ಉಡುಪಿ: ಉಡುಪಿ ನಗರಕ್ಕೆ ಕೇಂದ್ರ ಸರಕಾರದ ಅಮೃತ್ ಯೋಜನೆಯ ಅಡಿಯಲ್ಲಿ ಬರುವ ಕುಡಿಯುವ ನೀರಿನ 282 ಕೋ.ರೂ. ಪರಿಷ್ಕೃತ ಯೋಜನೆಗೆ ಬೆಂಗಳೂರಿನಲ್ಲಿ ಶುಕ್ರವಾರ ನಡೆದ ವಿಧಾನ ಪರಿಷತ್ತಿನ ಅರ್ಜಿ ಸಮಿತಿ ಸಭೆ ಅಂಗೀಕಾರ ನೀಡಿದೆ ಎಂದು ಶಾಸಕ ಕೆ. ರಘುಪತಿ ಭಟ್ ತಿಳಿಸಿದ್ದಾರೆ.
ಸಭೆಯ ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಮಾಜಿ ಉಪಸಭಾಪತಿ, ಅರ್ಜಿ ಸಮಿತಿ ಅಧ್ಯಕ್ಷ ಬಸವರಾಜ ಹೊರಟ್ಟಿ ವಹಿಸಿದ್ದರು. ಹಿಂದಿನ ಯೋಜನೆಯಂತೆ ವಾರಾಹಿಯಿಂದ ಶುದ್ಧೀಕರಿಸದ ನೀರನ್ನು ಪೈಪ್ ಮೂಲಕ ತಂದು ಬಜೆಯ ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಿಸಿ ಮಣಿಪಾಲಕ್ಕೆ ನೀರು ಕೊಂಡೊಯ್ಯುವುದಾಗಿತ್ತು. ಆದರೆ ಇದಕ್ಕೆ ರೈತ ಸಂಘದವರು ಆಕ್ಷೇಪಣೆ ಸಲ್ಲಿಸಿದ್ದರು. ಆದ್ದರಿಂದ ಅರ್ಜಿ ಸಮಿತಿಯು ಟೆಂಡರಿಗೆ ತಡೆಯೊಡ್ಡಿ ವಿಚಾರಣೆ ನಡೆಸಿತ್ತು.
ಈ ಮಧ್ಯೆ ಕೆ. ರಘುಪತಿ ಭಟ್ ಅವರು ವಿಧಾನ ಪರಿಷತ್ ಸಭಾಪತಿ ಪ್ರತಾಪ ಚಂದ್ರ ಶೆಟ್ಟಿ ಹಾಗೂ ಇತರೆ ಮುಖಂಡರ ಮೂಲಕ ರೈತ ಸಂಘದವರಲ್ಲಿ ಬಳಿ ಮಾತನಾಡಿ ಯೋಜನೆ ಪರಿಷ್ಕರಿಸುವ ಬಗ್ಗೆ ಚರ್ಚಿಸಿದ್ದರು. ಶುಕ್ರವಾರದ ಸಭೆಯಲ್ಲಿ ಚರ್ಚೆಯಾಗಿ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು. ಆ ಪ್ರಕಾರ ವಾರಾಹಿಯಲ್ಲಿ (ಬರತ್ಕಲ…) 50 ಎಂಎಲ…ಡಿ ಶುದ್ಧೀಕರಣ ಘಟಕ ನಿರ್ಮಾಣ ಮಾಡಿ ಅಲ್ಲಿಂದ ಪೈಪ್‌ಲೈನ್ ಮೂಲಕ ಮಣಿಪಾಲದ ಜಿಎಲ…ಆರ್‌ಗೆ ನೀರು ಹಾಯಿಸಿ ವಿತರಣೆ ಮಾಡಲು, ದಾರಿಯ ಮಧ್ಯೆ ಬರುವ ಎಲ್ಲ ಗ್ರಾ.ಪಂ.ಗಳಿಗೆ ಈ ಶುದ್ಧೀಕರಿಸಿದ ನೀರನ್ನು ಕೊಡಲು ನಿರ್ಧರಿಸಲಾಯಿತು. ದಾರಿ ಮಧ್ಯೆ ಪೈಪ್ ಅಳವಡಿಸಲು ಆವಶ್ಯಕತೆ ಇರುವಲ್ಲಿ ರಸ್ತೆಯನ್ನು ಅಗೆದಲ್ಲಿ ಮತ್ತೆ ಅದನ್ನು ಮರುಡಾಮರೀಕರಣ ನಡೆಸಿ ಪೂರ್ಣಗೊಳಿಸುವ ಬಗ್ಗೆ, ತತ್‌ಕ್ಷಣ ಮರು ಟೆಂಡರ್ ಕರೆದು ಕಾಮಗಾರಿಯನ್ನು ಪ್ರಾರಂಭಿಸಲು ಸಭೆ ನಿರ್ಧರಿಸಿತು.
ಬಸವರಾಜ ಹೊರಟ್ಟಿಯವರು ಟೆಂಡರ್ ಕರೆದು ಕಾಮಗಾರಿ ಆರಂಭವಾದ ಬಗ್ಗೆ ವರದಿಯನ್ನು ಅರ್ಜಿ ಸಮಿತಿಗೆ ನೀಡಬೇಕೆಂದು ಸೂಚಿಸಿದರು. ರಘುಪತಿ ಭಟ್ ಅವರು ಅಧ್ಯಕ್ಷರ ಅನುಮತಿ ಮೇರೆಗೆ ಸಭೆಯಲ್ಲಿ ಭಾಗವಹಿಸಿ ಕುಡಿಯುವ ನೀರಿನ ಬಗ್ಗೆ ವಿವರಿಸಿ ತತ್‌ಕ್ಷಣ ಕೆಲಸ ಕೈಗೊಳ್ಳುವಂತೆ ಅಧಿಕಾರಿಗೆ ಸೂಚಿಸಿದರು. ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್, ಬೃಹತ್ ನೀರಾವರಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಕೇಶ್ ಸಿಂಗ್, ಕೆಯುಐಡಿಎಫ್ಸಿ ಆಡಳಿತ ನಿರ್ದೇಶಕ ಇಬ್ರಾಹಿಂ, ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು. ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಉಡುಪಿ ನಗರಕ್ಕೆ ಕುಡಿಯುವ ನೀರು ಒದಗಿಸುವ ವಾರಾಹಿ ಯೋಜನೆಗೆ ತಾರ್ಕಿಕ ಅಂತ್ಯ ಕಂಡಿದೆ, ಪರಿಹಾರ ಸಿಕ್ಕಿದೆ ಎಂದು ರಘುಪತಿ ಭಟ್ ಅಭಿಪ್ರಾಯಪಟ್ಟಿದ್ದಾರೆ.
ಯೋಜನೆಗೆ ರಾಜ್ಯ ಸರಕಾರ ಅನುಮೋದನೆ: ಪ್ರಮೋದ್
ಉಡುಪಿ: ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವುದರಿಂದ ಬಹು ಕಾಲದಿಂದ ಬೇಡಿಕೆ ಇದ್ದ ಅಮೃತ್ ಯೋಜನೆಯಡಿ ವಾರಾಹಿ ಕುಡಿಯುವ ನೀರಿನ ಯೋಜನೆಗೆ ರಾಜ್ಯ ಸರಕಾರ ಅನುಮೋದನೆ ನೀಡಿದೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.
ನಾನು ಸಚಿವ, ಶಾಸಕನಾಗಿದ್ದಾಗ ಪ್ರಯತ್ನಿಸಿ ಯೋಜನೆ ಮಂಜೂರಾಗಿತ್ತು. ಇದರೊಂದಿಗೆ ಇನ್ನೆರಡು ನೀರಿನ ಯೋಜನೆಗಳೂ ಮಂಜೂರಾಗಿತ್ತು. 100 ಕೋ.ರೂ. ವೆಚ್ಚದ ವಿತರಣ ಜಾಲದ ಕೆಲಸದ ಟೆಂಡರ್ ಈಗಾಗಲೇ ಆಗಿದೆ. ಇದು ಎಡಿಬಿ ಯೋಜನೆಯಾಗಿದೆ. ಇನ್ನೊಂದು 50 ಕೋ.ರೂ. ವೆಚ್ಚದ ನೀರು ಶುದ್ಧೀಕರಿಸುವ ಘಟಕ. ಇದು ರಾಜ್ಯ ಸರಕಾರದ ಹಣಕಾಸು ನೆರವಿನಿಂದ ನಡೆಯಲಿದ್ದು ಟೆಂಡರ್ ಹಂತದಲ್ಲಿದೆ. ಇವು ಮೂರೂ ಸೇರಿ ಒಟ್ಟು 270 ಕೋ.ರೂ. ಯೋಜನೆಯಾಗಿದೆ. ಇದರಿಂದ ನೀರಿನ ಸಮಸ್ಯೆ ನೀಗಲಿದೆ ಎಂದು ಹೇಳಿದ್ದಾರೆ.