Advertisement

Valmiki; ರಾಯಚೂರು ವಿಶ್ವವಿದ್ಯಾನಿಲಯಕ್ಕೆ ವಾಲ್ಮೀಕಿ ಹೆಸರು: ಸಿಎಂ ಸಿದ್ದರಾಮಯ್ಯ

12:32 AM Oct 18, 2024 | Team Udayavani |

ಬೆಂಗಳೂರು: ರಾಯಚೂರು ವಿಶ್ವವಿದ್ಯಾನಿಲಯವನ್ನು “ಮಹರ್ಷಿ ವಾಲ್ಮೀಕಿ’ ಹೆಸರಿನಲ್ಲಿ ಮರು  ನಾಮ ಕರಣ  ಗೊಳಿಸುವುದರ ಜತೆಗೆ ಪ್ರತೀ ಹೋಬಳಿಗೆ ಒಂದರಂತೆ ವಸತಿ ಶಾಲೆಗಳನ್ನು ತೆರೆಯಲು ನಿರ್ಧರಿಸ ಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಗುರು ವಾರ ಏರ್ಪಡಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಹಾಗೂ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಸಮಾ ರಂಭದಲ್ಲಿ ಅವರು ಮಾತನಾಡಿದರು.

ಪ್ರಸ್ತುತ ವರ್ಷದಲ್ಲಿ 20 ವಸತಿ ಶಾಲೆಗಳನ್ನು ಆರಂಭಿಸ ಲಾಗುತ್ತಿದೆ. ಅದರಲ್ಲಿ 4 ಪರಿಶಿಷ್ಟ ಪಂಗಡದ ಶಾಲೆಗಳಿದ್ದು, ಅವುಗಳಿಗೆ ಮಹರ್ಷಿ ವಾಲ್ಮೀಕಿ ಹೆಸರಿಡಲಾಗುವುದು. ರಾಜ್ಯದಲ್ಲಿ ಪರಿಶಿಷ್ಟ ಸಮುದಾಯದ ಜನಸಂಖ್ಯೆಗೆ ಅನು ಗುಣವಾಗಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆ ರೂಪಿಸಿ ಆಯವ್ಯಯದಲ್ಲಿ ಅನುದಾನ ಮೀಸಲಿಟ್ಟಿದ್ದು ನಮ್ಮದೇ ಸರಕಾರ. ತಳ ಸಮುದಾಯಗಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ವಸತಿ ಶಾಲೆಗಳನ್ನು ಮೊದಲು ಆರಂಭಿಸಿದ್ದು ನಾನು. ಈಗ ವಾಲ್ಮೀಕಿ ಅವರಿಗೆ ಗೌರವ ಸೂಚಕವಾಗಿ ರಾಯಚೂರು ವಿ.ವಿ.ಗೆ ಮರು ನಾಮಕರಣ ಮಾಡಲಾಗುವುದು. ಜತೆಗೆ ಮುಂದಿನ 2 ವರ್ಷದೊಳಗೆ ರಾಜ್ಯದ ಎಲ್ಲ ಹೋಬಳಿ ಕೇಂದ್ರಗಳಲ್ಲೂ ವಸತಿ ಶಾಲೆ ತೆರೆಯಲಾಗುವುದು ಎಂದು ಭರವಸೆ ನೀಡಿದರು.

ದೇಶದಲ್ಲಿ ಮಹಾನ್‌ ಕಾವ್ಯಗಳಾದ ಮಹಾಭಾರತ ಬರೆದ ವ್ಯಾಸರು, ರಾಮಾಯಣ ರಚಿಸಿದ ಮಹರ್ಷಿ ವಾಲ್ಮೀಕಿ, ಶಾಕುಂತಲಾ ನಾಟಕ ಬರೆದ ಕಾಳಿದಾಸ ಎಲ್ಲರೂ ತಳಸಮುದಾಯದವರೇ. ಶೂದ್ರರು, ಶೋಷಿತರಿಗೆ ಸಂಸ್ಕೃತ ಕಲಿಕೆ ನಿಷಿದ್ಧವಾಗಿದ್ದ ಹೊತ್ತಿನಲ್ಲೇ ಮಹರ್ಷಿ ವಾಲ್ಮೀಕಿ ಅವರು ಸಂಸ್ಕೃತ ಕಲಿತು 24 ಸಾವಿರ ಶ್ಲೋಕವುಳ್ಳ ಜಗತøಸಿದ್ಧ ರಾಮಾಯಣ ಮಹಾಕಾವ್ಯ ರಚಿಸಿದ್ದಾರೆ. ಆದರೆ ವಾಲ್ಮೀಕಿ ದರೋಡೆ ಮಾಡಿಕೊಂಡಿದ್ದ ಎಂದೆಲ್ಲ ಕಥೆ ಕಟ್ಟಿದರು. ಹಾಗಿದ್ದಲ್ಲಿ ಇಂತಹ ಮಹಾನ್‌ ಕಾವ್ಯ ರಚಿಸಲು ಸಾಧ್ಯವಾಗುತ್ತಿತ್ತೇ ಎಂದು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ಲೋಕೋ ಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ, ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ಮತ್ತಿತರರು ಉಪಸ್ಥಿತರಿದ್ದರು.

ಐವರಿಗೆ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ
ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಐವರು ಸಾಧಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಿದರು. ಬುಡಕಟ್ಟು ಕ್ಷೇತ್ರದಲ್ಲಿ ದುಡಿದ ಚಿತ್ರದುರ್ಗದ ಗಡ್ಡದಾರ ಹಟ್ಟಿಯ ಕಿಲಾರಿ ಜೋಗಯ್ಯ, ಬೆಳಗಾವಿಯ ರಾಜಶೇಖರ ತಳವಾರ, ಬೆಂಗಳೂರಿನ ಕೆ.ಎಸ್‌. ಮೃತ್ಯುಂಜಯ, ಚಾಮರಾಜನಗರದ ರತ್ನಾ ಎಸ್‌. ಹಾಗೂ ವಿಜಯನಗರದ ರಂಗಭೂಮಿ ಕಲಾವಿದೆ ರತ್ನಮ್ಮ ಬಿ. ಸೋಗಿ ಅವರಿಗೆ ಪ್ರಶಸ್ತಿಯ ಜತೆಗೆ 20 ಗ್ರಾಂ ಬಂಗಾರದ ಪದಕ ಹಾಗೂ 5 ಲಕ್ಷ ರೂ. ನಗದು ನೀಡಿ ಗೌರವಿಸಲಾಯಿತು.

Advertisement

ಅದ್ದೂರಿ ಮೆರವಣಿಗೆ
ಮಹರ್ಷಿ ವಾಲ್ಮೀಕಿ ಜಯಂತಿ ಅಂಗವಾಗಿ ವಿಧಾನಸೌಧ ಮುಂಭಾಗ ಶಾಸಕರ ತಪೋವನದಲ್ಲಿರುವ ಮಹರ್ಷಿ ವಾಲ್ಮೀಕಿ ಪ್ರತಿಮೆಗೆ ಸಿಎಂ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ಸಲ್ಲಿಸಿದರು. ಕಾರ್ಯಕ್ರಮಕ್ಕೆ ಮೊದಲು ಬಸವಗುಡಿಯ ಬಸವೇಶ್ವರ ವೃತ್ತದಿಂದ ಅಲಂಕೃತ ವಾಹನದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರವನ್ನು ಅದ್ದೂರಿ ಮೆರವಣಿಗೆ ಮೂಲಕ ಕರೆತರಲಾಯಿತು. ವೀರಗಾಸೆ, ಸೋಮನಕುಣಿತ, ಚೆಂಡೆವಾದನ ಸೇರಿದಂತೆ ವಿವಿಧ ಕಲಾತಂಡಗಳು ಹಾಗೂ ಬುಡಕಟ್ಟು ಸಮುದಾಯದ ವೇಷಭೂಷಣಗಳು ಮೆರವಣಿಗೆಗೆ ರಂಗು ತುಂಬಿದವು. ರಸ್ತೆ ಮಾರ್ಗದಲ್ಲಿ ಜನತೆ ಮೆರವಣಿಗೆಯನ್ನು ಕಣ್ತುಂಬಿಕೊಂಡು ಸಂಭ್ರಮಿಸಿದರು.

ಮುಖ್ಯಮಂತ್ರಿ ಹೇಳಿದ್ದು
ಪ್ರಸಕ್ತ ವರ್ಷ ಒಟ್ಟು 20 ವಸತಿ ಶಾಲೆ ಆರಂಭ
ಈ ಪೈಕಿ 4 ಪರಿಶಿಷ್ಟ ಪಂಗಡದ ವಸತಿ ಶಾಲೆಗೆ ವಾಲ್ಮೀಕಿ ಹೆಸರು
ತಳ ಸಮುದಾಯಕ್ಕೆ ಗುಣಮಟ್ಟದ ಶಿಕ್ಷಣ ಉದ್ದೇಶ
ಮಹಾಕಾವ್ಯ ರಾಮಾಯಣ, ಮಹಾಭಾರತ ಬರೆದವರೆಲ್ಲ ತಳ ಸಮುದಾಯವರು

Advertisement

Udayavani is now on Telegram. Click here to join our channel and stay updated with the latest news.

Next