ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ನೂರಾರು ಕೋಟಿ ರೂ. ಅಕ್ರಮ ಪ್ರಕರಣದಲ್ಲಿ ಕಳೆದ 3 ತಿಂಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಮಾಜಿ ಸಚಿವ ನಾಗೇಂದ್ರ ಬುಧವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಸೋಮವಾರವಷ್ಟೇ 82ನೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಾಗೇಂದ್ರಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಬುಧವಾರ ಬೆಳಗ್ಗೆ 9 ಗಂಟೆಗೆ ನಾಗೇಂದ್ರ ಅವರ ಜಾಮೀನು ಆದೇಶ ಪ್ರತಿ ಜೈಲಿನ ಮುಖ್ಯ ಅಧೀಕ್ಷಕರಿಗೆ ತಲುಪಿತ್ತು. ಬಳಿಕ ಕೆಲವೊಂದು ಕಾನೂನು ಪ್ರಕ್ರಿಯೆ ಮುಗಿಸಿ 10.30ರ ಸುಮಾರಿಗೆ ಜೈಲಿನಿಂದ ನಾಗೇಂದ್ರ ಅವರನ್ನು ಬಿಡುಗಡೆ ಮಾಡಲಾಯಿತು.
ಬಳ್ಳಾರಿ ಹಾಗೂ ಉತ್ತರ ಕರ್ನಾಟಕ ಭಾಗದಿಂದ ನಾಗೇಂದ್ರ ಅವರ ಸ್ವಾಗತಕ್ಕೆ ಆಗಮಿಸಿದ ಹತ್ತಾರು ಮಂದಿ ಅಭಿಮಾನಿಗಳು ಹಾಗೂ ಬೆಂಬಲಿಗರು ಜೈಲಿನ ಚೆಕ್ ಪೋಸ್ಟ್ ಬಳಿ ಮುಂಜಾನೆಯೇ ಜಮಾಯಿಸಿದ್ದರು. ನಾಗೇಂದ್ರ ಕಾರಿನಲ್ಲಿ ಬರುತ್ತಿದ್ದಂತೆ ಹೂವಿನ ಹಾರ ಹಾಕಿ ಸ್ವಾಗತಿಸಿದರು. ಆ ಬಳಿಕ ಬೂದಕುಂಬಳಕಾಯಿ ಒಡೆದು ದೃಷ್ಟಿ ತೆಗೆದರು. ಬಳಿಕ ನಾಗೇಂದ್ರ ನಗು ಮುಖದಲ್ಲೇ ತಮ್ಮ ಬೆಂಬಲಿಗರ ಕುಶಲೋಪರಿ ವಿಚಾರಿಸಿ ಕಾರಿನಲ್ಲಿ ತೆರಳಿದರು.
ಸಚಿವ ಜಮೀರ್ ಭೇಟಿ
ನಾಗೇಂದ್ರ ಅವರು ಬುಧವಾರ ಬಿಡುಗಡೆಯಾಗುತ್ತಿದ್ದಂತೆ ಸಚಿವ ಜಮೀರ್ ಅಹಮದ್ ನಿವಾ ಸ ಕ್ಕೆ ತೆರಳಿದರು. ಅನಂತರ ಪರಸ್ಪರ ಹಸ್ತಲಾಘವ ಮಾಡಿ ಉಭಯ ಕುಶಲೋಪರಿ ವಿಚಾರಿಸಿದರು. ಈ ವೇಳೆ ಬಳ್ಳಾರಿ ಜಿಲ್ಲೆಯ ಸಂಡೂರು ಉಪಚುನಾವಣೆ ಕುರಿತು ಚರ್ಚೆ ನಡೆಸಿದರು ಎನ್ನಲಾಗಿದೆ.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹಮದ್, ಈಗ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗೇಂದ್ರ ಅವರಿಗೆ ಜಾಮೀನು ಸಿಕ್ಕಿದೆ. ಟೈಗರ್ ಈಸ್ ಬ್ಯಾಕ್. ಅವರ ನೇತೃತ್ವದಲ್ಲೇ ಚುನಾವಣೆ ಎದುರಿಸಲಾಗುವುದು ಎಂದು ಹೇಳಿದರು.