್ಲಿ ಇಷ್ಟು ಕಮಾಯಿ ಮಾಡಿದ್ದು ಇದೇ ಮೊದಲು. ಇದಕ್ಕೂ ಮುನ್ನ ರಿಲೀಸ್ ಆಗಿದ್ದ ʼಮಾಸ್ಟರ್ʼ ಸಿನಿಮಾ 210 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಗ್ಲೋಬಲ್ ಬಾಕ್ಸ್ ಆಫೀಸ್ ನ ಕಲೆಕ್ಷನ್ ಸೇರಿ ಸಿನಿಮಾ 302 ಕೋಟಿ ರೂ ಗಳಿಕೆ ಕಂಡಿದೆ. ಈ ಕಲೆಕ್ಷನ್ ವಿಜಯ್ ಅವರ ಹಿಂದಿನ ಸಿನಿಮಾ ʼಬಿಗಿಲ್ʼ ದಾಖಲೆಯನ್ನು ಹಿಂದಕ್ಕಿದೆ. ʼಬಿಗಿಲ್ʼ ವರ್ಲ್ಡ್ ವೈಡ್ 299 ಕೋಟಿ ರೂ ಗಳಿಕೆ ಕಂಡಿತ್ತು.
ಸಿನಿಮಾ ತಮಿಳುನಾಡಿನಲ್ಲೂ ಅತೀ ಹೆಚ್ಚು ಕಲೆಕ್ಷನ್ ಮಾಡಿದೆ. ಅಂದಾಜು 143.75 ಕೋಟಿ ರೂ. ಗಳಿಸಿದ್ದು, ಇದು ಈ ಹಿಂದಿನ ʼಮಾಸ್ಟರ್ʼ, ;ಬಿಗಿಲ್ʼ ದಾಖಲೆಯನ್ನು ಬ್ರೇಕ್ ಮಾಡಿದೆ. ಈ ಎರಡೂ ಸಿನಿಮಾಗಳು ತಮಿಳುನಾಡಿನಲ್ಲಿ 140 ಕೋಟಿ ಕಲೆಕ್ಷನ್ ಮಾಡಿತ್ತು. ಇನ್ನು 3-4 ಕೋಟಿ ಕಲೆಕ್ಷನ್ ಮಾಡಿದರೆ ಸಿನಿಮಾ ʼಪೊನಿಯನ್ ಸೆಲ್ವನ್ʼ,ʼವಿಕ್ರಮ್ʼ ಗಳ ಹಿಂದೆ ಅಂದರೆ ಅತೀ ಹೆಚ್ಚು ಹಣ ಗಳಿಸಿದ ಸಿನಿಮಾಗಳ ಪಟ್ಟಿಯಲ್ಲಿ ( ತಮಿಳುನಾಡಿನಲ್ಲಿ) 3ನೇ ಸ್ಥಾನವನ್ನು ಪಡೆಯುತ್ತದೆ.
ಎಲ್ಲೆಲ್ಲಿ ಎಷ್ಟೆಟ್ಟು ಗಳಿಕೆ( ಅಂದಾಜು)
ತಮಿಳುನಾಡು -143.75 ಕೋಟಿ ರೂ.
ಕರ್ನಾಟಕ – 15 ಕೋಟಿ ರೂ.
ಕೇರಳ – 13.40 ಕೋಟಿ ರೂ.
ಆಂಧ್ರ/ತೆಲಂಗಾಣ – 27.25 ಕೋಟಿ ರೂ.
ಭಾರತದ ಉಳಿದ ಭಾಗ – 14.60 ಕೋಟಿ ರೂ.
ಒಟ್ಟು – 214 ಕೋಟಿ ರೂ.
ವಿಜಯ್, ರಶ್ಮಿಕಾ, ಶರತ್ಕುಮಾರ್, ಜಯಸುಧಾ, ಪ್ರಕಾಶ್ ರಾಜ್, ಯೋಗಿ ಬಾಬು ಮುಂತಾದ ಕಲಾವಿದರು ನಟಿಸಿದ್ದಾರೆ.