Advertisement

ವಂದೇ ಭಾರತ್‌ ಎಕ್ಸ್‌ಪ್ರೆಸ್‌:ಮುಂಬಯಿ-ಶಿರ್ಡಿ;ಮಧ್ಯ ರೈಲ್ವೇಯ ಟ್ರೈನ್‌ 18

04:14 PM Jun 28, 2019 | Vishnu Das |

ಮುಂಬಯಿ: ಮಧ್ಯ ರೈಲ್ವೇಯ ಮೊದಲ ಟ್ರೈನ್‌ 18 ರೈಲು ಮುಂಬಯಿ ಮತ್ತು ಶಿರ್ಡಿ ನಡುವೆ ಓಡಲಿದ್ದು, ಇದು ಪ್ರಯಾಣದ ಸಮಯವನ್ನು ಆರು ಗಂಟೆ ಕಡಿತಗೊಳಿಸಲಿದೆ. ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಎಂದೂ ಕರೆಯಲ್ಪಡುವ ಈ ಸೆಮಿ ಹೈಸ್ಪೀಡ್‌ ರೈಲು ಮೂರು ಗಂಟೆಗಳಲ್ಲಿ 291 ಕಿಲೋಮೀಟರ್‌ ದೂರವನ್ನು ಕ್ರಮಿಸುವ ನಿರೀಕ್ಷೆಯಿದೆ.

Advertisement

ಪ್ರಸ್ತುತ, ಉಭಯ ನಗರಗಳ ನಡುವಿನ ಪ್ರಯಾಣವು ರೈಲಿನಲ್ಲಿ ಸರಾಸರಿ ಒಂಬತ್ತು ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಶಿರ್ಡಿ ಮಹಾರಾಷ್ಟ್ರದ ಪ್ರಮುಖ ಯಾತ್ರಾ ಸ್ಥಳವಾಗಿದ್ದು, ದೇಶೀಯ ಪ್ರವಾಸಿಗರಲ್ಲಿ ಜನಪ್ರಿಯವಾಗಿದೆ.

ರೈಲ್ವೇ ಮಂಡಳಿಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅನಂತರ ಮಧ್ಯ ರೈಲ್ವೇಯಲ್ಲಿ ಟ್ರೈನ್‌ 18 ರೈಲಿನ ಕಾರ್ಯಾಚರಣೆಗಾಗಿ ಮುಂಬಯಿ-ಶಿರ್ಡಿ ಮಾರ್ಗವನ್ನು ಆಯ್ಕೆ ಮಾಡಲು ನಿರ್ಧರಿಸಲಾಯಿತು. ಅಂತಿಮ ಮಾರ್ಗದ ನಿರ್ಧಾರವನ್ನು ಶೀಘ್ರದ ಲ್ಲೆ ತೆಗೆದುಕೊಳ್ಳಲಾಗುವುದು ಎಂದು ಮಧ್ಯ ರೈಲ್ವೇಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಪುಣೆ / ದೌಂಡ್‌ ಅಥವಾ ಮನ್ಮಾದ್‌ ರೈಲ್ವೇ ನಿಲ್ದಾಣಗಳ ಮೂಲಕವಾಗಿ ರೈಲನ್ನು ಓಡಿಸಲು ಚಿಂತನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಟ್ರೈನ್‌ 18 ರೈಲಿನ ನಿರ್ವಹಣೆಯನ್ನು ಎಲ್ಲಿ ಮಾಡಬೇಕು ಎಂಬ ಬಗ್ಗೆಯೂ ವಲಯ ರೈಲ್ವೇ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದೆ.

ಟ್ರೈನ್‌ 18 ಕಾರ್ಯನಿರ್ವಹಿಸಬಹುದಾದ ಮಾರ್ಗಗಳನ್ನು ನಿರ್ಧರಿಸಲು ರೈಲ್ವೇ ಸಚಿವಾಲಯವು ಮೇ ತಿಂಗಳಲ್ಲಿ ಹೊಸದಿಲ್ಲಿಯಲ್ಲಿ ಎಲ್ಲಾ ವಲಯ ರೈಲ್ವೆಗಳ ಸಭೆ ನಡೆಸಿತ್ತು. ಪಶ್ಚಿಮ ರೈಲ್ವೇ ಮುಂಬಯಿ-ಹೊಸದಿಲ್ಲಿ ಮಾರ್ಗದಲ್ಲಿ ಈ ರೈಲನ್ನು ಪರಿಚಯಿಸಲು ಯೋಜಿಸುತ್ತಿದೆ. ಪ್ರಯಾಣಿಕರ ಸಂಘಗಳು ಈ ಕ್ರಮವನ್ನು ಸ್ವಾಗತಿಸಿವೆ.

ಪ್ರಸ್ತುತ ಟ್ರೈನ್‌ 18 ರೈಲು ಹೊಸದಿಲ್ಲಿ ಮತ್ತು ವಾರಣಾಸಿ ನಡುವೆ ಕಾರ್ಯನಿರ್ವಹಿಸುತ್ತಿದ್ದು, 752 ಕಿ.ಮೀ. ದೂರದ ಪ್ರಯಾಣವನ್ನು ಎಂಟು ಗಂಟೆಗಳಲ್ಲಿ ಪೂರ್ಣಗೊಳಿಸುತ್ತಿದೆ. ಮೇಕ್‌ ಇನ್‌ ಇಂಡಿಯಾ ಉಪಕ್ರಮದ ಅಡಿಯಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಮೊದಲ ವಂದೇ ಭಾರತ್‌ ಅಥವಾ ಟ್ರೈನ್‌ 18 ರೈಲು ಗಂಟೆಗೆ 180 ಕಿ.ಮೀ.ಗಳ ಗರಿಷ್ಠ ವೇಗವನ್ನು ಹೊಂದಿದ್ದು, ಗಂಟೆಗೆ 130 ಕಿ.ಮೀ. ವೇಗದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.

Advertisement

ಸೆಮಿ ಹೈಸ್ಪೀಡ್‌ ರೈಲು ಮುಂಬಯಿಯಿಂದ ಮುಂಜಾನೆ ಹೊರಟು ಮೂರು ಗಂಟೆಗಳಲ್ಲಿ ಶಿರ್ಡಿ ತಲುಪಲಿದೆ ಮತ್ತು ಅನಂತರ ಅದೇ ದಿನ ಶಿರ್ಡಿಯಿಂದ ಹಿಂದಿರುಗುವ ಪ್ರಯಾಣವನ್ನು ಕೈಗೊಳ್ಳಲಿದೆ ಎಂದು ಈ ತಿಂಗಳ ಆರಂಭದಲ್ಲಿ ನಡೆದ ಮಧ್ಯ ರೈಲ್ವೇಯ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಪ್ರಸ್ತಾವಿಸಲಾಗಿದೆ. ಪ್ರಸ್ತುತ ಈ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರವಲಯ ರೈಲುಗಳು ಶಿರ್ಡಿ ತಲುಪಲು ಒಂಬತ್ತು ಗಂಟೆಗಳವರೆಗೆ ಸಮಯ ತೆಗೆದುಕೊಳ್ಳುತ್ತಿವೆ ಮತ್ತು ಇವು ರಾತ್ರಿಯ ಪ್ರಯಾಣಗಳಾಗಿವೆ. ಪ್ರಸ್ತುತ ಈ ರೈಲು ಮಾರ್ಗದಲ್ಲಿ ಹೆಚ್ಚಿನ ಪ್ರಯಾಣಿಕರ ದಟ್ಟಣೆ ಇಲ್ಲ. ರೈಲು ಶಿರ್ಡಿಯನ್ನು ತಲುಪಲು ತೆಗೆದುಕೊಳ್ಳುತ್ತಿರುವ ಸಮಯವು ಇದಕ್ಕೆ ಒಂದು ಪ್ರಮುಖ ಕಾರಣವಾಗಿದೆ. ಟ್ರೈನ್‌ 18 ರೈಲಿನ ಪರಿಚಯದೊಂದಿಗೆ ಪ್ರಯಾಣದ ಅವಧಿ ಕಡಿಮೆಯಾಗಲಿದೆ ಎಂದು ಮಧ್ಯ ರೈಲ್ವೇ ಅಧಿಕಾರಿ ತಿಳಿಸಿದ್ದಾರೆ.

ರಸ್ತೆಯ ಮೂಲಕ ಶಿರ್ಡಿಗೆ ಪ್ರಯಾಣಿಸುವ ಯಾತ್ರಿಕರು ಮೂರು ಗಂಟೆಗಳಲ್ಲಿ ತಲುಪುತ್ತಾರೆ. ಶಿರ್ಡಿ ಭೇಟಿಯನ್ನು ಪೂರ್ಣಗೊಳಿಸಲು ಮತ್ತು ಅನಂತರ ಮರಳಲು ಆರು ಗಂಟೆ ಬೇಕಾಗುತ್ತದೆ. ಒಂದೊಮ್ಮೆ ಟ್ರೈನ್‌ 18 ರೈಲು ನಾಲ್ಕು ಗಂಟೆಗಳಲ್ಲಿ ತಲುಪಿದರೆ ಮತ್ತು ಅದೇ ಅವಧಿಯಲ್ಲಿ ನಗರಕ್ಕೆ ಮರಳುತ್ತದೆ ಎಂದಾದರೆ ಜನರು ರಸ್ತೆಯ ಬದಲಿಗೆ ರೈಲಿನ ಮೂಲಕ ಪ್ರಯಾಣಿಸಲು ಆಯ್ಕೆ ಮಾಡಲಿದ್ದಾರೆ.
– ಲತಾ ಅರ್ಗಡೆ, ಉಪಾಧ್ಯಕ್ಷೆ, ಮುಂಬಯಿ ರೈಲು ಪ್ರವಾಸಿ ಸಂಘ

Advertisement

Udayavani is now on Telegram. Click here to join our channel and stay updated with the latest news.

Next