Advertisement

Siddaramaiah ವಾಲ್ಮೀಕಿ ಆದರ್ಶ ಪಾಲಿಸಿ ರಾಜೀನಾಮೆ ನೀಡಲಿ: ಕ್ಯಾ| ಚೌಟ

01:35 AM Oct 18, 2024 | Team Udayavani |

ಮಂಗಳೂರು: ವಾಲ್ಮೀಕಿ ನಿಗಮ ಹಗರಣದ ಆರೋಪಿ ಮಾಜಿ ಸಚಿವ ನಾಗೇಂದ್ರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ವಿಜಯೋತ್ಸವದ ರೀತಿಯಲ್ಲಿ ಅವರಿಗೆ ಶಾಲು ಹಾಕಿರುವುದನ್ನು ನೋಡಿದಾಗ ಹಗರಣದಲ್ಲಿ ಸಿಎಂ ಪ್ರೇರಣೆ ಇರುವಂತೆ ಭಾಸವಾಗುತ್ತಿದೆ. ಹೀಗಾಗಿ ವಾಲ್ಮೀಕಿ ದಿನಾಚರಣೆ ಪ್ರಯುಕ್ತ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ತಮ್ಮ ಮೇಲಿನ ಆರೋಪಗಳ ಪಾರದರ್ಶಕ ತನಿಖೆಗೆ ಪೂರಕವಾಗಿ ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಸಂಸದ ಕ್ಯಾ| ಬ್ರಿಜೇಶ್‌ ಚೌಟ ಆಗ್ರಹಿಸಿದ್ದಾರೆ.

Advertisement

ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ನಿಗಮದ ಹಣವನ್ನು ತೆಲಂಗಾಣ ಸಹಿತ ವಿವಿಧ ಕ್ಷೇತ್ರದ ಚುನಾವಣೆಗೆ ಬಳಸಿದ ಬಗ್ಗೆ ಗೊತ್ತಾಗಿದೆ. ಸದ್ಯ ಕಾಂಗ್ರೆಸ್‌ ಪಕ್ಷಕ್ಕೆ ಕರ್ನಾಟಕವೇ ಎಟಿಎಂ ಆಗಿದ್ದು, ಈಗ ಮಹಾರಾಷ್ಟ್ರ ಚುನಾವಣೆ ನಡೆಯುವ ಕಾರಣದಿಂದ ಯಾವ ನಿಗಮದ ಕಡೆಗೆ ಸಿಎಂ ದೃಷ್ಟಿ ಇದೆಯೋ ಗೊತ್ತಿಲ್ಲ. ಮುಖ್ಯಮಂತ್ರಿಗಳು ವಾಲ್ಮೀಕಿ ಹಗರಣದ ಎ1 ಆರೋಪಿ ನಾಗೇಂದ್ರ ಅವರಿಂದ ಸಲಹೆ ಸೂಚನೆ ಪಡೆದಿರುವ ಸಾಧ್ಯತೆಗಳೂ ಇವೆ ಎಂದು ಆರೋಪಿಸಿದರು.

ವಾಲ್ಮೀಕಿ ಅವರ ಆದರ್ಶಗಳು, ತಮ್ಮ ಬದುಕಿನಲ್ಲಿ ಮಾಡಿದ ಸಾಧನೆಗಳು ಆದರ್ಶ ಆಗಬೇಕಾಗಿತ್ತು. ಆದರೆ ಕಾಂಗ್ರೆಸ್‌ ಪಕ್ಷ ಪರಿಶಿಷ್ಟ ಪಂಗಡದ ಅಭ್ಯುದಯಕ್ಕಾಗಿ ಮೀಸಲಿಟ್ಟ ಹಣವನ್ನು ಚುನಾವಣೆಗೆ ಬಳಸಿಕೊಂಡಿರುವುದು ರಾಷ್ಟ್ರದಲ್ಲೇ ಮೊದಲ ಬಾರಿಗೆ ನಡೆದಿರುವಾಗ ವಾಲ್ಮೀಕಿ ದಿನಾಚರಣೆಯನ್ನು ಬೇಸರದಿಂದ ಆಚರಿಸಬೇಕಾಗಿ ಬಂದಿದೆ ಎಂದರು.

ಮೇಯರ್‌ ಮನೋಜ್‌ ಕುಮಾರ್‌, ಪ್ರಮುಖರಾದ ಕ್ಯಾ|ಗಣೇಶ್‌ ಕಾರ್ಣಿಕ್‌, ಪ್ರೇಮಾನಂದ ಶೆಟ್ಟಿ, ಕದ್ರಿ ಮನೋಹರ್‌ ಶೆಟ್ಟಿ, ಯತೀಶ್‌ ಆರ್ವರ್‌, ಸಂಜಯ್‌ ಪ್ರಭು ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next