Advertisement
ನಮ್ಮ ದೇಶದಲ್ಲಿ ಸಾರ್ವಜನಿಕರಿಗೂ ಅಂತರ್ಜಾಲ ಸಂಪರ್ಕ ದೊರಕುವಂತಾದದ್ದು 1995ರಲ್ಲಿ. ಮುಂದಿನ ಕೆಲವು ವರ್ಷಗಳಲ್ಲಿ ಆ ಸೌಲಭ್ಯವನ್ನು ಬಳಸಿಕೊಳ್ಳುವ ಅಭ್ಯಾಸವೂ ನಿಧಾನಕ್ಕೆ ಬೆಳೆಯಿತು. ಅಂದಿನ ಅಂತರ್ಜಾಲ ಸಂಪರ್ಕಗಳೂ ನಿಧಾನವಾಗಿಯೇ ಇದ್ದವೆನ್ನಿ. ಸೈಬರ್ ಕೆಫೆಗಳಲ್ಲಿ ಗಂಟೆಗಿಷ್ಟರಂತೆ ದುಡ್ಡು ಕೊಟ್ಟು ಬ್ರೌಸಿಂಗ್ ಮಾಡಬೇಕಿದ್ದ ಕಾಲ ಅದು. ಒಮ್ಮೆ ಇ-ಮೇಲ್ ಚೆಕ್ ಮಾಡಿ ಒಂದೆರಡು ತಾಣಗಳೊಳಗೆ ಇಣುಕುವಷ್ಟರಲ್ಲಿ ಅದು ಹೇಗೋ ಅರ್ಧ ಗಂಟೆ ಆಗಿಯೇ ಹೋಗಿರುತ್ತಿತ್ತು!
Related Articles
ಅದು ಹೇಗೆ? ಮೊದಲಿಗೆ ಅಂತರ್ಜಾಲದ ಸಂಪರ್ಕಕ್ಕೆ ಬಂದವರು ನಗರವಾಸಿಗಳು ಎಂದೇ ಇಟ್ಟುಕೊಂಡರೆ, ಈಚೆಗೆ ಅಂತರ್ಜಾಲದ ವ್ಯಾಪ್ತಿಯೊಳಕ್ಕೆ ಬರುತ್ತಿರುವವರಲ್ಲಿ ಬಹುತೇಕರು ಗ್ರಾಮೀಣ ಪ್ರದೇಶದವರು. ನಮಗೆ ದೊರಕುವ ಮಾಹಿತಿ ನಮ್ಮ ಭಾಷೆಯಲ್ಲೇ ಇರಬೇಕು ಎನ್ನುವವರು ಅವರು. ಇದರ ಜತೆಗೆ, ನಮ್ಮ ಭಾಷೆಯ ಮಾಹಿತಿ ನಮಗೂ ಬೇಕೆಂಬ ಮನೋಭಾವ ನಗರ ಪ್ರದೇಶಗಳಲ್ಲೂ ಬೆಳೆಯುತ್ತಿದೆ.
Advertisement
ಇವೆಲ್ಲದರ ಒಟ್ಟು ಪರಿಣಾಮವಾಗಿ, ಅಂತರ್ಜಾಲದಲ್ಲಿ ಭಾರತೀಯ ಭಾಷೆಗಳಲ್ಲಿರುವ ಮಾಹಿತಿಗೆ ಬೇಡಿಕೆ ಹೆಚ್ಚಾಗಿದೆ. ಇಂಟರ್ನೆಟ್ ಆಂಡ್ ಮೊಬೈಲ್ ಅಸೋಸಿಯೇಶನ್ ಆಫ್ ಇಂಡಿಯಾ ಪ್ರಕಟಿಸಿರುವ ವರದಿಯ ಪ್ರಕಾರ, ನಮ್ಮ ದೇಶದ ಅಂತರ್ಜಾಲ ಬಳಕೆದಾರರ ಪೈಕಿ ಅರ್ಧಕ್ಕೂ ಹೆಚ್ಚು ಜನ ಭಾರತೀಯ ಭಾಷೆಗಳಲ್ಲಿನ ಮಾಹಿತಿಯನ್ನೇ ಹೆಚ್ಚು ಇಷ್ಟಪಡುತ್ತಾರಂತೆ. ಇದು ಖುಷಿಪಡುವ ವಿಷಯವೇನೋ ಸರಿ, ಆದರೆ ಈ ಸಂಭ್ರಮವನ್ನು ಕನ್ನಡಕ್ಕೆ ನೇರವಾಗಿ ಅನ್ವಯಿಸಿಕೊಳ್ಳುವುದು ಸ್ವಲ್ಪ ಕಷ್ಟ. ಏಕೆಂದರೆ, ಕನ್ನಡದ ಮಾಹಿತಿಯನ್ನು ಆರಿಸಿಕೊಳ್ಳುತ್ತಿರುವವರ ಪ್ರಮಾಣ ಇಂದಿಗೂ ಬಹಳ ಕಡಿಮೆ ಪ್ರಮಾಣದಲ್ಲಿದೆ!
ಪಸರಿಸಲಿ ಕನ್ನಡದ ಕಂಪುಕನ್ನಡದ ಮಾಹಿತಿಯನ್ನು ಹೆಚ್ಚು ಜನರು ಬಳಸಬೇಕು ಎಂದರೆ, ಮೊದಲಿಗೆ ಕನ್ನಡದ ಮಾಹಿತಿ ಹೆಚ್ಚು ಪ್ರಮಾಣದಲ್ಲಿ ದೊರಕುವಂತಾಗಬೇಕು. ಹಿಂದಿನ ವರ್ಷಗಳ ಹೋಲಿಕೆಯಲ್ಲಿ ಪರಿಸ್ಥಿತಿ ಕೊಂಚ ಉತ್ತಮವಾಗಿದೆ ಯಾದರೂ, ಕನ್ನಡದ ಮಾಹಿತಿಯ ವಿಷಯ ವೈವಿಧ್ಯ ಇಂದಿಗೂ ಬಹಳ ಕಡಿಮೆಯೇ ಇದೆ. ಹಲವು ಸುದ್ದಿತಾಣಗಳು, ಒಂದಷ್ಟು ಸಾಹಿತ್ಯ-ಮನೋ ರಂಜನೆಯ ತಾಣಗಳು, ಕೆಲವು ನಿಘಂಟುಗಳು – ಹೀಗೆ ಪಟ್ಟಿಮಾಡುತ್ತ ಹೋದರೆ ಆ ಪಟ್ಟಿ ಬಹಳ ದೊಡ್ಡದೇನೂ ಆಗುವುದಿಲ್ಲ. ಪಠ್ಯವಷ್ಟೇ ಅಲ್ಲ, ಇ ಪುಸ್ತಕ – ಆಡಿಯೋ ಪುಸ್ತಕ, ವೀಡಿಯೋ, ಪಾಡ್‌ಕಾಸ್ಟ್ ಮುಂತಾದವುಗಳಲ್ಲೂ ನಮ್ಮೆದುರು ಆಯ್ಕೆಗಳು ಕಡಿಮೆಯೇ. ಕರ್ನಾಟಕದ ಸದ್ಯದ ಜನಸಂಖ್ಯೆ, ಅಧಿಕೃತ ಅಂದಾಜಿನ ಪ್ರಕಾರವೇ ಆರೂವರೆ ಕೋಟಿ ದಾಟಿದೆ. ಇಷ್ಟೆಲ್ಲ ದೊಡ್ಡ ಜನಸಂಖ್ಯೆಗೆ ಹೋಲಿಸಿದಾಗ ನಮ್ಮ ಭಾಷೆಗಳಲ್ಲಿ (ತುಳು, ಕೊಡವ ಮುಂತಾದ ಸೋದರ ಭಾಷೆಗಳೂ ಸೇರಿ) ಲಭ್ಯವಿರುವ ಮಾಹಿತಿಯ ಪ್ರಮಾಣವೂ ಹೆಚ್ಚಾಗಬೇಡವೇ? ಇದನ್ನು ಸಾಧ್ಯವಾಗಿಸುವುದು ನಮ್ಮೆಲ್ಲರದೂ ಜವಾಬ್ದಾರಿ. ಡಿಜಿಟಲ್ ಜಗತ್ತಿನಲ್ಲಿ ಕನ್ನಡ ಬಳಸಲು ಬೇಕಾದ ಬಹುತೇಕ ತಂತ್ರಾಂಶ ಸಾಧನಗಳು ಈಗಾಗಲೇ ಲಭ್ಯವಿವೆ. ಅವುಗಳ ಬಗ್ಗೆ ತಿಳಿದುಕೊಂಡು ಬಳಸುವುದು, ಬಳಸುವಂತೆ ಇತರರನ್ನೂ ಪ್ರೇರೇಪಿಸುವುದು ನಾವು ಮಾಡಬಹುದಾದ ಮೊದಲ ಕೆಲಸ. ಬಳಕೆ ಹೆಚ್ಚಿದಂತೆ ಹೊಸ ಸಾಧನಗಳಿಗಾಗಿ ಬೇಡಿಕೆಯಿಡುವುದು, ಇರುವ ಸಾಧನಗಳನ್ನು ಇನ್ನಷ್ಟು ಉತ್ತಮಪಡಿಸಿಕೊಳ್ಳುವುದೂ ಸಾಧ್ಯವಾಗುತ್ತದೆ. ಕನ್ನಡದ ಮಾಹಿತಿಯ ಪ್ರಮಾಣ ಹೆಚ್ಚಾದರೆ ಹೊಸ ತಲೆಮಾರಿನ ಎಐ ಸಾಧನಗಳಿಗೂ ಚೆನ್ನಾಗಿಯೇ ಕನ್ನಡ ಕಲಿಸಬಹುದು! ಸರಕಾರದ ಸಹಾಯವೂ ಬೇಕು
ತಂತ್ರಜ್ಞಾನದಲ್ಲಿ ಕನ್ನಡವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರಕಾರ ಆಗಿಂದಾಗ್ಗೆ ಕೆಲವು ಚಟುವಟಿಕೆಗಳನ್ನು ಹಮ್ಮಿಕೊಂಡಿದೆಯಾದರೂ ಆ ಪೈಕಿ ಹೆಚ್ಚುಕಾಲ ಮುಂದುವರಿದವು ಕಡಿಮೆಯೇ. ಸರಕಾರವೇ ತಂತ್ರಾಂಶ ಅಭಿವೃದ್ಧಿ ಮಾಡಲು ಹೊರಡುವುದಕ್ಕಿಂತ ಆ ಕ್ಷೇತ್ರದಲ್ಲಿ ತೊಡಗಿಕೊಂಡಿರುವವರಿಗೆ ಪ್ರೋತ್ಸಾಹ ಕೊಡುವುದು ಹೆಚ್ಚು ಪರಿಣಾಮಕಾರಿಯಾಗಬಲ್ಲದು. ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಕೆಲಸ ಮಾಡುವಂತೆ ವಿದ್ಯಾರ್ಥಿಗಳನ್ನು, ನವೋದ್ಯಮಗಳನ್ನು ಹುರಿದುಂಬಿಸುವುದೂ ಸರಕಾರ ಮಾಡಬಹುದಾದ ಇನ್ನೊಂದು ಕೆಲಸ. ಕರ್ನಾಟಕದ ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ಕೈಗೊಳ್ಳುವ ಪ್ರಾಜೆಕ್ಟ್ಗಳಲ್ಲಿ ಕನ್ನಡಕ್ಕೆ ಸಂಬಂಧಿಸಿದ ಕೆಲಸವೂ ನಡೆಯುವಂತೆ ಮಾಡಿದರೆ ಎಷ್ಟೆಲ್ಲ ಹೊಸತನ್ನು ಸಾಧ್ಯವಾಗಿಸಬಹುದು, ಅಲ್ಲವೇ? ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆದಿರುವ ಕನ್ನಡದ ಕೆಲಸಗಳನ್ನು ಸಾರ್ವಜನಿಕರಿಗೆ ಪರಿಚಯಿಸುವ ಪ್ರದರ್ಶನವೊಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇ ಜ್ಞಾನ ಟ್ರಸ್ಟ್ ಸಹಯೋಗದಲ್ಲಿ ಕೆಲವು ವರ್ಷಗಳ ಹಿಂದೆ ನಡೆದಿತ್ತು. ಸರಕಾರ, ಸಂಘ ಸಂಸ್ಥೆಗಳು ಹಾಗೂ ವೈಯಕ್ತಿಕವಾಗಿ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರನ್ನು ಒಂದೆಡೆ ಸೇರಿಸಿ, ಅವರೆಲ್ಲರೂ ಸಾರ್ವಜನಿಕರಿಗೆ ತಮ್ಮ ಕೆಲಸದ ಪ್ರಾತ್ಯಕ್ಷಿಕೆ ನೀಡುವ ವ್ಯವಸ್ಥೆ ಈ ಪ್ರದರ್ಶನದಲ್ಲಿತ್ತು. ಅಂತಹ ಕಾರ್ಯಕ್ರಮಗಳು ಹೆಚ್ಚಿನ ಸಂಖ್ಯೆಯಲ್ಲಿ, ರಾಜ್ಯದ ವಿವಿಧ ಸ್ಥಳಗಳಲ್ಲಿ ನಡೆದರೆ ಸಾರ್ವಜನಿಕರಿಗೂ ಅನುಕೂಲವಾಗುತ್ತದೆ, ತಂತ್ರಾಂಶ ಅಭಿವೃದ್ಧಿಯಲ್ಲಿ ತೊಡಗಿರುವವರಿಗೂ ಪ್ರೋತ್ಸಾಹ ಸಿಕ್ಕಂತಾಗುತ್ತದೆ. ಕನ್ನಡದಲ್ಲೇ ಮಾಹಿತಿ ಸಿಗುವಂತಾಗಲಿ…
ಎಪ್ಪತ್ತರ ದಶಕದಲ್ಲಿ ಮಕ್ಕಳಿಗಾಗಿ ಪ್ರಕಟವಾಗಿದ್ದ “ಜ್ಞಾನಗಂಗೋತ್ರಿ’ ವಿಶ್ವಕೋಶ ಕನ್ನಡದ ಪುಸ್ತಕ ಲೋಕದಲ್ಲಿ ಇಂದಿಗೂ ಮುರಿಯಲಾಗದ ಅದ್ಭುತ ದಾಖಲೆ. ಮಾಹಿತಿ ತಂತ್ರಜ್ಞಾನದ ಸೌಲಭ್ಯಗಳನ್ನು ಬಳಸಿಕೊಂಡು ಅಂತಹುದೇ ಹೊಸ ವಿಶ್ವಕೋಶಗಳನ್ನು ರೂಪಿಸುವುದು, ಅದರಲ್ಲಿರುವ ಮಾಹಿತಿಯನ್ನು ಆಗಿಂದಾಗ್ಗೆ ನವೀಕರಿಸುವುದು ಸಾಧ್ಯವಿದೆ. ಅಂತಹುದೊಂದು ಕೆಲಸ ಮಾಡಲು ಹೊರಟಿದ್ದ “ಕಣಜ’ ಜ್ಞಾನಕೋಶದಂತಹ ಯೋಜನೆಗಳು ಪುನಶ್ಚೇತನಗೊಳ್ಳಬೇಕಿದೆ, ನಿರಂತರವಾಗಿ ಕೆಲಸವನ್ನೂ ಮಾಡಬೇಕಿದೆ. ಒಂದೊಂದು ಇಲಾಖೆ ಒಂದೊಂದು ಕೆಲಸ ಮಾಡುವ ಬದಲು, ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕನ್ನಡದ ಕೆಲಸಗಳನ್ನು ಒಂದೇ ಸಂಸ್ಥೆ ಮುನ್ನಡೆಸುವಂತಾದರೆ ಅದೂ ಒಳ್ಳೆಯದೇ. ಕನ್ನಡದಲ್ಲಿ ಮಾಹಿತಿ ತಂತ್ರಜ್ಞಾನ ಕುರಿತ ಒಂದಷ್ಟು ಮಾಹಿತಿ ಸಿಗುತ್ತಿದೆಯಾದರೂ ಅದರ ಪ್ರಮಾಣ ಸಾಕಷ್ಟಿಲ್ಲ. ಇರುವ ಮಾಹಿತಿಯಲ್ಲೂ ಪ್ರಾರಂಭಿಕ ಬಳಕೆದಾರರನ್ನು ಉದ್ದೇಶಿಸಿರುವಂಥದ್ದೇ ಹೆಚ್ಚು. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳು ಪದವಿಪೂರ್ವ ಅಥವಾ ಪದವಿಯ ಹಂತದಲ್ಲಿ ಮಾಹಿತಿ ತಂತ್ರಜ್ಞಾನ ಕಲಿಯಬೇಕೆಂದರೆ ಅವರಿಗೆ ಬೇಕಾದ ಮಾಹಿತಿಯೂ ಕನ್ನಡದಲ್ಲೇ ಸಿಗುವಂತಾಗಬೇಕು. ಅವರು ತಮ್ಮ ಭಾಷೆಯಲ್ಲೇ ಪ್ರಾಥಮಿಕ ವಿಷಯಗಳನ್ನು ಕಲಿಯುವುದು, ಆನಂತರ ಇಂಗ್ಲೀಷಿನ ಜಗತ್ತಿಗೆ ತೆರೆದುಕೊಳ್ಳುವುದು, ಆಮೇಲೆ ಕನ್ನಡದ ಕೆಲಸವನ್ನೂ ಮಾಡುವುದು ಸಾಧ್ಯವಾಗಬೇಕು. ಕನ್ನಡ ಮಾಧ್ಯಮದಲ್ಲೇ ಎಂಜಿನಿಯರಿಂಗ್ ಪದವಿ ಕೊಡುತ್ತೇವೆ ಎನ್ನುವಂತಹ ಮಹತ್ವಾಕಾಂಕ್ಷಿ ಯೋಜನೆಗಳಿಗೂ ಮುನ್ನ ಆಗಬೇಕಿರುವುದು ಇದು. ಆಗಬೇಕಾದ್ದೇನು?
1. ಅಂತರ್ಜಾಲದಲ್ಲಿ ಲಭ್ಯವಿರುವ ಕನ್ನಡದ ತಂತ್ರಾಂಶ ಸಾಧನಗಳ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಹೆಚ್ಚುಹೆಚ್ಚಾಗಿ ಬಳಸಿಕೊಳ್ಳುವಂತಾಗಬೇಕು 2. ಬಳಕೆದಾರರಿಂದ ಪದವಿ ವಿದ್ಯಾರ್ಥಿಗಳವರೆಗೆ ಎಲ್ಲರಿಗೂ ತಂತ್ರಜ್ಞಾನದ ವಿಷಯಗಳನ್ನು ಕನ್ನಡದಲ್ಲೇ ಪರಿಚಯಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುವಂತಾಗಬೇಕು 3. ತಂತ್ರಜ್ಞಾನದಲ್ಲಿ ಕನ್ನಡದ ಬೆಳವಣಿಗೆಗಾಗಿ ಅವಿರತವಾಗಿ ಶ್ರಮಿಸುತ್ತಿರುವವರಿಗೆ ಹೆಚ್ಚಿನ ಪ್ರೋತ್ಸಾಹ ಸಿಗಬೇಕು. ಇದಕ್ಕೆ ವಿದ್ಯಾರ್ಥಿಗಳೂ ಅವರೊಡನೆ ಕೈಜೋಡಿಸುವಂತಾಗಬೇಕು. 4. ತಂತ್ರಜ್ಞಾನ ಕ್ಷೇತ್ರದಲ್ಲಿ ಕನ್ನಡದ ಬೆಳವಣಿಗೆ ಯನ್ನು ಎಲ್ಲರಿಗೂ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳು, ಪ್ರದರ್ಶನಗಳು ನಡೆಯಬೇಕು. ಇದು ಬೆಳವಣಿಗೆಗೆ ಸಹಕಾರಿ 5. ತಂತ್ರಜ್ಞಾನದಲ್ಲಿ ಕನ್ನಡವನ್ನು ಪ್ರೋತ್ಸಾಹಿಸುವ ಸರಕಾರಿ ಕಾರ್ಯಕ್ರಮಗಳು ನಿರಂತರವಾಗಿ ಮುಂದುವರಿಯಬೇಕು. ನಿರ್ದಿಷ್ಟ ಸಂಸ್ಥೆಯೊಂದು ಅವನ್ನೆಲ್ಲ ಮುನ್ನಡೆಸಬೇಕು. ಟಿ. ಜಿ. ಶ್ರೀನಿಧಿ, ವಿಜ್ಞಾನ ಲೇಖಕರು