ಹೊಸದಿಲ್ಲಿ : ಭಾರತದ ಮೊತ್ತ ಮೊದಲ ಸೆಮಿ ಹೈಸ್ಪೀಡ್ ‘ವಂದೇ ಭಾರತ್ ಎಕ್ಸ್‌ಪ್ರೆಸ್ ‘ ಗೆ ಪ್ರಧಾನಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿದ ಒಂದು ದಿನದ ತರುವಾಯ ಇಂದು ಶನಿವಾರ ನಸುಕಿನ ವೇಳೆ ಕೆಲವು ತಾಂತ್ರಿಕ ತೊಂದರೆಗಳು ಎದುರಾದವು ಎಂದು ವರದಿಗಳು ತಿಳಿಸಿವೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ‘ಸ್ಕಿಡ್ಡಿಂಗ್ ವೀಲ್’ ಸಮಸ್ಯೆ ಎದುರಾಗಿದ್ದು ಇಂಜಿನಿಯರ್‌ಗಳನ್ನು ಅದನ್ನು ಸರಿಪಡಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಉತ್ತರ ಪ್ರದೇಶದ ತುಂಡ್ಲಾ ಜಂಕ್ಷನ್ ನಿಂದ ಸುಮಾರು 15 ಕಿ.ಮೀ. ದೂರದಲ್ಲಿ ಈ ಘಟನೆ ನಡೆದಿದೆ.
ರೈಲು ವಾರಾಣಸಿಯಿಂದ ಮರಳಿ ಬರುತ್ತಿದ್ದು ಫೆ.17ರ ಮೊತ್ತ ಮೊದಲ ವಾಣಿಜ್ಯ ಓಡಾಟಕ್ಕೆ ಅಣಿಯಾಗುತ್ತಿತ್ತು. ರೈಲು ಸಾಗಿ ಬರುತ್ತಿದ್ದ ವೇಳೆ ದನಗಳು ಹಠಾತ್ತನೇ ಹಳಿಯ ಮೇಲೆ ಬಂದುದೇ ಸ್ಕಿಡ್ಡಿಂಗ್ ವೀಲ್ ತೊಂದರೆಗೆ ಕಾರಣವಾಯಿತು ಎಂದು ಉತ್ತರ ರೈಲ್ವೆ ಸಿಪಿಆರ್‌ಓ ದೀಪಕ್ ಕುಮಾರ್ ತಿಳಿಸಿದ್ದಾರೆ.
ಅಡಚಣೆಯನ್ನು ನಿವಾರಿಸಲಾದ ಬಳಿಕ ಸುಮಾರು 8.15ರ ಹೊತ್ತಿಗೆ ರೈಲು ದಿಲ್ಲಿಯತ್ತ ಸಾಗುವ ತನ್ನ ಪ್ರಯಾಣವನ್ನು ಮುಂದುವರಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಮೊತ್ತ ಮೊದಲ ಸೆಮಿ ಹೈಸ್ಪೀಡ್ ರೈಲು ಎಂಬ ಖ್ಯಾತಿಯ ಟ್ರೈನ್ 18 ಗೆ ಈಚೆಗೆ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರು ವಂದೇ ಭಾರತ್ ಎಂದು ಪುನರ್ ನಾಮಕರಣ ಮಾಡಿದ್ದರು. ಈ ರೈಲನ್ನು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಉತ್ಪಾದಿಸಲಾಗಿದೆ. ದಿಲ್ಲಿ – ಮುಂಬಯಿ ರಾಜಧಾನಿ ಮಾರ್ಗದಲ್ಲಿ ಇದು ಗಂಟೆಗೆ 180 ಕಿ.ಮೀ. ವೇಗದಲ್ಲಿ ಓಡಿ ದಾಖಲೆ ರೂಪಿಸಿದೆ.