Advertisement

ವನಜಾಕ್ಷಿ ಅಂತರ್ಗತ ಆತ್ಮಕಥೆ ಲೋಕಾರ್ಪಣೆ

12:58 PM Sep 23, 2018 | |

ಬೆಂಗಳೂರು: “ವನಜಾಕ್ಷಿ ಅಮ್ಮನಂತಹ ತಾಯಿಯ ಕಾಣೆ; ರಾಜಲಕ್ಷ್ಮೀಯಂತಹ ಮಗಳು ನೋಡೆ’ ಇದು ನಿವೃತ್ತ ಹಿಂದಿ ಪಂಡಿತ್‌ ಬಿ. ವನಜಾಕ್ಷಿಯವರ ಆತ್ಮಕಥನ “ಅತಂರ್ಗತ’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮೂಡಿಬಂದ ಒಮ್ಮತದ ಮಾತು.

Advertisement

ತಾಯಿಯ ಅಪರಿಮಿತ ಸಾಧನೆ, ಮಗಳ ಅಮಿತ ಸೇವೆಯ ಸಾರ್ಥಕತೆಗೆ ಬೆಂಗಳೂರಿನ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಸಭಾಂಗಣ ಶನಿವಾರ ಸಾಕ್ಷಿಯಾಯಿತು. ಪುಸ್ತಕ ಬಿಡುಗಡೆಯ ವೇದಿಕೆಯಲ್ಲಿ ಮಾತನಾಡಿದ ಪ್ರತಿಯೊಬ್ಬರೂ ತಾಯಿ-ಮಗಳ ಸಂಬಂಧ ಎಷ್ಟೊಂದು ಪವಿತ್ರ, ಅವಿನಾಭಾವ ಎನ್ನುವುದನ್ನು ಮನದಟ್ಟು ಮಾಡಿಕೊಟ್ಟರು. 95ರ ಇಳಿ ವಯಸ್ಸಿನಲ್ಲಿ ವನಜಾಕ್ಷಿ ಅಮ್ಮನವರ ಜೀವನೋತ್ಸಾಹ, ಮಗಳು ಮಾಡಿದ ಸೇವೆಯ “ಅಂತರ್ಗತ’ವನ್ನು ಕೊಂಡಾಡಿದರು.

ತನ್ನ ಅಮ್ಮ ವನಜಾಕ್ಷಮ್ಮ ಅವರು ಸ್ವತಃ ತಮ್ಮ ಕೈಬರಹದಿಂದ ದಾಖಲಿಸಿದ ಅನುಭವಗಳನ್ನು ಮಗಳು ಯು.ಬಿ. ರಾಜಲಕ್ಷ್ಮೀಯವರು “ಅಂತರ್ಗತ-ನೆನಪುಗಳ ಮೆಲುಕಿನ ಕಾರಂಜಿ’ ಹೆಸರಲ್ಲಿ ಸಾಹಿತ್ಯ ಲೋಕಕ್ಕೆ ಕೊಟ್ಟಿದ್ದಾರೆ. ಇದು ಪರಿವರ್ಧಿತ ಕೃತಿಯಾಗಿದ್ದು,  ಅವರ ಅಮ್ಮನ ಪ್ರಥಮ ಪುಣ್ಯ ಸ್ಮರಣೆ ಸಂದರ್ಭದಲ್ಲಿ ಇದನ್ನು ಬಿಡುಗಡೆಗೊಳಿಸಲಾಗಿದೆ. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತರಂಗ ಹಾಗೂ ತುಷಾರದ ವ್ಯವಸ್ಥಾಪಕ ಸಂಪಾದಕಿ ಡಾ. ಸಂಧ್ಯಾ ಪೈ, “ನನಗೂ ಮತ್ತು ರಾಜಲಕ್ಷ್ಮಿಗೆ 22 ವರ್ಷದ ಬಾಂಧವ್ಯ. ಪ್ರತಿನಿತ್ಯ ಅನೇಕ ವಿಚಾರಗಳ ಬಗ್ಗೆ ನಾವಿಬ್ಬರು ಚರ್ಚಿಸುತ್ತೇವೆ. ಅದರಲ್ಲಿ ಅಮ್ಮನ ವಿಚಾರವೂ ಒಂದು. ರಾಜಲಕ್ಷ್ಮೀಯವರು ತಮ್ಮ ತಾಯಿಯನ್ನು ಅಂಗೈಯಲ್ಲಿಟ್ಟು ನೋಡಿಕೊಂಡಿದ್ದಾರೆ.

ಅವರು ಇಡೀ ಜೀವನವನ್ನು ತಾಯಿಗಾಗಿ ಮುಡಿಪಾಗಿಟ್ಟರು. ತಾಯಿ ಮೇಲಿನ ಪ್ರೀತಿ, ಅವರನ್ನು ನಡೆಸಿಕೊಂಡ ರೀತಿ ಪ್ರತಿಯೊಬ್ಬರಿಗೂ ಮಾದರಿ. ಒಂದು ರೀತಿಯಲ್ಲಿ ರಾಜಲಕ್ಷ್ಮೀ, ವನಜಾಕ್ಷಮ್ಮ  ಅವರ ಮಗಳು ಮಾತ್ರ ಆಗಿರಲಿಲ್ಲ. ಅಮ್ಮನೂ ಆಗಿದ್ದರು’ ಎಂದು ಹೇಳಿದರು. 

Advertisement

ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ರಾಜಮಾತೆ ಪ್ರಮೋದಾದೇವಿ ಒಡೆಯರ್‌, “ರಾಜಲಕ್ಷ್ಮೀ ಅವರಿಗೂ ನನಗೂ ಕೆಲವು ಸಾಮ್ಯತೆಗಳಿವೆ. ಅವರಂತೆ ನಾನೂ ಒಬ್ಬಳೇ ಮಗಳು, ಅವರಿಗೆ ಒಬ್ಬರು ಸೋದರ ಮಾವ ಇದ್ದರೆ, ನನಗೆ ನಾಲ್ಕು ಮಂದಿ ಸೋದರ ಮಾವಂದಿರರಿದ್ದರು.

ತಾಯಿ ಶಿಸ್ತು ಮತ್ತು ತಾತನ ಸಲುಗೆ ನನಗೆ ಈ ಮಟ್ಟಕ್ಕೆ ಬೆಳಸಿತು. ಮೈಸೂರು ರಾಜಮನೆತನ ಪ್ರತಿನಿಧಿಸುತ್ತಿರುವುದು ಹೆಮ್ಮೆ ಸಂಗತಿ. ವಜಜಾಕ್ಷಮ್ಮ ಅವರು ಪರಿಸ್ಥಿತಿಗೆ ಅನುಗುಣವಾಗು ತಮ್ಮ ಮನೋಸ್ಥಿತಿ ಬದಲಾಯಿಸಿಕೊಂಡರು. ಸ್ವತಃ ನಾನೂ ಸಹ ಇದನ್ನೇ ಅನುಭವಿಸಿ ಕಂಡುಕೊಂಡಿದ್ದೇನೆ’ ಎಂದು ಮೆಲುಕು ಹಾಕಿದರು. 

ಶಿಕ್ಷಣ ತಜ್ಞ ಡಾ. ಗುರುರಾಜ ಕರಜಗಿ ಮಾತನಾಡಿ, ಅಮ್ಮ ಎಂಬ ಪದ ಯಾವ ಭಾಷ ಜ್ಞಾನಿ ಅಥವಾ ವ್ಯಾಕರಣ ಶಾಸ್ತ್ರಜ್ಞನಿಂದ ಬಂದಿದ್ದಲ್ಲ. ಅದು ಮಗುವಿನ ಆದ್ರì ಭಾವನೆಯಿಂದ ಹೊರ ಬಂದಿದ್ದು. ತಾಯಿಯನ್ನು ಹೇಗೆ ನೋಡಿಕೊಳ್ಳಬೇಕು, ನಡೆಸಿಕೊಳ್ಳಬೇಕು ಮತ್ತು ಬೀಳ್ಕೊಡಬೇಕು ಅನ್ನುವುದಕ್ಕೆ ರಾಜಲಕ್ಷ್ಮೀ ಅನುಪಮ ಮಾದರಿ.

ಅಂತ್ಯ ಸಂಸ್ಕಾರ ನೆರವೇರಿಸಲು ಹೆಣ್ಣು ಮಕ್ಕಳಿಗೆ ಅವಕಾಶವಿಲ್ಲದ ಈಗಿನ ಪುರುಷ ಪ್ರಧಾನ ಸಮಾಜದಲ್ಲಿ “ನನ್ನ ಮಗಳೇ ನನ್ನ ಅಂತ್ಯಕ್ರಿಯೆ ನೆರವೇರಿಸಬೇಕು’ ಎಂದು ವನಜಾಕ್ಷಮ್ಮ ತೆಗೆದುಕೊಂಡ ಗಟ್ಟಿ ನಿರ್ಧಾರ, ಎಲ್ಲವನ್ನೂ ಮೆಟ್ಟಿ ನಿಂತ ಅದನ್ನು ಕಾರ್ಯಾಗತಗೊಳಿಸಿದ ಮಗಳು ರಾಜಲಕ್ಷ್ಮೀಯವರ ದಿಟ್ಟತನ ಸಮಾಜಕ್ಕೆ ಒಂದು ನಿದರ್ಶನ ಎಂದರು.

ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಇದ್ದಷ್ಟು ದಿನ ಮಾಡಿದ ಒಳ್ಳೆಯ ಕೆಲಸಗಳು ಜೀವನದ ಕೊನೆಗಾಲದಲ್ಲಿ ಬೆಟ್ಟದಷ್ಟು ಆಗಿ ವಾಪಸ್‌ ಬರುತ್ತವೆ ಅನ್ನುವುದಕ್ಕೆ ವನಜಾಕ್ಷಮ್ಮ ಅವರು ತಮ್ಮ ಜೀವನದ ಕೊನೆ ಆವಧಿಯಲ್ಲಿ ಹಿಂದಿನ ಜೀವನಾನುಭವಗಳನ್ನು ಕಟ್ಟಿಕೊಟ್ಟಿದ್ದಕ್ಕೆ ಸಾಕ್ಷಿ. ಹೇಗೆ ಬದುಕಬೇಕು ಅನ್ನುವುದಕ್ಕೆ ಅವರು ಮಾರ್ಗದರ್ಶಿ. ನಮ್ಮ ಹಿರಿಯರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದಕ್ಕೆ ಈ ಅಂತರ್ಗತ ಪುಸ್ತಕ ಒಂದು ಶುದ್ಧ ಕೈಪಿಡಿ ಎಂದರು. 

ಅಂತರ್ಗತ ಕೃತಿ ಹಾಗೂ ವನಜಾಕ್ಷಮ್ಮ ಅವರ ಕುರಿತು ಮಾತನಾಡಿದ ಮನೋಚಿಕಿತ್ಸಕ ಡಾ. ಪ್ರಸನ್ನ ಹೆಗ್ಡೆ, 95 ವರ್ಷದಲ್ಲಿ ತಮ್ಮ ಕೈ ಬರಹದಲ್ಲಿ ಹಿಂದಿನ ಅನುಭವಗಳನ್ನು ಮೆಲಕು ಹಾಕಿ, ಅವುಗಳನ್ನು ಹೆಕ್ಕಿ ಕ್ರಮಬದ್ಧ ರೀತಿಯಲ್ಲಿ ದಾಖಲಿಸಿರುವುದು ಒಂದು ವಿಶ್ವದಾಖಲೆಯೇ ಸರಿ. ವನಜಾಕ್ಷಮ್ಮ ಇಡೀ ಜೀವನದಲ್ಲಿ ಪರಿಸ್ಥಿತಿಗೆ ಅನುಗುಣವಾಗಿ ತಮ್ಮ ಮನೋಸ್ಥಿತಿಯನ್ನು ಬದಲಾಯಿಸಿಕೊಂಡು ಜೀವನ ನಡೆಸಿದರು ಮತ್ತು ಬದುಕಿ ಬಾಳಿದರು. ಅವರಲ್ಲಿ ಅಂತರಂಗದ ಶುದ್ಧತೆ, ಸ್ವನಂಬಿಕೆ ಮತ್ತು ಆತ್ಮವಿಶ್ವಾಸವಿತ್ತು ಎಂದರು. 

ವನಜಾಕ್ಷಮ್ಮ ಅವರ ಸಹೋದರ ಬಿ.ಆರ್‌. ತಂತ್ರಿ ಅಕ್ಕನನ್ನು ನೆನಪಿಸಿಕೊಳ್ಳುತ್ತ, ನನ್ನ ಎಲ್ಲ ಏಳಿಗೆಗೆ ಅಕ್ಕನೇ ಕಾರಣ. ಅವರು ನನಗೆ ಮೊದಲ ಗುರು ಆಗಿದ್ದರು. ಹಿಂದಿ ಭಾಷೆ, ಸಂಗೀತ ಹಾಗೂ ಭಜನೆ ಕಲಿಸಿಕೊಟ್ಟ ಟೀಚರ್‌ ಆಗಿದ್ದರು. ಅವರ ಬಗ್ಗೆ ಎಷ್ಟು ಮಾತನಾಡಿದರೂ ಸಾಲದು ಎಂದು ಭಾವಪರವಶರಾದರು. 

ಅಮ್ಮ ಅಮೃತ ಸಮಾನ: “ಅಮ್ಮ ಅಂದರೆ ಒಂದು ಭಾವನಾತ್ಮಕ ಶಕ್ತಿ, ಇಡೀ ಬದುಕಿಗೆ ಅವಳು ಅಮೃತ ಸಮಾನ’ ಹೀಗೆಂದು ತಾಯಿ ಬಿ. ವನಜಾಕ್ಷಿಯರನ್ನು ನೆನಪಿಸಿಕೊಂಡಿದ್ದು ಅವರ ಮಗಳು ಹಾಗೂ ತರಂಗ ವಾರಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕಿ ಡಾ. ಯು.ಬಿ. ರಾಜಲಕ್ಷ್ಮೀ.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, “ನನಗೂ, ಅಮ್ಮನಿಗೂ 39 ವರ್ಷದ ಅಂತರ. ಆಕೆ ನನಗೆ ಶಾಲೆಯಲ್ಲೂ ಮೊದಲ ಗುರು, ಮನೆಯಲ್ಲೂ ಮೊದಲ ಗುರು ಆಗಿದ್ದರು. ಅವರೊಬ್ಬ ಹಿತೈಷಿ, ಸ್ನೇಹಿತೆ, ಮಾರ್ಗದರ್ಶಕಿ, ನನ್ನ ಬರಹಗಳ ಮೊದಲ ಓದುಗಾರ್ತಿ, ಕರಡನ್ನು ಸರಿಪಡಿಸುವ ತಿದ್ದುಗಾರ್ತಿಯಾಗಿದ್ದರು.

ಬಂದಿದ್ದನ್ನು ದಿಟ್ಟವಾಗಿ ಎದುರಿಸಿ ನೋವು-ನಲಿವುಗಳನ್ನು ಸಮಾನವಾಗಿ ಸ್ವೀಕರಿಸಿದರು. ಹಿಂದಿನ ವಿಚಾರಗಳನ್ನು ಜೊತೆಯಲ್ಲಿಟ್ಟುಕೊಂಡು ಆಧುನಿಕತೆಯನ್ನು ಸ್ವೀಕರಿಸುತ್ತಿದ್ದರು. ಅವರ ಕೃತಿಯನ್ನು ಸಾರಸ್ವತ ಲೋಕಕ್ಕೆ ಕೊಡುತ್ತಿರುವುದು ನನಗೆ ಸಂತೋಷ, ಸಮಧಾನ ಹಾಗೂ ತೃಪ್ತಿ ತಂದಿದೆ’ ಎಂದರು. 

Advertisement

Udayavani is now on Telegram. Click here to join our channel and stay updated with the latest news.

Next