ನಾಟಿಂಗ್‌ಹ್ಯಾಮ್: ವನಿತಾ ಆ್ಯಶಸ್ ಟೆಸ್ಟ್ ಪಂದ್ಯ ರೋಚಕ ಹಂತ ತಲುಪಿದೆ. 10 ರನ್ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯ 4ನೇ ದಿನ 257ಕ್ಕೆ ಆಲೌಟ್ ಆಯಿತು. ಇಂಗ್ಲೆಂಡ್ ಜಯಕ್ಕೆ 268 ರನ್ ಗುರಿ ಲಭಿಸಿದೆ. ಸೋಮವಾರ ಪಂದ್ಯದ ಅಂತಿಮ ದಿನ.
ಆಸ್ಟ್ರೇಲಿಯ ಮೊದಲ ಇನ್ನಿಂಗ್ಸ್‌ನಲ್ಲಿ 473 ರನ್ ಗಳಿಸಿತ್ತು. ಜವಾಬಿತ್ತ ಇಂಗ್ಲೆಂಡ್ 463ಕ್ಕೆ ಆಲೌಟ್ ಆಯಿತು. ಟಾಮಿ ಬ್ಯೂಮಾಂಟ್ ಅಮೋಘ ದ್ವಿಶತಕ (208) ಬಾರಿಸಿ ಇಂಗ್ಲೆಂಡ್ ಸರದಿಯನ್ನು ಆಧರಿಸಿ ನಿಂತರು.
ಆಸ್ಟ್ರೇಲಿಯದ ಆರಂಭ ಅಮೋಘವಾಗಿಯೇ ಇತ್ತು. ಒಂದೇ ವಿಕೆಟಿಗೆ 149 ರನ್ ಬಾರಿಸಿ ಮುನ್ನುಗ್ಗುತ್ತಿತ್ತು. ಬೆತ್ ಮೂನಿ (85), ಫೋಬ್ ಲಿಚ್‌ಫೀಲ್ಡ್ (46) ಮೊದಲ ವಿಕೆಟಿಗೆ 99 ರನ್ ಒಟ್ಟುಗೂಡಿಸಿದ್ದರು.
ಬ್ಯೂಮಾಂಟ್ ದ್ವಿಶತಕ
ಇಂಗ್ಲೆಂಡ್‌ನ ಆರಂಭಿಕ ಆಟಗಾರ್ತಿ ಟಾಮಿ ಬ್ಯೂಮಾಂಟ್ ಆ್ಯಶಸ್ ಟೆಸ್ಟ್ ಪಂದ್ಯದಲ್ಲಿ ದ್ವಿಶತಕ ಬಾರಿಸಿ ಅಬ್ಬರಿಸಿದ್ದಾರೆ. ಇದರೊಂದಿಗೆ 88 ವರ್ಷಗಳಷ್ಟು ಪುರಾತನ ದಾಖಲೆಯೊಂದನ್ನು ಮುರಿದಿದ್ದಾರೆ.
ಟೆಸ್ಟ್ ಪಂದ್ಯದ ತೃತೀಯ ದಿನದಾಟದಲ್ಲಿ ಟಾಮಿ ಬ್ಯೂಮಾಂಟ್ 208 ರನ್ನುಗಳ ಸೊಗಸಾದ ಬ್ಯಾಟಿಂಗ್ ಪ್ರದರ್ಶನವಿತ್ತರು. 331 ಎಸೆತಗಳ ಈ ಇನ್ನಿಂಗ್ಸ್ ನಲ್ಲಿ 27 ಬೌಂಡರಿ ಒಳಗೊಂಡಿತ್ತು. ಇದು ಇಂಗ್ಲೆಂಡ್ ಆಟಗಾರ್ತಿಯೊಬ್ಬರು ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲಿಸಿದ ಪ್ರಥಮ ದ್ವಿಶತಕ. ಇದಕ್ಕೂ ಮೊದಲು 1935ರ ನ್ಯೂಜಿಲ್ಯಾಂಡ್ ಎದುರಿನ ಕ್ರೈಸ್ಟ್‌ಚರ್ಚ್ ಪಂದ್ಯದಲ್ಲಿ ಬೆಟ್ಟಿ ಸ್ನೋಬೆಲ್ 189 ರನ್ ಹೊಡೆದದ್ದು ಇಂಗ್ಲೆಂಡ್ ದಾಖಲೆ ಆಗಿತ್ತು.