ಚಾಮರಾಜನಗರ: ರಾಜ್ಯ ಬಿಜೆಪಿ ಯುವ ಮೋರ್ಚಾ ವತಿಯಿಂದ ಜಿಲ್ಲೆಯ ಯುವ ಮೋರ್ಚಾ ಕಾರ್ಯಕರ್ತರೊಂದಿಗೆ ವರ್ಚುವಲ್ ವಿಡಿಯೋ ಸಂವಾದ ಮಂಗಳವಾರ ನಡೆಸಲಾಯಿತು. ಬೆಂಗಳೂರಿನ ಬಿಜೆಪಿ ಕೇಂದ್ರ ಕಚೇರಿಯಿಂದ ನಡೆದ ವಿಡಿಯೋ ಸಂವಾದದಲ್ಲಿ, ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಜಯೇಂದ್ರ ಮಾತನಾಡಿ, ಅಭಿವೃದ್ಧಿ ಕನಸು ನನಸಾಗಿಸಲು ಪ್ರಧಾನಿ ನರೇಂದ್ರ ಮೋದಿ ಶ್ರಮ ವಹಿಸುತ್ತಿದ್ದಾರೆ.
ಯೋಜನೆಗಳ ಮುಖಾಂತರ ಕಟ್ಟ ಕಡೆಯ ಜನರಿಗೂ ಯೋಜನೆಗಳ ಫಲ ನೀಡುತ್ತಿದ್ದಾರೆ ಎಂದು ಹೇಳಿದರು. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಮುಖಾಂತರ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಆಯುಷ್ಮಾನ್ ಭಾರತದ ಮುಖಾಂತರ ಬಡಜನತೆಗೆ ನೆರವಾಗಿದ್ದಾರೆ. ಜನಧನ್ ಯೋಜನೆ ಮೂಲಕ ಮಹಿಳೆಯರಿಗೆ ಆರ್ಥಿಕ ಅನುಕೂಲ ಮಾಡಿಕೊಟ್ಟಿದ್ದಾರೆ.
ಮುದ್ರಾ ಯೋಜನೆಯಡಿ ಯುವಕರಿಗೆ ಉದ್ಯೋಗ ಪ್ರಾರಂಭಿಸಲು ಸಹಾಯ ಮಾಡುತ್ತಿದ್ದಾರೆ ಎಂದು ತಿಳಿಸಿದರು. ಮುಖ್ಯಮಂತ್ರಿ ಯಡಿಯೂರಪ್ಪ ದೇಶದಲ್ಲೇ ಮೊದಲು ಲಾಕ್ ಡೌನ್ ಜಾರಿಗೆ ತಂದರು. ಅಧಿಕಾರಿಗಳು, ಸಚಿವರು, ಶಾಸಕರು ಎಲ್ಲ ವರ್ಗದ ಅಧಿಕಾರಿಗಳೊಂದಿಗೆ ಸತತ ಸಭೆ ನಡೆಸಿ ಕೊರೊನಾ ನಿಯಂತ್ರಣಕ್ಕಾಗಿ ಶ್ರಮಿಸುತ್ತಿದ್ದಾರೆ. ಆರ್ಥಿಕ ಪ್ಯಾಕೇಜ್ ಘೋಷಿಸಿ ದೇಶಕ್ಕೇ ಮಾದರಿ ಮುಖ್ಯಮಂತ್ರಿ ಎನಿಸಿಕೊಂಡಿದ್ದಾರೆ ಎಂದು ಹೇಳಿದರು.
ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ರಾಜ್ಯ ಬಿಜೆಪಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ, ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ರಾಜ್ಯ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ತಮ್ಮೇಶ್ ಗೌಡ, ಜಿಲ್ಲೆಯಿಂದ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಣಯ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.