ಬೆಂಗಳೂರು: ಪ್ರತಿಷ್ಠಿತ ಕರ್ನಾಟಕ ಲೇಖಕಿಯರ ಸಂಘದ ನೂತನ ಅಧ್ಯಕ್ಷರಾಗಿ ಸಂಘದ ಹಾಲಿ ಉಪಾಧ್ಯಕ್ಷೆ ವನಮಾಲ ಸಂಪನ್ನ ಕುಮಾರ್ ಆಯ್ಕೆಯಾಗಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್‌ನ ಕೇಂದ್ರ ಕಚೇರಿಯಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ ವನಮಾಲ ಸಂಪನ್ನ ಕುಮಾರ್ 20 ಮತಗಳ ಅಂತರದಿಂದ ಆಯ್ಕೆಗೊಂಡರು. ಅಧ್ಯಕ್ಷ ಸ್ಥಾನಕ್ಕೆ ಪತ್ರಕರ್ತೆ ಡಾ.ಆರ್.ಪೂರ್ಣಿಮಾ ಹಾಗೂ ವನಮಾಲಾ ಸಂಪನ್ನಕುಮಾರ್ ನಡುವೆ ತೀವ್ರ ಸ್ಪರ್ಧೆ ಇತ್ತು. ಭಾನುವಾರ ಬೆಳಗ್ಗೆ 10.35 ರಿಂದ 3.35 ರವರೆಗೆ ಚುನಾವಣೆ ನಡೆಯಿತು.
ವನಮಾಲಾ ಅವರಿಗೆ 198 ಮತಗಳು ಬಂದರೆ, ಡಾ.ಆರ್.ಪೂರ್ಣಿಮಾ 178 ಮತ ಪಡೆದರು. ಚುನಾವಣಾಧಿಕಾರಿಯಾಗಿದ್ದ ಲೇಖಕಿ ಡಾ.ಅಂಜಲಿ ರಾಮಣ್ಣ ನೂತನ ಅಧ್ಯಕ್ಷರ ಆಯ್ಕೆ ಘೋಷಿಸಿದರು. ಒಟ್ಟು 379 ಮತಗಳು ಚಲಾವಣೆಯಾಗಿದ್ದು, ಆ ಪೈಕಿ ಅಂಚೆಯ ಮೂಲಕ 188 ಮತ್ತು ಚುನಾವಣಾ ಕೇಂದ್ರಕ್ಕೆ ಬಂದು 191 ಮಂದಿ ಮತದಾರರು ಮತ ಚಲಾಯಿಸಿದರು. ಆ ಪೈಕಿ ಮೂರು ಮತಗಳು ತಿರಸ್ಕೃತಗೊಂಡವು. ಬೆಂಗಳೂರಿನಲ್ಲಿ ಚಲಾವಣೆಗೊಂಡಿದ್ದ ಮತಗಳಲ್ಲಿ ಒಂದು ಮತ್ತು ಅಂಚೆ ಮೂಲಕ ಕಳಿಸಲಾದ ಮತ ಪತ್ರಗಳಲ್ಲಿ 2 ಮತಗಳು ಅಮಾನ್ಯಗೊಂಡಿದ್ದವು. ಕರ್ನಾಟಕ ಲೇಖಕಿಯರ ಸಂಘದ ಒಟ್ಟು ಸದಸ್ಯರ ಸಂಖ್ಯೆ 913. ಇದರಲ್ಲಿ ಬೆಂಗಳೂರಿನಲ್ಲಿರುವ ಸದಸ್ಯರ ಸಂಖ್ಯೆ 529.
ಬೇರೆ ಬೇರೆ ಜಿಲ್ಲೆಗಳಲ್ಲಿ 384 ಸದಸ್ಯರಿದ್ದಾರೆ. ಲೇಖಕಿಯರ ಸಂಘಕ್ಕೆ ಸದಸ್ಯರಾಗಿ ಒಂದು ವರ್ಷ ಪೂರೈಸಿದವರಿಗೆ ಮತದಾನ ಮಾಡಲು ಹಕ್ಕು ನೀಡಲಾಗಿತ್ತು ಎಂದು ಚುನಾಣಾಧಿಕಾರಿ ಅಂಜಲಿ ರಾಮಣ್ಣ ತಿಳಿಸಿದ್ದಾರೆ.
ಅಭಿನಂದನೆ: ಆಯ್ಕೆ ಘೋಷಣೆಯಾಗುತ್ತಿದ್ದಂತೆ ನೂತನ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್ ಅವರನ್ನು ನಿರ್ಗಮಿತ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಸೇರಿ ಹಲವಾರು ಸದಸ್ಯರು ಅಭಿನಂದಿಸಿದರು. ಈ ಸಂದರ್ಭದಲ್ಲಿ ವನಮಾಲಾ ಅವರು, ಲೇಖಕಿಯರ ಸಂಘದ ಬೆಳವಣಿಗೆಗೆ ಎಲ್ಲ ರೀತಿಯ ಸಹಕಾರ ನೀಡುವಂತೆ ಕೋರಿದರು.