ಸನಕ ಮೊದಲಾದ ನಾಲ್ವರು ಋಷಿಗಳು ವಿಷ್ಣುವನ್ನು ಕಾಣಲು ವೈಕುಂಠಕ್ಕೆ ಹೋದರು. ವಿಷ್ಣುವಿನ ಅಂತಃಪುರದ ಮಹಾದ್ವಾರದಲ್ಲಿ ಜಯ ಮತ್ತು ವಿಜಯ ಎಂಬ ದ್ವಾರಪಾಲಕರು ನಿಂತಿದ್ದರು. ಅವರು ಋಷಿಗಳನ್ನು ತಡೆದರು. ಋಷಿಗಳು ಕೋಪದಿಂದ ಅವರಿಗೆ ಭೂಲೋಕದಲ್ಲಿ ಹುಟ್ಟುವಂತೆ ಶಾಪ ಕೊಟ್ಟರು. ಜಯವಿಜಯರಿಗೆ ಪಶ್ಚಾತ್ತಾಪವಾಯಿತು. ಋಷಿಗಳಿಗೂ ತಾವು ಕೋಪ ಮಾಡಿಕೊಂಡದ್ದಕ್ಕೆ ವಿಷಾದವಾಯಿತು. ಆ ಹೊತ್ತಿಗೆ ಮಹಾವಿಷ್ಣುವು ಅಲ್ಲಿ ಕಾಣಿಸಿಕೊಂಡು, ಜಯ ವಿಜಯರು ಭೂಲೋಕದಲ್ಲಿ ಹುಟ್ಟಿ ತನ್ನನ್ನು ದ್ವೇಷಿಸುತ್ತ, ಆ ದ್ವೇಷದಿಂದ ಯಾವಾಗಲೂ ತನ್ನ ವಿಷಯವನ್ನೇ ಯೋಚಿಸುತ್ತಾ ಕಡೆಗೆ ತನ್ನ ಬಳಿಗೇ ಹಿಂದಿರುಗುವರೆಂದು ಹೇಳಿದನು.
ಜಯವಿಜಯರು ಭೋಲೋಕದಲ್ಲಿ ಹಿರಣ್ಯಾಕ್ಷ, ಹಿರಣ್ಯ ಕಶಿಪು ಹೆಸರುಗಳನ್ನು ಪಡೆದರು. ಪರ್ವತಾಕಾರದಲ್ಲಿ ಬೆಳೆದರು. ಹಿರಣ್ಯ ಕಶಿಪು ಬ್ರಹ್ಮನನ್ನು ಕುರಿತು ಉಗ್ರ ತಪಸ್ಸು ಮಾಡಿ ದೇವತೆಗಳು, ಮನುಷ್ಯರು ಯಾರಿಂದಲೂ ತನಗೆ ಸಾವು ಬರದಂತೆ ವರವನ್ನು ಪಡೆದನು. ಎಲ್ಲ ಲೋಕಪಾಲಕರನ್ನು ಜಯಿಸಿ ಮೂರು ಲೋಕಗಳಿಗೂ ಸಾರ್ವಭೌಮನಾದನು. ಹಿರಣ್ಯಾಕ್ಷನು ಅವನಿಗಿಂತ ಬಲಶಾಲಿಯಾಗಿ ಮೆರೆದ. ಅವನು ಸಮುದ್ರರಾಜನಾದ ವರುಣನನ್ನು ಯುದ್ಧಕ್ಕೆ ಕರೆದ.
ವರುಣನು, “ನಿನ್ನೊಡನೆ ಪರಮಾತ್ಮ ಮಾತ್ರ ಯುದ್ಧ ಮಾಡಬಲ್ಲ’ ಎಂದು ಹೇಳಿದ. ಹಿರಣ್ಯಾಕ್ಷನು ಪರಮಾತ್ಮನನ್ನು ಹುಡುಕುತ್ತಾ ಹೊರಟ. ಭಯಂಕರ ರೂಪದ ನರಾಹವು ಭೂಮಿಯನ್ನು ತನ್ನ ಕೋರೆ ದವಡೆಯ ಮೇಲೆ ಭೂಮಿಯನ್ನು ಎಲ್ಲಿ ತೆಗೆದುಕೊಂಡು ಹೋಗುತ್ತೀಯೆ? ಇಲ್ಲಿಯೇ ಇಟ್ಟು ಹಿಂದಕ್ಕೆ ವರಾಹಮೂರ್ತಿಯು ಅವನನ್ನು ಲಕ್ಷ್ಯ ಮಾಡಲಿಲ್ಲ.
ಹಿರಣ್ಯಾಕ್ಷನು ಅದನ್ನು ಅಟ್ಟಿಸಿಕೊಂಡು ಹೋಗಿ ಕೆಣಕಿದ. ಅವರಿಬ್ಬರಿಗೂ ಭಯಂಕರ ಹೋರಾಟವಾಯಿತು. ರಾಕ್ಷಸನು ವರಾಹಮೂರ್ತಿಯ ಗದೆಯನ್ನು ನೆಲಕ್ಕೆ ಕೆಡವಿದ. ವರಾಹಮೂರ್ತಿಯು ಚಕ್ರಾಯುಧವನ್ನು ಪ್ರಯೋಗಿಸಿದ. ಅದರಿಂದ ಹಿರಣ್ಯಾಕ್ಷನ ಎಲ್ಲ ಆಯುಧಗಳು ವ್ಯರ್ಥವಾದವು. ಹಿರಣ್ಯಾಕ್ಷನು ವರಾಹಮೂರ್ತಿಯನ್ನು ತನ್ನ ತೋಳುಗಳಲ್ಲಿ ಹಿಡಿದು ಅಮುಕಿ ಕೊಲ್ಲಲು ಪ್ರಯತ್ನಿಸಿದನು. ವರಾಹಮೂರ್ತಿಯು ಅವನ ಕಪಾಷಕ್ಕೆ ಹೊಡೆದ. ಹಿರಣ್ಯಾಕ್ಷನು ಕೆಳಕ್ಕೆ ಬಿದ್ದು ಪ್ರಾಣ ಬಿಟ್ಟ. ಭೂಮಿಯು ತನ್ನ ಸ್ಥಾನವನ್ನು ಸೇರಿತು.
– ಪ್ರೊ. ಎಲ್. ಎಸ್. ಶೇಷಗಿರಿರಾವ್ ಅವರ
“ಕಿರಿಯರ ಭಾಗವತ’ ಪುಸ್ತಕದಿಂದ)