ಕೋಟ: ಇಲ್ಲಿನ ಅಚ್ಲಾಡಿ ಶ್ರೀ ಸಿದ್ಧಿವಿನಾಯಕ ದೇಗುಲದ ಪುನರ್ ನವೀಕೃತ ತೀರ್ಥ ಪುಷ್ಕರಣಿ ಲೋಕಾರ್ಪಣೆ ಕಾರ್ಯಕ್ರಮ ಅ. 17ರಂದು ಜರಗಲಿದೆ.
ಈ ಪ್ರಯುಕ್ತ ಅ.16ರಂದು ರಾತ್ರಿ ರಾಕ್ಷೋಘ್ನ ಹೋಮ, ವಿವಿಧ ಪೂಜೆ, ಅ. 17ರಂದು ಬೆಳಗ್ಗೆ 9ಕ್ಕೆ ಶ್ರೀ ಸಿದ್ಧಿವಿನಾಯಕನಿಗೆ ಕಲಶಾಭಿಷೇಕ, ವಿವಿಧ ಹೋಮಾದಿಗಳು ನಡೆಯಲಿದ್ದು, ಬಾರ್ಕೂರು ವೇ| ಮೂ| ಹೃಷೀಕೇಶ ಬಾಯರಿ ಧಾರ್ಮಿಕ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ.
ಪವಿತ್ರ ಪುಷ್ಕರಣಿ
ಕ್ಷೇತ್ರದ ತೀರ್ಥ ಪುಷ್ಕರಣಿಗೆ ವಿಶೇಷವಾದ ಧಾರ್ಮಿಕ ಹಿನ್ನೆಲೆಯಿದೆ. ಇಲ್ಲಿನ ತೀರ್ಥವು ಅತ್ಯಂತ ಪವಿತ್ರವಾಗಿದ್ದು, ತೀರ್ಥ ಪ್ರೋಕ್ಷಣೆಯೊಂದಿಗೆ, ಸಿದ್ಧಿವಿನಾಯಕನ ದರ್ಶನಗೈದು ಇಷ್ಟಾರ್ಥಗಳನ್ನು ನಿವೇದಿಸಿಕೊಂಡಲ್ಲಿ ಕೈಗೂಡುತ್ತದೆ ಹಾಗೂ ಆರೋಗ್ಯ ಇನ್ನಿತರ ಸಮಸ್ಯೆಗಳನ್ನು ದೂರಮಾಡುವ ದೈವೀ ಗುಣ ಇಲ್ಲಿದೆ ಎನ್ನುವುದು ಹಿಂದೆ ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡು ಬಂದಿತ್ತು. ಅದರಂತೆ ಶಿಥಿಲಾವಸ್ಥೆ ತಲುಪಿದ ಈ ಪುಷ್ಕರಣಿಯನ್ನು ಶ್ರೀದೇವರ ಪ್ರೇರಣೆಯಂತೆ ಭಕ್ತರ ಸಹಕಾರದಲ್ಲಿ 45 ಲಕ್ಷ ರೂ.ಗೂ ಹೆಚ್ಚು ವೆಚ್ಚದಲ್ಲಿ ಸಮಗ್ರ ಜೀರ್ಣೋದ್ಧಾರಗೊಳಿಸಲಾಗಿದೆ.
ಅ. 17ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಬಸ್ರೂರು ಮಹಾಲಿಂಗೇಶ್ವರ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಅಪ್ಪಣ್ಣ ಹೆಗ್ಡೆ ಹಾಗೂ ಕೋಟ ಅಮೃತೇಶ್ವರೀ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್ ಪುಷ್ಕರಣಿ ಲೋಕಾರ್ಪಣೆ ನೆರವೇರಿಸಲಿದ್ದಾರೆ. ಪುಷ್ಕರಣಿ ಪುನರ್ ನಿರ್ಮಾಣ ಸಮಿತಿ ಅಧ್ಯಕ್ಷ ಅಚ್ಲಾಡಿ ಅಡಾರ್‌ಮನೆ ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.
ಆಗಮಶಾಸ್ತ್ರ ಪ್ರವೀಣ ಬಾರ್ಕೂರು ವೇ| ಮೂ| ಹೃಷೀಕೇಶ ಬಾಯರಿಯವರು ಆಶೀರ್ವಚನ ನೀಡಲಿದ್ದು, ಅರ್ಚಕ ಮಂಜುನಾಥ ಹೇರ್ಳೆ, ಹಿರಿಯ ಧಾರ್ಮಿಕ ಚಿಂತಕ ಸತ್ಯನಾರಾಯಣ ಅಡಿಗ, ಸೂರಿಬೆಟ್ಟು, ಮೊದಲಾದವರು ಉಪಸ್ಥಿತರಿರುವರು. ಈ ಸಂದರ್ಭ ಈ ಹಿಂದೆ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಮಹನೀಯರನ್ನು, ದಾನಿಗಳನ್ನು, ಪುಷ್ಕರಣಿಯ ಶಿಲ್ಪಿಗಳು, ಎಂಜಿನಿಯರ್, ವಾಸ್ತುತಜ್ಞರನ್ನು, ಕ್ಷೇತ್ರದ ಅರ್ಚಕರನ್ನು ಗೌರವಿಸಲಾಗುವುದು. ಅಪರಾಹ್ನ 12.30ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ಕ್ಷೇತ್ರದ ಮುಖ್ಯಸ್ಥರು ತಿಳಿಸಿದ್ದಾರೆ.