ಬಾಗಲಕೋಟೆ: ಕೊಲೆ ಸುಲಿಗೆ ಎಸಗಿ ಮರುಗದ ವ್ಯಕ್ತಿ, ಕ್ರೌಂಚ ಪಕ್ಷಿ ಕೊಲೆಗೈದು ಅದರ ಶೋಕದಿಂದ ಮರುಗಿ ಪಶ್ಚಾತಾಪಗೊಂಡು ಶೋಕದಿಂದ ಶ್ಲೋಕ ರಚಿಸಿ ರಾಮಾಯಣ ಗ್ರಂಥ ರಚಿಸಿದ ಮಹಾನ್ ವ್ಯಕ್ತಿ ಆದಿ ಕವಿ ಮಹರ್ಷಿ ವಾಲ್ಮೀಕಿ ಎಂದು ಜಿಲ್ಲಾಧಿಕಾರಿ ಕೆ.ಜಿ. ಶಾಂತಾರಾಂ ಹೇಳಿದರು. ಜಿಪಂ ಸಭಾಭವನದಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ವಾಲ್ಮೀಕಿ ರಚಿಸಿದ ರಾಮಾಯಣದಲ್ಲಿ ಪ್ರತಿಯೊಂದು ಸಂದರ್ಭವು ಮನದಾಳದಲ್ಲಿ ನೆಲೆಯೂರುವಂತಹ ಶಬ್ದಗಳನ್ನು ಒಳಗೊಂಡಿದೆ. ಪ್ರತಿಯೊಂದು ಘಟನೆಗಳು ಶೋಕದಿಂದ ಪ್ರಾರಂಭಗೊಂಡು ಶ್ಲೋಕವಾಗಿ ಹೊರಹೊಮ್ಮಿ ಮುಕ್ತಾಯಗೊಂಡಿವೆ ಎಂದರು.
ವಾಲ್ಮೀಕಿ ಸಮಾಜದ ಅಧ್ಯಕ್ಷ ರಾಜು ನಾಯ್ಕರ ಮಾತನಾಡಿ, ಕಳೆದ ಬಾರಿ ಬೆಂಗಳೂರಿನಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಸ್ಥಾಪನೆ ಸಮಾರಂಭ ಇದ್ದುದರಿಂದ ವಿಜೃಂಭಣೆಯಿಂದ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಗಲಿಲ್ಲ. ಈ ಬಾರಿಯು ಕೂಡಾ ಅಂತಹದೇ ಸಮಯ ಒದಗಿ ಬಂದಿರುವುದರಿಂದ ವಾಲ್ಮೀಕಿ ಜಯಂತಿ ವಿಜೃಂಭಣೆಯಿಂದ ಆಚರಿಸಲಾಗುತ್ತಿಲ್ಲ. ಬದಲಾಗಿ ಬರುವ ನ. 11ರಂದು ವಾಲ್ಮೀಕಿ ಜಯಂತಿ ವಿಜೃಂಭಣೆಯಿಂದ ಸರ್ಕಾರದಿಂದಲೇ ಆಚರಿಸಬೇಕೆಂಬ ಮನವಿ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಪಂ ಸಿಇಒ ಗಂಗೂಬಾಯಿ ಮಾನಕರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಸಮಾಜದ ಮುಖಂಡರಾದ ಶಂಭುಗೌಡ ಪಾಟೀಲ, ದ್ಯಾಮಣ್ಣ ಗಾಳಿ ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಅ ಧಿಕಾರಿ ಜಗದೀಶ ಹೆಬ್ಬಳ್ಳಿ ಸ್ವಾಗತಿಸಿದರು. ಮಲ್ಲಿಕಾರ್ಜುನ ಗುಡೂರ ವಂದಿಸಿದರು.